ಕ್ಯಾನ್ಸರ್ ಬಂದ ವಿಚಾರವನ್ನು ಶಿವರಾಜ್​ಕುಮಾರ್​ಗೂ ಹೇಳಿರಲಿಲ್ಲ ಗೀತಾ; ಗೊತ್ತಾಗಿದ್ದು ಹೇಗೆ?

ಶಿವರಾಜ್​ಕುಮಾರ್ ಅವರು ಕ್ಯಾನ್ಸರ್‌ನಿಂದ ಚೇತರಿಸಿಕೊಂಡಿದ್ದಾರೆ. ಮಾರ್ಚ್‌ನಲ್ಲಿ ಕ್ಯಾನ್ಸರ್ ಪತ್ತೆಯಾಗಿತ್ತು. ಪತ್ನಿ ಗೀತಾ ಅವರು ಈ ವಿಷಯವನ್ನು ಬಿ ಗಣಪತಿ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ಬಹಿರಂಗಪಡಿಸಿದ್ದಾರೆ. ಚಿಕಿತ್ಸೆ ಮತ್ತು ಕುಟುಂಬದ ಬೆಂಬಲದಿಂದ ಶಿವಣ್ಣ ಈ ಕಾಯಿಲೆಯನ್ನು ಜಯಿಸಿದ್ದಾರೆ. ಈ ಸುದ್ದಿ ಅಭಿಮಾನಿಗಳಲ್ಲಿ ಸಂತೋಷ ತಂದಿದೆ.

ಕ್ಯಾನ್ಸರ್ ಬಂದ ವಿಚಾರವನ್ನು ಶಿವರಾಜ್​ಕುಮಾರ್​ಗೂ ಹೇಳಿರಲಿಲ್ಲ ಗೀತಾ; ಗೊತ್ತಾಗಿದ್ದು ಹೇಗೆ?
ಗೀತಾ-ಶಿವಣ್ಣ

Updated on: Feb 01, 2025 | 10:48 AM

ಶಿವರಾಜ್​ಕುಮಾರ್ ಅವರು ಈಗ ಕ್ಯಾನ್ಸರ್ ವಿರುದ್ಧ ಹೋರಾಡಿ ಗೆದ್ದು ಬಂದಿದ್ದಾರೆ. ಅವರ ಸ್ಥೈರ್ಯವನ್ನು ಎಲ್ಲರೂ ಕೊಂಡಾಡುತ್ತಿದ್ದಾರೆ. ಶಿವರಾಜ್​ಕುಮಾರ್ ಅವರಿಗೆ ಕ್ಯಾನ್ಸರ್ ಇರೋ ವಿಚಾರ ಗೊತ್ತಾಗಿದ್ದು ಕಳೆದ ಮಾರ್ಚ್​​ನಲ್ಲಿ. ದೇಹದಲ್ಲಿ ಆದ ಒಂದು ಬದಲಾವಣೆಯಿಂದ ಶಿವಣ್ಣನಲ್ಲಿ ಕ್ಯಾನ್ಸರ್ ಇದೆ ಎಂಬ ವಿಚಾರ ಗೊತ್ತಾಗಿತ್ತು. ಈ ವಿಚಾರವನ್ನು ಮುಚ್ಚಿಡಲಾಗಿತ್ತು. ಅಚ್ಚರಿಯ ವಿಚಾರ ಎಂದರೆ ಶಿವರಾಜ್​ಕುಮಾರ್ ಅವರಿಗೂ ಈ ವಿಚಾರವನ್ನು ಗೀತಕ್ಕ ತಿಳಿಸಿರಲಿಲ್ಲ! ಇದು ಅಚ್ಚರಿ ಎನಿಸಿದರೂ ನಿಜ. ಈ ಬಗ್ಗೆ ಗೀತಾ ಅವರು ಮಾತನಾಡಿದ್ದಾರೆ.

ಬಿ ಗಣಪತಿ ಅವರ ಯೂಟ್ಯೂಬ್ ಚಾನೆಲ್​ಗೆ ನೀಡಿದ ಸಂದರ್ಶನದಲ್ಲಿ ಗೀತಾ ಹಾಗೂ ಶಿವರಾಜ್​ಕುಮಾರ್ ಮಾತನಾಡಿದ್ದಾರೆ. ‘ಕಳೆದ ಮಾರ್ಚ್​ ತಿಂಗಳಲ್ಲಿ ಕೊಲ್ಲೂರಿಗೆ ತೆರಳಿದ್ದೆವು. ಮೂತ್ರದ ಬಣ್ಣ ಬದಲಾಗಿತ್ತು. ಮರುದಿನವೇ ಟೆಸ್ಟ್ ಮಾಡಿಸಿದೆವು. ಯಂಗ್ ಡಾಕ್ಟರ್ ಒಬ್ಬರು ಬಂದು ಮಾನಿಟರ್ ನೋಡಿದರು. ಬೇಗ ಟ್ರೀಟ್ ಮಾಡಿಸಿಕೊಳ್ಳಿ ಎಂದು ಹೇಳಿ ಹೊರಟು ಹೋದರು. ವೈದ್ಯರ ಕಣ್ಣಲ್ಲೂ ನೀರಿತ್ತು’ ಎಂದಿದ್ದಾರೆ ಗೀತಾ.

‘ನನ್ನ ಅಳಿಯ ದಿಲೀಪ್ ಬಂದು ವರದಿ ನೋಡಿದ. ಅವನು ಹೀಗಾಗಿದೆ ಎಂದೆ. ಮನೆಯಲ್ಲಿ ಕೆಲವು ಟ್ರೀಟ್​ಮೆಂಟ್ ಮಾಡಲಾಯಿತು. ಈ ವಿಚಾರ ಯಾರಿಗೂ ಗೊತ್ತಿರಲಿಲ್ಲ. ಶಿವರಾಜ್​ಕುಮಾರ್​ಗೆ ಕ್ಯಾನ್ಸರ್ ಇರುವ ವಿಚಾರ ಹೇಳಿರಲಿಲ್ಲ. ಕುಟುಂಬದ ಕೆಲವರಿಗೆ ಮಾತ್ರ ವಿಚಾರ ಗೊತ್ತಿತ್ತು. ಕ್ಯಾನ್ಸರ್ ಇದೆ ಎಂಬ ವಿಚಾರ ಹೇಳಿದರೆ ಅವರು ಹೇಗೆ ತೆಗೆದುಕೊಳ್ಳುತ್ತಾರೆ ಎಂಬುದು ಗೊತ್ತಿರಲಿಲ್ಲ. ಹೀಗಾಗಿ, ಹೇಳಿರಲಿಲ್ಲ. ಬೇರೆ ಕಾರಣ ಹೇಳಿ ಎರಡು ಸರ್ಜರಿ ಮಾಡಲಾಯಿತು’ ಎಂದಿದ್ದಾರೆ ಗೀತಾ.

‘ಮೊದಲೆರಡು ಆಪರೇಷನ್ ಮಾಡಿದ ಬಳಿಕದ ರಿಪೋರ್ಟ್ ನೋಡಿದಾಗ ಅದರಲ್ಲಿ ಕ್ಯಾನ್ಸರ್ ಅಂಶ ಕಾಣಿಸಲೇ ಇಲ್ಲ. ಆದರೆ, ಆ ಬಳಿಕ ಚೆಕ್ ಮಾಡಿದಾಗ ಮತ್ತೆ ಕ್ಯಾನ್ಸರ್ ಕಣ ವೇಗವಾಗಿ ಹರಡುತ್ತಿತ್ತು. ಆ ಬಳಿಕ ಹೇಳಬೇಕಾಯಿತು’ ಎಂದಿದ್ದಾರೆ ಗೀತಾ ಶಿವರಾಜ್​ಕುಮಾರ್.

ಇದನ್ನೂ ಓದಿ: BOSS ಶರ್ಟ್ ಹಾಕಿ ‘ಸರಿಗಮಪ’ ಶೋಗೆ ಬಂದ ಶಿವರಾಜ್​ಕುಮಾರ್

‘ಮೊದಲು ಈ ವಿಚಾರ ಗೊತ್ತಾದಾಗ ನಾನು ಬ್ಲ್ಯಾಂಕ್ ಆಗೋದೆ. ಅವರಿಗೆ ಹೀಗೆ ಆಗಬಾರದಿತ್ತು ಎನಿಸಿತು. ಈ ವಿಚಾರ ಶಿವರಾಜ್​ಕುಮಾರ್​ಗೆ ಗೊತ್ತಾದಾಗ ಸಾಕಷ್ಟು ಅಪ್ಸೆಟ್ ಆದರು. ಇದಕ್ಕೆಲ್ಲ ಟ್ರೀಟ್​ಮೆಂಟ್ ಇದೆ ಎಂದು ಧೈರ್ಯ ತುಂಬಿದೆವು’ ಎಂದು ಗೀತಾ ಹೇಳಿದ್ದಾರೆ. ಈಗ ಶಿವಣ್ಣ ಕ್ಯಾನ್ಸರ್ ಮುಕ್ತರಾಗಿ ಬಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 6:53 am, Sat, 1 February 25