ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿದ್ಧವಾಗುತ್ತಿರುವ ಕನ್ನಡದ ‘ಕಬ್ಜ’ ಸಿನಿಮಾ ಸೆಟ್ಟೇರಿ ಹಲವು ಸಮಯ ಕಳೆದಿದೆ. ಆದರೆ, ಚಿತ್ರದ ನಾಯಕಿ ಯಾರು ಎನ್ನುವ ವಿಚಾರದಲ್ಲಿ ಗುಟ್ಟು ಕಾಯ್ದುಕೊಳ್ಳಲಾಗಿತ್ತು. ಉಪೇಂದ್ರ ಅಭಿನಯದ ಈ ಚಿತ್ರದಲ್ಲಿ ಸುದೀಪ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾಗೆ ಪ್ಯಾನ್ ಇಂಡಿಯಾ ನಟಿಯನ್ನೇ ತರಬೇಕು ಎಂಬುದು ನಿರ್ದೇಶಕ ಆರ್. ಚಂದ್ರು ಅವರ ಪ್ಲ್ಯಾನ್ ಆಗಿತ್ತು. ಅಂತೆಯೇ ಈಗ ಬಹುಭಾಷಾ ನಟಿ ಶ್ರೀಯಾ ಶರಣ್ ಅವರನ್ನು ‘ಕಬ್ಜ’ ಚಿತ್ರಕ್ಕೆ (Kabza Movie) ನಾಯಕಿಯಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಬಗ್ಗೆ ಚಿತ್ರತಂಡ ಅಧಿಕೃತ ಘೋಷಣೆ ಮಾಡಿದೆ. ಈ ಸಿನಿಮಾದಲ್ಲಿ ಮಧುಮತಿಯಾಗಿ ಶ್ರೀಯಾ (Shriya Saran) ಕಾಣಿಸಿಕೊಳ್ಳುತ್ತಿದ್ದು, ಹೊಸ ಪೋಸ್ಟರ್ ಗಮನ ಸೆಳೆಯುತ್ತಿದೆ.
‘ಕಬ್ಜ’ ಸಿನಿಮಾದಲ್ಲಿ ಇಬ್ಬರು ಹೀರೋಯಿನ್ಗಳು ಇರಲಿದ್ದಾರೆ. ಆ ಪೈಕಿ ಒಬ್ಬರನ್ನು ಚಿತ್ರತಂಡ ರಿವೀಲ್ ಮಾಡಿದೆ. ಖ್ಯಾತ ನಿರ್ದೇಶಕ ರಾಜಮೌಳಿ ನಿರ್ದೇಶನ ಮಾಡುತ್ತಿರುವ ‘ಆರ್ಆರ್ಆರ್’ ಸಿನಿಮಾದಲ್ಲಿ ಶ್ರೀಯಾ ನಟಿಸಿದ್ದಾರೆ. ಅವರಿಗೆ ಹಲವು ಇಂಡಸ್ಟ್ರಿಯಲ್ಲಿ ಬೇಡಿಕೆ ಇದೆ. ಈ ಕಾರಣಕ್ಕೆ ಶ್ರೀಯಾ ಅವರನ್ನು ಚಿತ್ರತಂಡ ಆಯ್ಕೆ ಮಾಡಿಕೊಂಡಿದೆ.
‘ಕಬ್ಜ’ ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಾಕಷ್ಟು ಸೌಂಡ್ ಮಾಡುತ್ತಿದೆ. ಉಪೇಂದ್ರ ಹಾಗೂ ಸುದೀಪ್ ಅವರು ಪರಭಾಷೆಯಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಈಗ ಚಿತ್ರತಂಡಕ್ಕೆ ನಾಯಕಿ ಕೂಡ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡವರು ಸಿಕ್ಕಿರುವುದರಿಂದ ಸಹಜವಾಗಿಯೇ ಸಿನಿಮಾದ ಚಾರ್ಮ್ ಹೆಚ್ಚಿದೆ.
Unveiling the first look of our 1’st queen..Welcoming Shirya Saran aboard.. happy to have you on set @shriya1109 ?✨#Kabzaa#Indianrealstarupendra#KichchaSudeepa#Rchandru#ShriyaSaran#Panindiamoviekabzaa pic.twitter.com/vP2z6eW81i
— R.Chandru (@rchandru_movies) March 7, 2022
‘ಕಬ್ಜ’ ಸಿನಿಮಾ ಸೆಟ್ಟೇರಿ ಎರಡು ವರ್ಷ ಕಳೆದಿದೆ. ಸಿನಿಮಾದ ಬಹುತೇಕ ಶೂಟಿಂಗ್ ಪೂರ್ಣಗೊಂಡಿದ್ದು, ಕೊನೆಯ ಹಂತದ ಕೆಲಸದಲ್ಲಿ ಚಿತ್ರತಂಡ ಬ್ಯುಸಿ ಇದೆ. ಈ ಮೊದಲು ರಿಲೀಸ್ ಆದ ‘ಕಬ್ಜ’ ಚಿತ್ರದ ಪೋಸ್ಟರ್ ಸಾಕಷ್ಟು ಗಮನ ಸೆಳೆದಿತ್ತು. ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಚಿತ್ರವನ್ನು ಬೇಗ ರಿಲೀಸ್ ಮಾಡುವಂತೆ ಒತ್ತಾಯಿಸಿದ್ದರು.
ಕನ್ನಡ, ತೆಲುಗು ಸೇರಿ ಏಳು ಭಾಷೆಯಲ್ಲಿ ‘ಕಬ್ಜ’ ರೆಡಿ ಆಗುತ್ತಿದೆ. ದೊಡ್ಡ ತಾರಾಬಳಗ ಇರುವ ಈ ಸಿನಿಮಾಗೆ ಬೃಹತ್ ಸೆಟ್‌ಗಳನ್ನು ಹಾಕಲಾಗಿದೆ. ರವಿ ಬಸ್ರೂರು ಸಂಗೀತ ಸಂಯೋಜನೆ, ಶಿವಕುಮಾರ್ ಕಲಾ ನಿರ್ದೇಶನ ಸೇರಿದಂತೆ ಬಹುತೇಕ ‘ಕೆ.ಜಿ.ಎಫ್’ ತಾಂತ್ರಿಕ ಬಳಗವೇ ಈ ಚಿತ್ರದಲ್ಲೂ ಮುಂದುವರೆದಿದೆ. ಸದ್ಯ, ಹೈದರಾಬಾದ್ ಹಾಗೂ ಬೆಂಗಳೂರಿನಲ್ಲಿ ಶೂಟಿಂಗ್ ಮಾಡೋದು ಬಾಕಿ ಉಳಿದಿದೆ. ಈ ಸಿನಿಮಾವನ್ನು ಈ ವರ್ಷವೇ ತೆರೆಗೆ ತರುವ ಆಲೋಚನೆಯಲ್ಲಿ ಚಿತ್ರತಂಡ ಇದೆ.
ಇದನ್ನೂ ಓದಿ: Kichcha Sudeep: ‘ಕಬ್ಜ’ ಚಿತ್ರದ ಲುಕ್ ರಿವೀಲ್ ಮಾಡಿದ ಸುದೀಪ್; ಅಭಿಮಾನಿಗಳು ಫಿದಾ
‘ಕಬ್ಜ’ ತಂಡಕ್ಕೆ ಶಿವರಾಜ್‌ಕುಮಾರ್ ಕಿವಿಮಾತು; ಇದನ್ನು ಪಾಲಿಸ್ತಾರಾ ನಿರ್ದೇಶಕರು?
Published On - 3:41 pm, Mon, 7 March 22