
‘ಹ್ಯಾಟ್ರಿಕ್ ಹೀರೋ’ ಶಿವರಾಜ್‍ಕುಮಾರ್ (Shivarajkumar) ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈಗ ಅವರ ಇನ್ನೊಂದು ಹೊಸ ಸಿನಿಮಾದ ಕೆಲಸ ಆರಂಭ ಆಗಿದೆ. ಹೌದು, ಶಿವರಾಜ್‍ಕುಮಾರ್ ನಟಿಸಲಿರುವ ‘ಡ್ಯಾಡ್’ (Dad) ಸಿನಿಮಾದ ಮುಹೂರ್ತ ಸಮಾರಂಭ ಆಗಸ್ಟ್ 18ರಂದು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿರುವ ನಂದಿ ದೇವಸ್ಥಾನದಲ್ಲಿ ನೆರವೇರಿದೆ. ಈ ಸಿನಿಮಾದ ಮೊದಲ ದೃಶ್ಯಕ್ಕೆ ಗೀತಾ ಶಿವರಾಜ್‍ಕುಮಾರ್ (Geetha Shivarajkumar) ಅವರು ಆರಂಭ ಫಲಕ ತೋರಿದರು ಹಾಗೂ ಚಿತ್ರತಂಡಕ್ಕೆ ಶುಭ ಹಾರೈಸಿದರು. ಟಾಲಿವುಡ್ನ ನಿರ್ದೇಶಕ ಹಾಗೂ ನಿರ್ಮಾಪಕರು ಈ ಸಿನಿಮಾ ಮಾಡುತ್ತಿರುವುದು ವಿಶೇಷ.
ತೆಲುಗಿನ ‘ಭಗವಂತ್ ಕೇಸರಿ’, ‘ಟಕ್ ಜಗದೀಶ್’ ಮುಂತಾದ ಸಿನಿಮಾಗಳನ್ನು ನಿರ್ಮಿಸಿದ ಹರೀಶ್ ಪೆದ್ದಿ ಅವರು ಈಗ ‘ಡ್ಯಾಡ್’ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ. ‘ಮೈರಾ ಕ್ರಿಯೇಷನ್ಸ್’ ಮೂಲಕ ಈ ಸಿನಿಮಾ ನಿರ್ಮಾಣ ಆಗುತ್ತಿದೆ. ‘ಅಸಾಧ್ಯುಡು’, ‘ಮಿಸ್ಟರ್ ನೂಕಯ್ಯ’, ‘ಹಿಡಿಂಬ’ ಸಿನಿಮಾಗಳನ್ನು ನಿರ್ದೇಶಿಸಿರುವ ಅನಿಲ್ ಕನ್ನೆಗಂಟಿ ಅವರು ‘ಡ್ಯಾಡ್’ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಕಥೆ, ಚಿತ್ರಕಥೆ ಕೂಡ ಅವರೇ ಬರೆದಿದ್ದಾರೆ.
ಸುಮಾರು 32 ವರ್ಷಗಳ ಹಿಂದೆ ಶಿವರಾಜ್‍ಕುಮಾರ್ ನಟನೆಯ ‘ಜಗ ಮೆಚ್ಚಿದ ಹುಡುಗ’ ಸಿನಿಮಾ ಸಹ ನಂದಿ ವಿಗ್ರಹದ ಎದುರು ಶುರುವಾಗಿತ್ತು. ಈಗ ಅದೇ ನಂದಿ ದೇವಸ್ಥಾನದಲ್ಲಿ ‘ಡ್ಯಾಡ್’ ಸಿನಿಮಾಗೆ ಚಾಲನೆ ಸಿಕ್ಕಿದೆ. ಈ ಸಿನಿಮಾದಲ್ಲಿ ಶಿವರಾಜ್‍ಕುಮಾರ್ ಜೊತೆ ನಟಿ ಶರ್ಮಿಳಾ ಮಾಂಡ್ರೆ ಅವರು ಅಭಿನಯಿಸುತ್ತಿದ್ದಾರೆ. ಬಿ.ಎಸ್. ಸುಧೀಂದ್ರ ಅವರು ಈ ಸಿನಿಮಾಗೆ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.
ಈ ಸಿನಿಮಾದಲ್ಲಿ ಶಿವರಾಜ್‍ಕುಮಾರ್, ಶರ್ಮಿಳಾ ಮಾಂಡ್ರೆ ಜೊತೆಗೆ ಬೇಬಿ ನಕ್ಷತ್ರ, ಬಾಬು, ಸೂರಜ್ ವೆಂಜರಮೂಡು ಮುಂತಾದವರು ನಟಿಸುತ್ತಿದ್ದಾರೆ. ಕನ್ನಡ, ತೆಲುಗು ಮತ್ತು ಮಲಯಾಳಂನಲ್ಲಿ ಈ ಸಿನಿಮಾ ಮೂಡಿಬರಲಿದೆ. ಅರ್ಜುನ್ ಜನ್ಯ ಅವರ ಸಂಗೀತ ನೀಡುತ್ತಿದ್ದಾರೆ. ಬಿ. ರಾಜಶೇಖರ್ ಅವರು ಈ ಸಿನಿಮಾಗೆ ಛಾಯಾಗ್ರಹಣ ಮಾಡುತ್ತಿದ್ದಾರೆ.
ಇದನ್ನೂ ಓದಿ: ಶಿವರಾಜ್‍ಕುಮಾರ್ ಅವರನ್ನು ಬಾಯ್ತುಂಬ ಹೊಗಳಿದ ಅನುಶ್ರೀ; ಶಿವಣ್ಣನ ರಿಯಾಕ್ಷನ್ ಹೇಗಿತ್ತು ನೋಡಿ
ವಿಶೇಷ ಏನೆಂದರೆ, ‘ಡ್ಯಾಡ್’ ಸಿನಿಮಾದಲ್ಲಿ ಶಿವರಾಜ್‍ಕುಮಾರ್ ಅವರು ಡಾಕ್ಟರ್ ಪಾತ್ರ ಮಾಡುತ್ತಿದ್ದಾರೆ. ಈ ಮೊದಲು ‘ಗಡಿಬಿಡಿ ಕೃಷ್ಣ’ ಸಿನಿಮಾದಲ್ಲಿ ವೈದ್ಯರಾಗಿ ಅವರು ಕಾಣಿಸಿಕೊಂಡಿದ್ದರು. ಈಗ ಮತ್ತೆ ಡಾಕ್ಟರ್ ಪಾತ್ರ ಮಾಡಲು ಸಜ್ಜಾಗಿದ್ದಾರೆ. ಶೀರ್ಷಿಕೆಗೆ ತಕ್ಕಂತೆಯೇ ಈ ಸಿನಿಮಾದಲ್ಲಿ ತಂದೆ ಸೆಂಟಿಮೆಂಟ್ ಕಹಾನಿ ಇರಲಿದೆ. ಅಂದಾಜು 50 ದಿನಗಳ ಕಾಲ ಬೆಂಗಳೂರು ಮತ್ತು ಮೈಸೂರಿನಲ್ಲಿ ಶೂಟಿಂಗ್ ಮಾಡಲಾಗುವುದು ಎಂದು ಚಿತ್ರತಂಡ ಹೇಳಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.