
ಅರ್ಜುನ್ ಜನ್ಯ (Arjun Janya) ಅವರು ಚೊಚ್ಚಲ ಬಾರಿಗೆ ನಿರ್ದೇಶನ ಮಾಡಿರುವ ‘45’ ಸಿನಿಮಾ (45 Movie) ಬಿಡುಗಡೆಗೆ ಸಜ್ಜಾಗಿದೆ. ಡಿಸೆಂಬರ್ 25ರಂದು ಈ ಸಿನಿಮಾ ರಿಲೀಸ್ ಆಗಲಿದೆ. ಈಗ ಟ್ರೇಲರ್ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಡಿಸೆಂಬರ್ 15ರಂದು ಟ್ರೇಲರ್ ಅನಾವರಣ ಮಾಡಲು ಚಿತ್ರತಂಡ ಸಕಲ ಸಿದ್ಧತೆ ಮಾಡಿಕೊಂಡಿದೆ. ಈ ಬಗ್ಗೆ ಮಾಹಿತಿ ನೀಡಲು ‘45’ ಚಿತ್ರತಂಡ ಸುದ್ದಿಗೋಷ್ಠಿ ನಡೆಸಿತು. ನಿರ್ಮಾಪಕ ರಮೇಶ್ ರೆಡ್ಡಿ ಅವರು ಕೂಡ ಈ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದರು. ಏಕಕಾಲಕ್ಕೆ 8 ಕಡೆಗಳಲ್ಲಿ ಟ್ರೇಲರ್ ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ.
ಈ ಬಗ್ಗೆ ನಿರ್ದೇಶಕ ಅರ್ಜುನ್ ಜನ್ಯ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡರು. ‘ಒಂದು ಪ್ರಮುಖವಾದ ವಿಷಯವನ್ನು ನಿಮ್ಮ ಜೊತೆ ಹಂಚಿಕೊಳ್ಳುತ್ತಿದ್ದೇವೆ. ನಮ್ಮ ಸಿನಿಮಾದ ಟ್ರೇಲರ್ ಡಿಸೆಂಬರ್ 15ರಂದು ಬಿಡುಗಡೆ ಮಾಡುತ್ತೇವೆ. ಇದರ ವಿಶೇಷತೆ ಏನಂದರೆ, ಒಂದು ಇವೆಂಟ್ ಬೆಂಗಳೂರಿನ ವಿದ್ಯಾಪೀಠ ವೃತ್ತದಲ್ಲಿ ನಡೆಯುತ್ತದೆ. ಅದೇ ಸಂದರ್ಭದಲ್ಲಿ ಏಕಕಾಲಕ್ಕೆ ಇನ್ನುಳಿದ 7 ಜಿಲ್ಲೆಗಳಲ್ಲಿ ಈ ಕಾರ್ಯಕ್ರಮದ ನೇರ ಪ್ರಸಾರ ಆಗಲಿದೆ’ ಎಂದು ಅರ್ಜುನ್ ಜನ್ಯ ಹೇಳಿದರು.
‘7 ಜಿಲ್ಲೆಗಳಲ್ಲಿ ಇರುವ ಅಭಿಮಾನಿಗಳಿಗೆ ಪಾಸ್ ನೀಡುತ್ತಿದ್ದೇವೆ. ಆ ಪಾಸ್ ತೆಗೆದುಕೊಂಡು ಚಿತ್ರಮಂದಿರಕ್ಕೆ ಹೋದರೆ ಬೆಂಗಳೂರಿನಲ್ಲಿ ನಡೆಯುವ ಟ್ರೇಲರ್ ಬಿಡುಗಡೆ ಕಾರ್ಯಕ್ರಮದ ಲೈವ್ ನೋಡಬಹುದು. ರಾಜ್ ಬಿ. ಶೆಟ್ಟಿ, ಉಪೇಂದ್ರ, ಶಿವಣ್ಣ ಮಾತನಾಡುವುದನ್ನು ಆ ಜಿಲ್ಲೆಗಳ ಅಭಿಮಾನಿಗಳು ನೇರವಾಗಿ ನೋಡಬಹುದು. ಅವರೆಲ್ಲರಿಗೂ ಇಲ್ಲಿಂದಲೇ ಶಿವಣ್ಣ, ಉಪೇಂದ್ರ, ರಾಜ್ ಬಿ. ಶೆಟ್ಟಿ ವಿಶ್ ಮಾಡುತ್ತಾರೆ’ ಎಂದಿದ್ದಾರೆ ಅರ್ಜುನ್ ಜನ್ಯ.
‘ಎಲ್ಲ ಕಡೆಗಳಲ್ಲಿ ಈ ಬಗ್ಗೆ ವಿಚಾರಿಸಿದ್ದೇವೆ. ಹೀಗೆ ಏಕಕಾಲಕ್ಕೆ 7 ಕಡೆಗಳಲ್ಲಿ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಬಿತ್ತರ ಮಾಡುತ್ತಿರುವುದು ಭಾರತದಲ್ಲೇ ಮೊದಲು. ನೇರ ಪ್ರಸಾರದ ವೇಳೆ ಏನೂ ತೊಂದರೆ ಆಗದ ರೀತಿಯಲ್ಲಿ ತಾಂತ್ರಿಕವಾಗಿ ನಾವು ತುಂಬ ಗಟ್ಟಿಯಾಗಿದ್ದೇವೆ. ಮೈಸೂರು, ಮಂಗಳೂರು, ಶಿವಮೊಗ್ಗ, ತುಮಕೂರು, ದಾವಣಗೆರೆ, ಹೊಸಪೇಟೆ ಮತ್ತು ಹುಬ್ಬಳ್ಳಿಯಲ್ಲಿ ಟ್ರೇಲರ್ ಬಿಡುಗಡೆ ನೇರಪ್ರಸಾರ ಆಗಲಿದೆ’ ಎಂದು ಅರ್ಜುನ್ ಜನ್ಯ ಹೇಳಿದ್ದಾರೆ.
ಇದನ್ನೂ ಓದಿ: 100 ಕೋಟಿ ರೂಪಾಯಿ ಬಜೆಟ್ನಲ್ಲಿ ಸಿದ್ಧವಾಯ್ತು ‘45’ ಸಿನಿಮಾ?
ಅದ್ದೂರಿ ವೆಚ್ಚದಲ್ಲಿ ‘45’ ಸಿನಿಮಾ ನಿರ್ಮಾಣ ಆಗಿದೆ. ಪ್ರಚಾರವನ್ನು ಕೂಡ ಬಹಳ ಗ್ರ್ಯಾಂಡ್ ಆಗಿ ಮಾಡಲಾಗುತ್ತಿದೆ. ಟ್ರೇಲರ್ ಬಿಡುಗಡೆ ಕಾರ್ಯಕ್ರಮವೇ ಅದಕ್ಕೆ ಸಾಕ್ಷಿ. ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ಈ ಚಿತ್ರ ಕೂಡ ಇದೆ. ಈಗಾಗಲೇ ಈ ಸಿನಿಮಾದ ಆಫ್ರೋ ಟಪ್ಪಾಂಗ್ ಹಾಡು ಸೂಪರ್ ಹಿಟ್ ಆಗಿದೆ. ಸಿನಿಮಾ ಮೇಲೆ ಅಭಿಮಾನಿಗಳಿಗೆ ಬಹಳ ನಿರೀಕ್ಷೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 5:06 pm, Fri, 5 December 25