‘ಪ್ರಯತ್ನ ಎಂದಿನಂತೆ ಮುಂದುವರಿಸುತ್ತೇವೆ’: ಗೀತಾ ಸೋಲಿನ ಬಳಿಕ ಶಿವಣ್ಣ ಪ್ರತಿಕ್ರಿಯೆ

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್​ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಗೀತಾ ಶಿವರಾಜ್​ಕುಮಾರ್​ ಅವರು ಸೋಲು ಅನುಭವಿಸಿದ್ದಾರೆ. ಅವರ ಪರವಾಗಿ ಪತಿ ಶಿವರಾಜ್​ಕುಮಾರ್​ ಅವರು ಭರ್ಜರಿ ಪ್ರಚಾರ ಮಾಡಿದ್ದರು. ಆದರೆ ಗೀತಾ ಅವರಿಗೆ ಗೆಲುವು ಸಿಗಲಿಲ್ಲ. ಈ ಬಗ್ಗೆ ಶಿವರಾಜ್​ಕುಮಾರ್​ ಅವರು ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

‘ಪ್ರಯತ್ನ ಎಂದಿನಂತೆ ಮುಂದುವರಿಸುತ್ತೇವೆ’: ಗೀತಾ ಸೋಲಿನ ಬಳಿಕ ಶಿವಣ್ಣ ಪ್ರತಿಕ್ರಿಯೆ
ಶಿವರಾಜ್​ಕುಮಾರ್​, ಗೀತಾ

Updated on: Jun 04, 2024 | 9:00 PM

ಲೋಕಸಭಾ ಚುನಾವಣಾ ಫಲಿತಾಂಶ (Lok Sabha Elections Result) ಹೊರಬಿದ್ದಿದ್ದು ಗೀತಾ ಶಿವರಾಜ್​ಕುಮಾರ್​ ಅವರು ಸೋಲು ಕಂಡಿದ್ದಾರೆ. ಕಾಂಗ್ರೆಸ್​ ಅಭ್ಯರ್ಥಿಯಾಗಿ ಶಿವಮೊಗ್ಗದಲ್ಲಿ ಗೀತಾ ಅವರು ಸ್ಪರ್ಧಿಸಿದ್ದರು. ಅವರ ಪರವಾಗಿ ನಟ ಶಿವರಾಜ್​ಕುಮಾರ್​ ಅವರು ಸಿಕ್ಕಾಪಟ್ಟೆ ಪ್ರಚಾರ ಮಾಡಿದ್ದರು. ಇಂದಿನ (ಜೂನ್​ 4) ಫಲಿತಾಂಶದಿಂದ ಗೀತಾ ಶಿವರಾಜ್​ಕುಮಾರ್​ (Geetha Shivarajkumar) ಅವರ ಅಭಿಮಾನಿಗಳಿಗೆ ಬೇಸರ ಆಗಿದೆ. ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರು ಜಯ ಸಾಧಿಸಿದ್ದಾರೆ. ಚುನಾವಣಾ ಫಲಿತಾಂಶದ ಬಗ್ಗೆ ಶಿವರಾಜ್​ಕುಮಾರ್ (Shivarajkumar) ಅವರು ಸೋಶಿಯಲ್​ ಮೀಡಿಯಾ ಮೂಲಕ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

‘ಧನ್ಯವಾದಗಳು… ಫಲಿತಾಂಶಗಳು ನಮ್ಮ ಕಡೆಯಾಗದಿದ್ದರೂ ನಿಮ್ಮೂಂದಿಗಿನ ಈ ಪ್ರಯಾಣ ಮತ್ತು ನಮ್ಮ ಜನರ ಅಚಲವಾದ ಬೆಂಬಲಕ್ಕಾಗಿ ನಾವು ಸದಾ ಕೃತಜ್ಞರಾಗಿರುತ್ತೇವೆ. ಮತದಾರನ ನಿರ್ಣಯಕ್ಕೆ ತಲೆ ಬಾಗುತ್ತಾ, ನಾವು ಭವಿಷ್ಯದ ಬದಲಾವಣೆಗಾಗಿ ಪ್ರಯತ್ನಿಸುವುದನ್ನು ಎಂದಿನಂತೆಯೇ ಮುಂದುವರಿಸುತ್ತೇವೆ. ತಮ್ಮ ಅಚಲವಾದ ಬೆಂಬಲದೊಂದಿಗೆ ಪ್ರೋತ್ಸಾಹಿಸಿದ ಪ್ರತಿಯೊಬ್ಬ ಕಾರ್ಯಕರ್ತರು ಹಾಗೂ ವಿಶ್ವಾಸವನ್ನಿಟ್ಟು ಮತ ಹಾಕಿದ ಪ್ರತಿಯೊಬ್ಬರಿಗೂ ತುಂಬು ಹೃದಯದ ಧನ್ಯವಾದಗಳು’ ಎಂದು ಶಿವರಾಜ್​ಕುಮಾರ್​ ಅವರು ಪೋಸ್ಟ್​ ಮಾಡಿದ್ದಾರೆ.

ಪಡೆದ ಮತಗಳ ವಿವರ:

ಶಿವಮೊಗ್ಗದಲ್ಲಿ ಬಂಡಾಯ ಅಭ್ಯರ್ಥಿಯಾಗಿ ಕೆ.ಎಸ್​. ಈಶ್ವರಪ್ಪ ಸ್ಪರ್ಧಿಸಿದ್ದರು. ಜಿಜೆಪಿಯಿಂದ ಬಿ.ವೈ. ರಾಘವೇಂದ್ರ ಕಣಕ್ಕೆ ಇಳಿದಿದ್ದರು. ಕಾಂಗ್ರೆಸ್​ ಪರವಾಗಿ ಗೀತಾ ಶಿವರಾಜ್​ಕುಮಾರ್​ ಅವರು ಸ್ಪರ್ಧಿಸಿದ್ದರು. ಈ ಮೂವರ ನಡುವೆ ಪೈಪೋಟಿ ಏರ್ಪಟ್ಟಿತ್ತು. ಬಿ.ವೈ. ರಾಘವೇಂದ್ರ ಅವರು 7,78,721 ಮತಗಳನ್ನು ಪಡೆದು ಜಯ ಸಾಧಿಸಿದರು. 2,43,715 ಮತಗಳ ಅಂತರದಲ್ಲಿ ಅವರು ವಿನ್​ ಆದರು. ಗೀತಾ ಶಿವರಾಜ್​ಕುಮಾರ್​ ಅವರು 5,35,006 ಮತಗಳನ್ನು ಪಡೆದರು.

ಇದನ್ನೂ ಓದಿ: ಮೊದಲ ಪ್ರಯತ್ನದಲ್ಲೇ ಗೆಲುವು, ಕಂಗನಾ ರನೌತ್ ಹೇಳಿದ್ದು ಹೀಗೆ

ನಿರ್ಮಾಪಕಿ ಗೀತಾ ಶಿವರಾಜ್​ಕುಮಾರ್​ ಅವರಿಗೆ ಕನ್ನಡ ಚಿತ್ರರಂಗದ ಅನೇಕರು ಬೆಂಬಲ ಸೂಚಿಸಿದ್ದರು. ನಟ ದುನಿಯಾ ವಿಜಯ್ ಮುಂತಾದವರು ವಿವಿಧ ಊರುಗಳಿಗೆ ತೆರಳಿ ಗೀತಾ ಪರವಾಗಿ ಪ್ರಚಾರ ಮಾಡಿದ್ದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಬಹುತೇಕರು ತಮ್ಮ ಬೆಂಬಲ ವ್ಯಕ್ತಪಡಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us