ಜೋರಾಗಿ ಮಳೆ ಬಂದರೆ ಬೆಂಗಳೂರಿನ ಸ್ವರೂಪವೇ ಬದಲಾಗಿಬಿಡುತ್ತದೆ. ಅನೇಕ ರಸ್ತೆಗಳು ಜನರ ಜೀವ ಬಲಿ ಪಡೆಯುವ ಅಪಾಯಕಾರಿ ಸ್ಥಳಗಳಾಗುತ್ತವೆ. ಕಂಡಕಂಡಲ್ಲಿ ಎದುರಾಗುವ ಗುಂಡಿಗಳಿಂದ ತೊಂದರೆಗೆ ಒಳಗಾದವರ ಸಂಖ್ಯೆ ದೊಡ್ಡದಿದೆ. ಕನ್ನಡದ ಖ್ಯಾತ ಗಾಯಕ ಅಜಯ್ ವಾರಿಯರ್ ಅವರು ಕೂಡ ಇದೇ ರೀತಿ ಈಗ ತೊಂದರೆಗೆ ಸಿಲುಕಿದ್ದಾರೆ. ಬೆಂಗಳೂರಿನಲ್ಲಿ ಡ್ರೈನ್ ಹೋಲ್ಗೆ ಬಿದ್ದಿರುವ ಅವರು ಪೆಟ್ಟು ಮಾಡಿಕೊಂಡಿದ್ದಾರೆ. ಬಿಬಿಎಂಪಿ (BBMP) ಅಧಿಕಾರಿಗಳ ನಿರ್ಲಕ್ಷ್ಯದಿಂದ ಅನೇಕ ಕಡೆಗಳಲ್ಲಿ ಫುಟ್ಪಾತ್ಗಳು ಓಪನ್ ಆಗಿವೆ. ಮಳೆ ಬಂದಾಗ ನೀರು ತುಂಬಿಕೊಂಡರೆ ಈ ಫುಟ್ಪಾತ್ ಗುಂಡಿಗಳು ಕಾಣಿಸುವುದೇ ಇಲ್ಲ. ಫುಟ್ಪಾತ್ ಮೇಲೆ ನಡೆದುಹೋಗುವವರಿಗೆ ಇದರಿಂದ ಅಪಾಯ ಗ್ಯಾರಂಟಿ. ಗಾಯಕ ಅಜಯ್ ವಾರಿಯರ್ (Singer Ajay Warrier) ಅವರು ಈ ಬಗ್ಗೆ ಫೇಸ್ಬುಕ್ ಮೂಲಕ ಘಟನೆಯ ವಿವರ ನೀಡಿದ್ದಾರೆ. ಭಾನುವಾರ (ಮೇ 8) ಸುರಿದ ಭಾರಿ ಮಳೆಯಿಂದ (Bengaluru Rain) ಆದ ಅನಾಹುತವನ್ನು ಅವರು ಜನರಿಗೆ ತಿಳಿಸಿದ್ದಾರೆ. ಬೆಂಗಳೂರಿನ ಫುಟ್ಪಾತ್ಗಳ ದುಸ್ಥಿತಿಯನ್ನು ಅವರು ಫೋಟೋಗಳ ಸಮೇತ ವಿವರಿಸಿದ್ದಾರೆ. ಡ್ರೇನ್ ಹೋಲ್ಗೆ ಬಿದ್ದ ಅವರ ಕಾಲಿಗೆ ಗಾಯ ಆಗಿದೆ. ಅಪಾಯಕಾರಿ ಘಟನೆಯಿಂದ ಅವರು ಪಾರಾಗಿದ್ದಾರೆ ಎಂಬುದಷ್ಟೇ ಸಮಾಧಾನ.
‘ಬೆಂಗಳೂರಿನಲ್ಲಿ ಭಾನುವಾರ ಧಾರಾಕಾರ ಮಳೆ ಸುರಿದಿತ್ತು. ಕೇರಳಕ್ಕೆ ತೆರಳಬೇಕಿದ್ದ ನಾನು ರೈಲ್ವೇ ನಿಲ್ದಾಣದ ಕಡೆಗೆ ಹೊರಟಿದ್ದೆ. ಮಗಳಿಗೆ ಹುಟ್ಟುಹಬ್ಬದ ದಿನ ಸರ್ಪ್ರೈಸ್ ನೀಡಲು ಪ್ಲ್ಯಾನ್ ಮಾಡಿದ್ದೆ. ಓಲಾ/ಉಬರ್ ಇಲ್ಲದ ಕಾರಣ ಮುಖ್ಯ ರಸ್ತೆಯ ಕಡೆಗೆ ನಡೆದುಹೋಗಲು ನಿರ್ಧರಿಸಿದೆ. ರಸ್ತೆಯಲ್ಲಿ ನೀರು ತುಂಬಿಕೊಂಡಿದ್ದರಿಂದ ನಾನು ಫುಟ್ಪಾತ್ ಮೇಲೆ ಹೋದೆ. ಕೆಲವೇ ಹೆಜ್ಜೆ ನಡೆದು ಸಾಗಿದ ಬಳಿಕ ನಿಯಂತ್ರಣ ತಪ್ಪಿ, ಗುಂಡಿ ಒಳಗೆ ಬಿದ್ದೆ. ಏನೆಂದು ತಿಳಿಯುವುದರೊಳಗೆ ಚರಂಡಿ ಹೋಲ್ ಒಳಗೆ ಹೋದೆ. ನನ್ನ ಎದೆಮಟ್ಟದ ವರೆಗೂ ನೀರು ಇತ್ತು. ನಾನು ಹೇಗೋ ಬಚಾವ್ ಆದೆ. ಆದರೆ ಕಾಲಿಗೆ ಪೆಟ್ಟಾಗಿದೆ’ ಎಂದು ಅಜಯ್ ವಾರಿಯರ್ ಬರೆದುಕೊಂಡಿದ್ದಾರೆ.
‘ಫುಟ್ಪಾತ್ ಗುಂಡಿ ಮುಚ್ಚದೇ ಇರುವ ಅಧಿಕಾರಿಗಳ ನಿರ್ಲಕ್ಷ್ಯದಿಂದ ನಾನು ಕಾಲಿಗೆ ಹೊಲಿಗೆ ಹಾಕಿಸಿಕೊಳ್ಳಬೇಕಾಯಿತು. ಅನೇಕ ಮ್ಯೂಸಿಕ್ ಕಾರ್ಯಕ್ರಮಗಳನ್ನು ಬಿಡಬೇಕಾಯಿತು. ಇದಕ್ಕೆಲ್ಲ ಯಾರನ್ನು ದೂಷಿಸುವುದು? ನನ್ನನ್ನೇ! ಯಾಕೆಂದರೆ ನಾನು ಫುಟ್ಪಾತ್ನಲ್ಲಿ ನಡೆಯುವ ಬದಲು ರಸ್ತೆಯಲ್ಲಿ ನಿಂತಿದ್ದ ನೀರಿನಲ್ಲಿ ಈಜಿಕೊಂಡ ಹೋಗಬೇಕಿತ್ತು. ಅಧಿಕಾರಿಗಳಿಗೆ ಧನ್ಯವಾದಗಳು. ಜನರ ಹಿತದೃಷ್ಟಿಯಿಂದ ಈ ಸಂದೇಶವನ್ನು ನಾನು ನೀಡುತ್ತಿದ್ದೇನೆ. ಫುಟ್ಪಾತ್ ಗುಂಡಿಗಳನ್ನು ಮುಚ್ಚದಿರುವ ಕಾರಣ ಈ ರೀತಿ ಯಾರಿಗೆ ಬೇಕಾದರೂ ಅಪಾಯ ಆಗಬಹುದು. ಚಿಕ್ಕ ಮಕ್ಕಳು ಈ ರೀತಿ ಬಿದ್ದರೆ ಏನು ಗತಿ? ನಾನು ಕಾನೂನು ಪಾಲಿಸುವ ಮತ್ತು ತೆರಿಗೆ ಕಟ್ಟುವ ಬೆಂಗಳೂರಿನ ಪ್ರಜೆ. ಈ ನಗರದ ಜನರಿಗೆ ಸುರಕ್ಷಿತವಾದ ರಸ್ತೆ ಮತ್ತು ಫುಟ್ಪಾತ್ಗಳನ್ನು ನೀಡಿ ಎಂದು ಒತ್ತಾಯಿಸಿ ಬಿಬಿಎಂಬಿ ಅಧಿಕಾರಿಗಳಿಗೆ ಇದು ನನ್ನ ಬಹಿರಂಗ ಪತ್ರ. ಕಾಳಜಿ ವಹಿಸಿಕೊಳ್ಳಿ ಬೆಂಗಳೂರಿಗರೇ.. ನಮ್ಮ ಪ್ರಾಣ ಕೂಡ ಮುಖ್ಯ’ ಎಂದು ಅಜಯ್ ವಾರಿಯರ್ ಅವರು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮೇ 7ರಂದು ರಾತ್ರಿ ಕಿರುತೆರೆ ನಟಿ ಸುನೇತ್ರಾ ಪಂಡಿತ್ ಅವರು ಕೂಡ ಬೆಂಗಳೂರಿನ ರಸ್ತೆ ಗುಂಡಿಯಿಂದಾಗಿ ಅಪಘಾತಕ್ಕೆ ಒಳಗಾದರು. ಎನ್.ಆರ್. ಕಾಲೋನಿಯಲ್ಲಿ ಅವರಿಗೆ ಆಕ್ಸಿಡೆಂಟ್ ಆಗಿತ್ತು. ಈ ರೀತಿಯ ಘಟನೆಗಳು ಪದೇಪದೇ ಮರುಕಳಿಸುತ್ತಿವೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:18 am, Wed, 11 May 22