‘ಡಾ. ಶಿವರಾಜ್ಕುಮಾರ್ ವೃತ್ತ’: ಮಾನ್ಯತಾ ರೆಸಿಡೆನ್ಸಿ ಸರ್ಕಲ್ಗೆ ಶಿವಣ್ಣನ ಹೆಸರಿಟ್ಟ ನಿವಾಸಿಗಳು
Dr. Shiva Rajkumar Circle: ಹಲವು ವರ್ಷಗಳಿಂದ ಶಿವರಾಜ್ಕುಮಾರ್ ಅವರು ಮಾನ್ಯತಾ ರೆಸಿಡೆನ್ಸಿಯಲ್ಲಿ ವಾಸವಾಗಿದ್ದಾರೆ. ಅವರಿಗೆ ಅಲ್ಲಿನ ನಿವಾಸಿಗಳು ವಿಶೇಷವಾಗಿ ಗೌರವ ಸೂಚಿಸಲು ಸಜ್ಜಾಗಿದ್ದಾರೆ.
ಅಭಿಮಾನಿಗಳ ನೆಚ್ಚಿನ ನಟ ಶಿವರಾಜ್ಕುಮಾರ್ (Shivarajkumar) ಅವರಿಗೆ ಜುಲೈ 12ರಂದು ಜನ್ಮದಿನದ ಸಂಭ್ರಮ. ಆದರೆ ಈ ಬಾರಿ ಅವರು ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುವ ಸಾಧ್ಯತೆ ಕಡಿಮೆ. ಅಪ್ಪು ಅಗಲಿಕೆಯ ನೋವು ಹಸಿಯಾಗಿರುವ ಕಾರಣ ಅವರು ಬರ್ತ್ಡೇ ಸೆಲೆಬ್ರೇಟ್ ಮಾಡಿಕೊಳ್ಳುತ್ತಿಲ್ಲ ಎನ್ನಲಾಗಿದೆ. ಆದರೂ ಅಭಿಮಾನಿಗಳು ಹಲವು ಬಗೆಯಲ್ಲಿ ಶಿವಣ್ಣನ ಹುಟ್ಟುಹಬ್ಬವನ್ನು (Shivarajkumar Birthday) ಆಚರಿಸಲು ಸಿದ್ಧರಾಗಿದ್ದಾರೆ. ಈ ವರ್ಷ ‘ಹ್ಯಾಟ್ರಿಕ್ ಹೀರೋ’ 60ನೇ ವಸಂತಕ್ಕೆ ಕಾಲಿಡಲಿದ್ದಾರೆ ಎಂಬುದು ವಿಶೇಷ. ಈ ಸಂದರ್ಭದಲ್ಲಿ ಅವರ ಹೆಸರನ್ನು ಬೆಂಗಳೂರಿನ ಮಾನ್ಯತಾ ರೆಸಿಡೆನ್ಸಿಯ (Manyata Residency) ವೃತ್ತವೊಂದಕ್ಕೆ ಇಡಲು ತೀರ್ಮಾನಿಸಲಾಗಿದೆ. ಇದು ಶಿವರಾಜ್ಕುಮಾರ್ ಅಭಿಮಾನಿಗಳಿಗೆ ಹೆಮ್ಮೆ ತಂದಿದೆ. ಈ ಕುರಿತು ‘ಟೈಮ್ಸ್ ಆಫ್ ಇಂಡಿಯಾ’ ವರದಿ ಪ್ರಕಟಿಸಿದೆ.
ಹಲವು ವರ್ಷಗಳಿಂದ ಶಿವರಾಜ್ಕುಮಾರ್ ಅವರು ಮಾನ್ಯತಾ ರೆಸಿಡೆನ್ಸಿಯಲ್ಲಿ ವಾಸವಾಗಿದ್ದಾರೆ. ಅಲ್ಲಿನ ನಿವಾಸಿಗಳ ಜೊತೆ ಅವರು ಸ್ನೇಹಮಯವಾಗಿ ನಡೆದುಕೊಳ್ಳುತ್ತಾರೆ. ಹಾಗಾಗಿ ಶಿವಣ್ಣ ಎಂದರೆ ಮಾನ್ಯತಾ ರೆಸಿಡಿನ್ಸಿಯ ಎಲ್ಲರಿಗೂ ಅಚ್ಚುಮೆಚ್ಚು. ತಮ್ಮ ಏರಿಯಾದ ಹೆಮ್ಮೆಯ ನಟನಿಗೆ ಗೌರವ ಸಲ್ಲಿಸುವ ಸಲುವಾಗಿ ಅಲ್ಲಿನ ವೃತ್ತಕ್ಕೆ ‘ಡಾ. ಶಿವರಾಜ್ಕುಮಾರ್ ವೃತ್ತ’ ಎಂದು ಹೆಸರು ಇಡಲು ತೀರ್ಮಾನಿಸಲಾಗಿದೆ.
ಈಗಾಗಲೇ ಬೆಂಗಳೂರಿನಲ್ಲಿ ಡಾ. ರಾಜ್ಕುಮಾರ್ ರಸ್ತೆ ಇದೆ. ಪುನೀತ್ ರಾಜ್ಕುಮಾರ್ ನಿಧನದ ನಂತರ ಕರುನಾಡಿನ ಅನೇಕ ಕಡೆಗಳಲ್ಲಿನ ವೃತ್ತ, ರಸ್ತೆ, ಪಾರ್ಕ್ಗಳಿಗೆ ಅಪ್ಪು ಹೆಸರನ್ನು ಇಡಲಾಯಿತು. ಆ ಮೂಲಕ ಅವರ ಹೆಸರನ್ನು ಅಭಿಮಾನಿಗಳು ಶಾಶ್ವತವಾಗಿಸಿದರು. ಮಾನ್ಯತಾ ರೆಸಿಡೆನ್ಸಿ ನಿವಾಸಿಗಳಿಂದ ಶಿವರಾಜ್ಕುಮಾರ್ ಅವರಿಗೆ ಈ ರೀತಿಯ ಗೌರವ ಸಿಗುತ್ತಿದೆ.
ಶಿವರಾಜ್ ಕುಮಾರ್ ಹುಟ್ಟುಹಬ್ಬಕ್ಕೆ ‘ಘೋಸ್ಟ್’ ಪೋಸ್ಟರ್:
ಶಿವಣ್ಣನ ಕೈಯಲ್ಲಿ ಹಲವು ಸಿನಿಮಾಗಳಿವೆ. ಅವರನ್ನು ಚಂದನವನದ ಬ್ಯುಸಿಯೆಸ್ಟ್ ನಟ ಅಂತ ಕರೆಯಬಹುದು. ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಅವರು ಒಪ್ಪಿಕೊಳ್ಳುತ್ತಿದ್ದಾರೆ. ಶಿವರಾಜ್ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ಆ ಎಲ್ಲ ಚಿತ್ರತಂಡಗಳಿಂದ ವಿಶೇಷ ಗಿಫ್ಟ್ ಸಿಗಲಿದೆ. ವಿವಿಧ ಪೋಸ್ಟರ್, ಟೀಸರ್ ಬಿಡುಗಡೆ ಆಗಲಿದೆ. ಆ ಪೈಕಿ ‘ಘೋಸ್ಟ್’ ಚಿತ್ರತಂಡ ಸ್ಪೆಷಲ್ ಅನೌನ್ಸ್ಮೆಂಟ್ ಮಾಡಿದೆ. ಕಿಚ್ಚ ಸುದೀಪ್ ಅವರಿಂದ ಹೊಸ ಪೋಸ್ಟರ್ ಬಿಡುಗಡೆ ಮಾಡಿಸುವುದಾಗಿ ಚಿತ್ರತಂಡ ತಿಳಿಸಿದೆ.
ಇದನ್ನೂ ಓದಿ: ‘ಪಾಸ್ಪೋರ್ಟ್ನಲ್ಲಿ ನನ್ನ ಹೆಸರು ಹೀಗಿಲ್ಲ’; ಅಸಲಿ ಹೆಸರು ರಿವೀಲ್ ಮಾಡಿದ ಶಿವರಾಜ್ಕುಮಾರ್
ಶಿವರಾಜ್ಕುಮಾರ್ ನಟನೆಯ ‘ಬೈರಾಗಿ’ ಸಿನಿಮಾ ಇತ್ತೀಚೆಗೆ ತೆರೆಕಂಡಿತು. ‘ನೀ ಸಿಗೋವರೆಗೂ’, ‘ವೇದ’, ‘ಘೋಸ್ಟ್’, ‘ಜೈಲರ್’ ಮುಂತಾದ ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ. ಈ ಎಲ್ಲ ಸಿನಿಮಾಗಳ ಮೇಲೆ ಅಭಿಮಾನಿಗಳಿಗೆ ಹೆಚ್ಚು ನಿರೀಕ್ಷೆ ಇದೆ.