
ಇಂದು (ಏಪ್ರಿಲ್ 24) ರಾಜ್ಕುಮಾರ್ (Dr. Rajkumar) ಹಾಗೂ ಅವರ ಅಭಿಮಾನಿಗಳಿಗೆ ವಿಶೇಷ ದಿನ. ಕಾರಣ, ಇಂದು ರಾಜ್ಕುಮಾರ್ ಅವರ ಜನ್ಮದಿನ. ಅಭಿಮಾನಿಗಳು ಈ ದಿನವನ್ನು ವಿಶೇಷವಾಗಿ ಆಚರಿಸುತ್ತಿದ್ದಾರೆ. ರಾಜ್ ಫ್ಯಾಮಿಲಿ ಅಭಿಮಾನಿಗಳಿಗೆ ಈ ದಿನ ಗುಡ್ನ್ಯೂಸ್ ಒಂದು ಸಿಕ್ಕಿದೆ. ಶಿವರಾಜ್ಕುಮಾರ್ ನಟನೆಯ ‘ಘೋಸ್ಟ್’ ಸಿನಿಮಾದ (Ghost Movie) ಫಸ್ಟ್ ಲುಕ್ (ಕಾನ್ಸೆಪ್ಟ್ ಪೋಸ್ಟರ್) ರಿಲೀಸ್ ಮಾಡಲಾಗಿದೆ. ಖ್ಯಾತ ನಿರ್ಮಾಪಕ ಸಂದೇಶ್ ನಾಗರಾಜ್ ನಿರ್ಮಾಣದ ಈ ಸಿನಿಮಾಗೆ ಶ್ರೀನಿ (Director Srini) ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಫಸ್ಟ್ ಲುಕ್ ತುಂಬಾನೇ ಕುತೂಹಲಕಾರಿಯಾಗಿದ್ದು, ಅಭಿಮಾನಿಗಳ ವಲಯದಲ್ಲಿ ನಿರೀಕ್ಷೆ ಹೆಚ್ಚಿದೆ.
ಫಸ್ಟ್ ಲುಕ್ ಸಖತ್ ರಾ ಆಗಿ ಮೂಡಿ ಬಂದಿದೆ. ಶಿವರಾಜ್ಕುಮಾರ್ ಅವರ ಕೈಯಲ್ಲಿ ಎಕೆ47 ಮಾದರಿಯ ಗನ್ ಇದೆ. ಅವರ ಕಡೆಗೆ ಒಂದಷ್ಟು ಗನ್ಗಳು ಮುಖಮಾಡಿವೆ. ಪೋಸ್ಟರ್ನಲ್ಲಿ ಕಂಬಿಗಳನ್ನು ಕೂಡ ತೋರಿಸಲಾಗಿದೆ. ಗನ್ಗಳನ್ನು ನೋಡಿದ ಫ್ಯಾನ್ಸ್ ಇದೊಂದು ಪಕ್ಕಾ ಆ್ಯಕ್ಷನ್ ಸಿನಿಮಾ ಎನ್ನುತ್ತಿದ್ದಾರೆ. ಶಿವಣ್ಣ ಅವರ ವಯಸ್ಸು 60 ಸಮೀಪಿಸಿದೆ. ಆದರೆ, ಅವರ ಎನರ್ಜಿ ಮಾತ್ರ ಸ್ವಲ್ಪವೂ ಕಡಿಮೆ ಆಗಿಲ್ಲ. ಈಗಲೂ ಸಾಕಷ್ಟು ಹುಮ್ಮಸಿನಿಂದ ಆ್ಯಕ್ಷನ್ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಾರೆ. ಈ ಸಿನಿಮಾದಲ್ಲಿ ಅವರು ಯಾವ ರೀತಿಯಲ್ಲಿ ಆ್ಯಕ್ಷನ್ ಮೆರೆಯಲಿದ್ದಾರೆ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.
ಇತ್ತೀಚೆಗೆ ಪ್ಯಾನ್ ಇಂಡಿಯಾ ಸಿನಿಮಾಗಳ ಸಂಖ್ಯೆ ಹೆಚ್ಚುತ್ತಿದೆ. ಸ್ಟಾರ್ ನಟರ ಸಿನಿಮಾಗಳು ಕನ್ನಡದಲ್ಲಿ ಸಿದ್ಧಗೊಂಡು, ಪರ ಭಾಷೆಗೆ ಡಬ್ ಆಗಿ ರಿಲೀಸ್ ಆಗುತ್ತಿದೆ. ‘ಘೋಸ್ಟ್’ ಕೂಡ ಪ್ಯಾನ್ ಇಂಡಿಯಾ ಸಿನಿಮಾ. ಪೋಸ್ಟರ್ನಲ್ಲಿ ಈ ವಿಚಾರವನ್ನು ಚಿತ್ರತಂಡ ಬಿಟ್ಟುಕೊಟ್ಟಿದೆ. ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿ ಭಾಷೆಗಳಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿದೆ. ‘ಘೋಸ್ಟ್’ ಸಂದೇಶ್ ನಾಗರಾಜ್ ಬ್ಯಾನರ್ನಲ್ಲಿ ಮೂಡಿ ಬರುತ್ತಿರುವ 29ನೇ ಸಿನಿಮಾ.
ಈ ಬಗ್ಗೆ ಟ್ವೀಟ್ ಮಾಡಿರುವ ನಿರ್ದೇಶಕ ಶ್ರೀನಿ, ‘ಕನ್ನಡಿಗರ ಸಾರ್ವಕಾಲಿಕ ಆರಾಧ್ಯದೈವ ವರನಟ ಡಾ. ರಾಜ್ಕುಮಾರ್ ಅವರ ಜನ್ಮದಿನದ ಅಂಗವಾಗಿ ನಮ್ಮ ಕರುನಾಡ ಚಕ್ರವರ್ತಿ ಶಿವರಾಜ್ಕುಮಾರ್ ಅವರ ಅಭಿನಯದ ಘೋಸ್ಟ್ ಚಿತ್ರದ ಕಾನ್ಸೆಪ್ಟ್ ಪೋಸ್ಟರ್ ನಿಮ್ಮ ಮುಂದೆ ಅರ್ಪಿಸುತಿದ್ದೇವೆ. ಹರಸಿ ಪ್ರೀತಿಸಿ ಆಶೀರ್ವದಿಸಿ’ ಎಂದು ಕೋರಿದ್ದಾರೆ.
ಇದನ್ನೂ ಓದಿ: Old Monk Review: ಕಾಮಿಡಿ ಪ್ರಿಯರಿಗೆ ನಗುವಿನ ಕಿಕ್ ನೀಡುವ ‘ಓಲ್ಡ್ ಮಾಂಕ್’
‘ಓಲ್ಡ್ ಮಾಂಕ್’ ಗೆದ್ದ ಬಳಿಕ ಶ್ರೀನಿ ಹೊಸ ಚಿತ್ರ ಅನೌನ್ಸ್; ಈ ಬಾರಿ ಶಿವಣ್ಣ, ಸಂದೇಶ್ ನಾಗರಾಜ್ ಜೊತೆ ಸಿನಿಮಾ
Published On - 1:22 pm, Sun, 24 April 22