500 ರೂಪಾಯಿ ಅಡ್ವಾನ್ಸ್ ಮತ್ತು ಶಿವರಾಮ ಕಾರಂತರು: ಕಾಸರವಳ್ಳಿ ಹೇಳಿದ ಕತೆ

ಎಸ್‌ಪಿ ವರದರಾಜು ಬಳಗದ ಆಶ್ರಯದಲ್ಲಿ 18ನೇ ವರ್ಷದ ‘ಎಸ್.ಪಿ. ವರದರಾಜು ಪ್ರಶಸ್ತಿ’ ಪ್ರದಾನ ಕಾರ್ಯಕ್ರಮ ಆಯೋಜಿಸಲಾಗಿತ್ತು, ಕಾರ್ಯಕ್ರಮದಲ್ಲಿ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅತಿಥಿಯಾಗಿ ಭಾಗವಹಿಸಿದ್ದರು. ಸಿನಿಮಾನಲ್ಲಿ ಮತ್ತು ಸಿನಿಮಾ ಕರ್ಮಿಗಳಿಗೆ ಇರಬೇಕಾದ ಮೌಲ್ಯಗಳ ಬಗ್ಗೆ ಮಾತನಾಡುತ್ತಾ, ಖ್ಯಾತ ಸಾಹಿತಿ ಶಿವರಾಮ ಕಾರಂತರ ಬಗ್ಗೆ ಒಂದು ಅಪರೂಪದ ಘಟನೆಯನ್ನು ಸ್ಮರಿಸಿಕೊಂಡರು.

500 ರೂಪಾಯಿ ಅಡ್ವಾನ್ಸ್ ಮತ್ತು ಶಿವರಾಮ ಕಾರಂತರು: ಕಾಸರವಳ್ಳಿ ಹೇಳಿದ ಕತೆ
Shivaram Karanth

Updated on: Nov 21, 2026 | 7:41 PM

ಮುಖ್ಯಾಂಶಗಳು

  • ಗಿರೀಶ್ ಕಾಸರವಳ್ಳಿ ಹೇಳಿದ ಕಾರಂತರ ಕತೆ
  • ಮೌಲ್ಯಗಳು ಮುಖ್ಯ ಎಂಬುದಕ್ಕೆ ಉದಾಹರಣೆ
  • ಗಿರೀಶ್ ಕಾಸರವಳ್ಳಿ ಹೇಳಿದ ಕತೆಯೇನು?

ಇತ್ತೀಚೆಗಷ್ಟೆ, ಡಾ ರಾಜ್​​ಕುಮಾರ್ ಅವರ ಸಹೋದರ ಎಸ್​​ಪಿ ವರದರಾಜು ಅವರ ಸ್ಮರಣಾರ್ಥ ಎಸ್‌ಪಿ ವರದರಾಜು ಬಳಗದ ಆಶ್ರಯದಲ್ಲಿ 18ನೇ ವರ್ಷದ ‘ಎಸ್.ಪಿ. ವರದರಾಜು ಪ್ರಶಸ್ತಿ’ ಪ್ರದಾನ ಕಾರ್ಯಕ್ರಮ ಆಯೋಜಿಸಲಾಗಿತ್ತು, ಕಾರ್ಯಕ್ರಮದಲ್ಲಿ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅತಿಥಿಯಾಗಿ ಭಾಗವಹಿಸಿದ್ದರು. ಸಿನಿಮಾನಲ್ಲಿ ಮತ್ತು ಸಿನಿಮಾ ಕರ್ಮಿಗಳಿಗೆ ಇರಬೇಕಾದ ಮೌಲ್ಯಗಳ ಬಗ್ಗೆ ಮಾತನಾಡುತ್ತಾ, ಖ್ಯಾತ ಸಾಹಿತಿ ಶಿವರಾಮ ಕಾರಂತರ ಬಗ್ಗೆ ಒಂದು ಅಪರೂಪದ ಘಟನೆಯನ್ನು ಸ್ಮರಿಸಿಕೊಂಡರು.

ಗಿರೀಶ್ ಕಾಸರವಳ್ಳಿ ಅವರು ಕಾರಂತರ ಕತೆಯೊಂದನ್ನು ಸಿನಿಮಾ ಮಾಡುವ ಉದ್ದೇಶದಿಂದ ಅವರ ಬಳಿ ಕತೆಯ ಹಕ್ಕುಗಳನ್ನು ಕೇಳಿದ್ದರಂತೆ. ಆದರೆ ಕಾಸರವಳ್ಳಿ ಅವರು ಕೇಳಿದ್ದ ಅದೇ ಕತೆಯ ಹಕ್ಕುಗಳಿಗಾಗಿ ನಿರ್ಮಾಪಕರೊಬ್ಬರು ಅದಾಗಲೇ ಕಾರಂತರಿಗೆ 500 ರೂಪಾಯಿ ಮುಂಗಡ ಹಣ ನೀಡಿದ್ದರಂತೆ. ಆದರೆ ಮುಂಗಡ ಹಣ ನೀಡಿದ್ದ ನಿರ್ಮಾಪಕರು ಅಪಘಾತವೊಂದರಲ್ಲಿ ನಿಧನ ಹೊಂದಿದರಂತೆ. ನಿಧನ ಹೊಂದಿದ ಬಳಿಕವೇ ಕಾಸರವಳ್ಳಿ ಅವರು ಕತೆಯ ಹಕ್ಕಿಗಾಗಿ ಕಾರಂತರ ಬಳಿ ಕೇಳಿದ್ದರಂತೆ.

Loading...

ಆದರೆ ಕಾರಂತರು, ಗಿರೀಶ್ ಕಾಸರವಳ್ಳಿ ಅವರಿಗೆ ಪತ್ರ ಬರೆದು, ‘ನೀವು ಕೇಳಿದ ಕತೆಯ ಹಕ್ಕಿಗಾಗಿ ನಿರ್ಮಾಪಕರೊಬ್ಬರು ನನಗೆ 500 ರೂಪಾಯಿ ಮುಂಗಡ ಹಣ ಕೊಟ್ಟಿದ್ದಾರೆ. ಬಾಕಿ ಹಣ ಕೊಡಲೆಂದು ಅವರು ಬರಬೇಕಾದರೆ ಸಕಲೇಶಪುರದ ಬಳಿ ನಡೆದ ಅಪಘಾತದಲ್ಲಿ ಅವರು ತೀರಿಕೊಂಡಿದ್ದಾರೆ. ಹಾಗಾಗಿ, ನಾನು ಅವರ ಕುಟುಂಬದವರನ್ನು ಪತ್ತೆಹಚ್ಚಿ, ಅವರಿಗೆ 500 ರೂಪಾಯಿಗಳನ್ನು ಮರಳಿಸಿದ ಬಳಿಕ, ಮುಂದಿನ ಮಾತು’ ಎಂದು ಬರೆದಿದ್ದರಂತೆ.

ಇದನ್ನೂ ಓದಿ:ದಸರಾ ‘ಉದ್ಘಾಟನೆ’ ಪ್ರಾರಂಭವಾಗಿದ್ದು ಡಾ ರಾಜ್​​ಕುಮಾರ್ ಅವರಿಂದ, ಹೇಗೆ ಗೊತ್ತೆ?

ಚಿತ್ರರಂಗದಲ್ಲಿ ಮೌಲ್ಯಗಳು ಎಷ್ಟು ಮುಖ್ಯ ಎಂಬ ಬಗ್ಗೆ ಹೇಳುತ್ತಾ ಕಾರಂತರ ಈ ಘಟನೆಯನ್ನು ಗಿರೀಶ್ ಕಾಸರವಳ್ಳಿ ಅವರು ಉಲ್ಲೇಖ ಮಾಡಿದರು. ಮಾತು ಮುಂದುವರೆಸಿ, ಇಂದಿನ ದಿನಮಾನದ ಕೆಲ ಸಾಹಿತಿಗಳ ಅಪ್ರಮಾಣೀಕತೆಯ ಬಗ್ಗೆಯೂ ಹೇಳಿದ ಅವರು, ‘ಈಗ ದೊಡ್ಡ ದೊಡ್ಡ ಹೆಸರು ಮಾಡಿದ ಲೇಖಕರು ಸಹ ಒಂದೇ ಕತೆಯನ್ನು ನಾಲ್ಕೈದು ಜನರಿಗೆ ಮಾರಿದ್ದೂ ಇದೆ. ದುಡ್ಡು ಮುಖ್ಯ ಅಲ್ಲ ಅಥವಾ ಸಿನಿಮಾ ಸಹ ಮುಖ್ಯ ಅಲ್ಲ. ಮೌಲ್ಯ ಮುಖ್ಯ. ಅದನ್ನು ನಾವುಗಳು ಕಲಿಯಬೇಕಿದೆ’ ಎಂದು ಕಾಸರವಳ್ಳಿ ಅವರು ಹೇಳಿದರು.

ಶಿವರಾಮ ಕಾರಂತರ ಹಲವು ಕತೆಗಳು ಕನ್ನಡದಲ್ಲಿ ಸಿನಿಮಾ ಆಗಿವೆ. ‘ಚೋಮನ ದುಡಿ’, ಕಾರಂತರ ‘ಕುಡಿಯರ ಕೂಸು’ ಕತೆ ‘ಮಲೆಯ ಮಕ್ಕಳು’ ಸಿನಿಮಾ ಆಗಿದೆ. ‘ಬೆಟ್ಟದ ಜೀವ’, ‘ಚಿಗುರಿದ ಕನಸು’, ‘ಸರಸಮ್ಮನ ಸಮಾಧಿ’ ಕತೆಗಳು ಸಿನಿಮಾ ಆಗಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us