ಯುವ ನಟನಿಗೆ ಮಚ್ಚು ಹಿಡಿಯುವ ಪಾಠ ಮಾಡಿದ ಶಿವರಾಜ್​ಕುಮಾರ್​

| Updated By: ರಾಜೇಶ್ ದುಗ್ಗುಮನೆ

Updated on: Aug 26, 2021 | 7:31 PM

ಗುಜ್ಜಲ್ ಪುರುಶೋತ್ತಮ್ ನಿರ್ಮಾಣ ಮಾಡುತ್ತಿರುವ ಹಾಗೂ ನಂದ ಕಿಶೋರ್ ನಿರ್ದೇಶನದ ‘ರಾಣ’ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. ಈ ಸಿನಿಮಾಗೆ ಶ್ರೇಯಸ್ ನಾಯಕ.

ಯುವ ನಟನಿಗೆ ಮಚ್ಚು ಹಿಡಿಯುವ ಪಾಠ ಮಾಡಿದ ಶಿವರಾಜ್​ಕುಮಾರ್​
ಯುವ ನಟನಿಗೆ ಮಚ್ಚು ಹಿಡಿಯುವ ಪಾಠ ಮಾಡಿದ ಶಿವರಾಜ್​ಕುಮಾರ್​
Follow us on

ಶಿವರಾಜ್​ಕುಮಾರ್​ ಅಂದಾಕ್ಷಣ ನೆನಪಿಗೆ ಬರೋದು ಲಾಂಗ್​. ‘ಓಂ’ ಸಿನಿಮಾದಲ್ಲಿ ಲಾಂಗ್​ ಹಿಡಿದಿದ್ದರು ಶಿವರಾಜ್​ಕುಮಾರ್​. ಈ ಸಿನಿಮಾ ಸೂಪರ್ ಹಿಟ್​ ಆಗಿತ್ತು. ಇದಕ್ಕೆ ಅವರು ಲಾಂಗ್ ಹಿಡಿದಿದ್ದೇ ಕಾರಣ ಎನ್ನುತ್ತಾರೆ ಅನೇಕರು. ಅವರು ಮಚ್ಚು ಹಿಡಿದರೆ ಸಿನಿಮಾ ಹಿಟ್​ ಆಗೋದು ಪಕ್ಕಾ ಎಂಬ ನಂಬಿಕೆ ಅನೇಕ ನಿರ್ದೇಶಕರು ಹಾಗೂ ನಿರ್ಮಾಪಕರಲ್ಲಿದೆ. ಈಗ ಯುವ ನಟ ಶ್ರೇಯಸ್​ಗೆ ಲಾಂಗ್​ ಹಿಡಿಯೋದು ಹೇಗೆ ಎನ್ನುವ ಪಾಠವನ್ನು ಶಿವಣ್ಣ ಮಾಡಿದ್ದಾರೆ.

ಗುಜ್ಜಲ್ ಪುರುಶೋತ್ತಮ್ ನಿರ್ಮಾಣ ಮಾಡುತ್ತಿರುವ ಹಾಗೂ ನಂದ ಕಿಶೋರ್ ನಿರ್ದೇಶನದ ‘ರಾಣ’ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. ಈ ಸಿನಿಮಾಗೆ ಶ್ರೇಯಸ್ ನಾಯಕ. ಇತ್ತೀಚೆಗೆ ಚಿತ್ರತಂಡ ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್ ಅವರನ್ನು ಭೇಟಿ ಮಾಡಿತ್ತು. ಲಾಂಗ್ ಹೇಗೆ ಹಿಡಿಯಬೇಕು, ಕ್ಯಾಮೆರಾ ಮುಂದೆ ಲಾಂಗ್ ಹಿಡಿದು ಹೇಗೆ ಅಭಿನಯಿಸಬೇಕು ಎನ್ನುವುದನ್ನು ಶ್ರೇಯಸ್​​ಗೆ ಶಿವರಾಜ್​ಕುಮಾರ್​ ಹೇಳಿಕೊಟ್ಟಿದ್ದು ವಿಶೇಷವಾಗಿತ್ತು.

‘ರಾಣ’ ಚಿತ್ರಕ್ಕಾಗಿ ಶ್ರೇಯಸ್​ ಇದೇ ಮೊದಲ ಬಾರಿಗೆ ಲಾಂಗ್​ ಹಿಡಿಯುತ್ತಿದ್ದಾರೆ. ಈ ಕಾರಣಕ್ಕೆ ಹಿರಿಯ ನಟ ಶಿವಣ್ಣನ ಬಳಿ ಟ್ರೇನಿಂಗ್​ ಪಡೆದರೆ ಉತ್ತಮ ಎನ್ನುವ ಆಲೋಚನೆ ಚಿತ್ರತಂಡದ್ದಾಗಿತ್ತು. ಹೀಗಾಗಿ, ನಿರ್ದೇಶಕ ನಂದ ಕಿಶೋರ್ ಹಾಗೂ ಶ್ರೇಯಸ್​ ಹ್ಯಾಟ್ರಿಕ್​ ಹೀರೋನನ್ನು ಭೇಟಿ ಆಗಿದ್ದಾರೆ.

‘ಪಾತ್ರ ಎಂದು ಬಂದಾಗ ಎಲ್ಲ ರೀತಿಯ ಕ್ಯಾರೆಕ್ಟರ್​ಗಳನ್ನೂ ಮಾಡಬೇಕು. ನನಗಿಂತ ಉತ್ತಮವಾಗಿ ಮಚ್ಚು ಹಿಡಿಯವವರು ಇದ್ದಾರೆ. ಪ್ರತಿ ಪಾತ್ರಕ್ಕೂ ಒಂದು ಆ್ಯಟಿಟ್ಯೂಡ್​ ಇರುತ್ತದೆ. ಅದು ತುಂಬಾನೇ ಮುಖ್ಯ. ನಾನು ಮಚ್ಚು ಹಿಡಿದೆ, ಅದಕ್ಕೆ ಸಿನಿಮಾ ಹಿಟ್​ ಆಯಿತು ಎಂದು ಹೇಳೋಕಾಗಲ್ಲ. ನಾನು ಸಿನಿಮಾದಲ್ಲಿ ಮಚ್ಚು ಹಿಡಿದು ನಟಿಸ್ತೀನಿ ನಿಜ. ಆದರೆ, ಅದನ್ನು ಹೇಳಿಕೊಡಿ ಎಂದರೆ ಅದು ಸ್ವಲ್ಪ ಕಷ್ಟದ ಕೆಲಸ’ ಎಂದರು ಶಿವರಾಜ್​ಕುಮಾರ್​.

ನಂತರ ಶ್ರೇಯಸ್​ಗೆ ಲಾಂಗ್​ ಹಿಡಿಯೋದು ಹೇಗೆ ಎನ್ನುವ ತರಬೇತಿ ನೀಡಿದರು. ಜತೆಗೆ ಚಿತ್ರತಂಡಕ್ಕೆ ಶುಭವಾಗಲಿ ಎಂದು ಹಾರೈಸಿದರು.

ಇದನ್ನೂ ಓದಿ: ಶಿವರಾಜ್​ಕುಮಾರ್​ 124ನೇ ಚಿತ್ರಕ್ಕೆ ಅಪ್ಪಟ ಕನ್ನಡ ಶೀರ್ಷಿಕೆ ‘ನೀ ಸಿಗೋವರೆಗೂ’; ಮುಹೂರ್ತಕ್ಕೆ ಕಿಚ್ಚ ಅತಿಥಿ