ನಟ ಶಿವರಾಜ್ಕುಮಾರ್ ಅವರು ನೂರಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ, ಅವರು ಎಷ್ಟೇ ಎತ್ತರಕ್ಕೆ ಬೆಳೆದರೂ ಸ್ವಲ್ಪವೂ ಗರ್ವ ಬಂದಿಲ್ಲ. ಅವರು ಎಲ್ಲರ ಜತೆಗೆ ಸಾಮಾನ್ಯರಂತೆ ಬೆರೆಯುತ್ತಾರೆ. ಅಭಿಮಾನಿಗಳಿಗೆ ಅವರು ಬೇಸರ ಮಾಡಿದ ಉದಾಹರಣೆಯೇ ಇಲ್ಲ. ಈಗ ಶಿವರಾಜ್ಕುಮಾರ್ ಅವರು ಅಭಿಮಾನಿಯ ಬೈಕ್ ಓಡಿಸಿ ಸುದ್ದಿಯಾಗಿದ್ದಾರೆ. ಈ ವಿಡಿಯೋ ಕೂಡ ವೈರಲ್ ಆಗುತ್ತಿದೆ.
ಹೌದು, ಶಿವರಾಜ್ಕುಮಾರ್ ಅಭಿಮಾನಿಯೋರ್ವ ಹೊಸ ಬೈಕ್ ಖರೀಸಿದ್ದರು. ತಮ್ಮ ಬೈಕ್ ಅನ್ನು ಶಿವಣ್ಣ ರೈಡ್ ಮಾಡಬೇಕು ಎಂಬುದು ಅವರ ಕನಸಾಗಿತ್ತು. ಈ ಕಾರಣಕ್ಕೆ ಶಿವರಾಜ್ಕುಮಾರ್ ಬಳಿ ಬೈಕ್ ತೆಗೆದುಕೊಂಡು ಬಂದಿದ್ದಾರೆ. ಶಿವರಾಜ್ಕುಮಾರ್ ಇದಕ್ಕೆ ನೋ ಎನ್ನಲಿಲ್ಲ. ಬದಲಿಗೆ ಬೈಕ್ ಮೇಲೆ ಆಟೋಗ್ರಾಫ್ ಹಾಕಿ ಈ ಬೈಕ್ ಓಡಿಸಿದ್ದಾರೆ. ಸದ್ಯ, ಈ ವಿಡಿಯೋ ವೈರಲ್ ಆಗುತ್ತಿದೆ. ಶಿವರಾಜ್ಕುಮಾರ್ ಅವರ ಸಿಂಪ್ಲಿಸಿಟಿ ನೋಡಿ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಯುವ ನಟ ಶ್ರೇಯಸ್ಗೆ ಲಾಂಗ್ ಹಿಡಿಯೋದು ಹೇಗೆ ಎನ್ನುವ ಪಾಠವನ್ನು ಶಿವಣ್ಣ ಮಾಡಿದ್ದರು. ಗುಜ್ಜಲ್ ಪುರುಶೋತ್ತಮ್ ನಿರ್ಮಾಣ ಮಾಡುತ್ತಿರುವ ಹಾಗೂ ನಂದ ಕಿಶೋರ್ ನಿರ್ದೇಶನದ ‘ರಾಣ’ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. ಈ ಸಿನಿಮಾಗೆ ಶ್ರೇಯಸ್ ನಾಯಕ. ಇತ್ತೀಚೆಗೆ ಚಿತ್ರತಂಡ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅವರನ್ನು ಭೇಟಿ ಮಾಡಿತ್ತು. ಲಾಂಗ್ ಹೇಗೆ ಹಿಡಿಯಬೇಕು, ಕ್ಯಾಮೆರಾ ಮುಂದೆ ಲಾಂಗ್ ಹಿಡಿದು ಹೇಗೆ ಅಭಿನಯಿಸಬೇಕು ಎನ್ನುವುದನ್ನು ಶ್ರೇಯಸ್ಗೆ ಶಿವರಾಜ್ಕುಮಾರ್ ಹೇಳಿಕೊಟ್ಟಿದ್ದು ವಿಶೇಷವಾಗಿತ್ತು. ‘ರಾಣ’ ಚಿತ್ರಕ್ಕಾಗಿ ಶ್ರೇಯಸ್ ಇದೇ ಮೊದಲ ಬಾರಿಗೆ ಲಾಂಗ್ ಹಿಡಿಯುತ್ತಿದ್ದಾರೆ. ಈ ಕಾರಣಕ್ಕೆ ಹಿರಿಯ ನಟ ಶಿವಣ್ಣನ ಬಳಿ ಟ್ರೇನಿಂಗ್ ಪಡೆದರೆ ಉತ್ತಮ ಎನ್ನುವ ಆಲೋಚನೆ ಚಿತ್ರತಂಡದ್ದಾಗಿತ್ತು. ಹೀಗಾಗಿ, ನಿರ್ದೇಶಕ ನಂದ ಕಿಶೋರ್ ಹಾಗೂ ಶ್ರೇಯಸ್ ಹ್ಯಾಟ್ರಿಕ್ ಹೀರೋನನ್ನು ಭೇಟಿ ಆಗಿದ್ದಾರೆ.
‘ಪಾತ್ರ ಎಂದು ಬಂದಾಗ ಎಲ್ಲ ರೀತಿಯ ಕ್ಯಾರೆಕ್ಟರ್ಗಳನ್ನೂ ಮಾಡಬೇಕು. ನನಗಿಂತ ಉತ್ತಮವಾಗಿ ಮಚ್ಚು ಹಿಡಿಯವವರು ಇದ್ದಾರೆ. ಪ್ರತಿ ಪಾತ್ರಕ್ಕೂ ಒಂದು ಆ್ಯಟಿಟ್ಯೂಡ್ ಇರುತ್ತದೆ. ಅದು ತುಂಬಾನೇ ಮುಖ್ಯ. ನಾನು ಮಚ್ಚು ಹಿಡಿದೆ, ಅದಕ್ಕೆ ಸಿನಿಮಾ ಹಿಟ್ ಆಯಿತು ಎಂದು ಹೇಳೋಕಾಗಲ್ಲ. ನಾನು ಸಿನಿಮಾದಲ್ಲಿ ಮಚ್ಚು ಹಿಡಿದು ನಟಿಸ್ತೀನಿ ನಿಜ. ಆದರೆ, ಅದನ್ನು ಹೇಳಿಕೊಡಿ ಎಂದರೆ ಅದು ಸ್ವಲ್ಪ ಕಷ್ಟದ ಕೆಲಸ’ ಎಂದಿದ್ದರು ಶಿವರಾಜ್ಕುಮಾರ್.
ಇದನ್ನೂ ಓದಿ: ಯುವ ನಟನಿಗೆ ಮಚ್ಚು ಹಿಡಿಯುವ ಪಾಠ ಮಾಡಿದ ಶಿವರಾಜ್ಕುಮಾರ್