ರಾಜಮೌಳಿಯ ಮುಂದಿನ ಸಿನಿಮಾ ಬಗ್ಗೆ ತಂದೆ ಕೊಟ್ಟರು ಮಾಹಿತಿ
SS Rajamouli: ಎಸ್ಎಸ್ ರಾಜಮೌಳಿ ಪ್ರಸ್ತುತ ಮಹೇಶ್ ಬಾಬು ನಟನೆಯ ಸಿನಿಮಾ ನಿರ್ದೇಶನದಲ್ಲಿ ಬ್ಯುಸಿಯಾಗಿದ್ದಾರೆ. ರಾಜಮೌಳಿ ನಿರ್ದೇಶಿಸುವ ಎಲ್ಲ ಸಿನಿಮಾಗಳಿಗೆ ಅವರ ತಂದೆ ವಿಜಯೇಂದ್ರ ಪ್ರಸಾದ್ ಕತೆ ಬರೆಯುತ್ತಾರೆ. ಇದೀಗ ವಿಜಯೇಂದ್ರ ಪ್ರಸಾದ್ ಅವರು ತಮ್ಮ ಮುಂದಿನ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಆ ಸಿನಿಮಾವನ್ನು ರಾಜಮೌಳಿ ನಿರ್ದೇಶನ ಮಾಡುತ್ತಾರಾ? ಅಥವಾ ವಿಜಯೇಂದ್ರ ಪ್ರಸಾದ್ ನಿರ್ದೇಶಿಸುತ್ತಾರಾ?
![ರಾಜಮೌಳಿಯ ಮುಂದಿನ ಸಿನಿಮಾ ಬಗ್ಗೆ ತಂದೆ ಕೊಟ್ಟರು ಮಾಹಿತಿ](https://images.tv9kannada.com/wp-content/uploads/2025/01/vijayendra-prasad-ss-rajamouli.jpg?w=1280)
ರಾಜಮೌಳಿ ಪ್ರಸ್ತುತ ಮಹೇಶ್ ಬಾಬು ನಟನೆಯ ಸಿನಿಮಾ ನಿರ್ದೇಶನದಲ್ಲಿ ತೊಡಗಿಕೊಂಡಿದ್ದಾರೆ. ಕೆಲ ವಾರಗಳ ಹಿಂದಷ್ಟೆ ಸಿನಿಮಾದ ಮುಹೂರ್ತ ನಡೆದಿದೆ. ಸಿನಿಮಾದಲ್ಲಿ ಮಹೇಶ್ ಬಾಬು ಜೊತೆಗೆ ನಟಿ ಪ್ರಿಯಾಂಕಾ ಚೋಪ್ರಾ ಸಹ ನಟಿಸುತ್ತಿದ್ದಾರೆ. ಇತ್ತೀಚೆಗೆ ವಿಡಿಯೋ ಒಂದನ್ನು ಅಪ್ಲೋಡ್ ಮಾಡಿದ್ದ ಮಹೇಶ್ ಬಾಬು, ಸಿಂಹವನ್ನು ಬೋನಿಗೆ ಹಾಕಿ ಅದರ ಪಾಸ್ಪೋರ್ಟ್ ಕಿತ್ತಿಟ್ಟುಕೊಂಡಿದ್ದೇನೆ ಎಂದು ಸೂಚ್ಯವಾಗಿ ಹೇಳಿದ್ದರು. ಆ ಮೂಲಕ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಿದೆ ಎಂಬ ಸುಳಿವು ನೀಡಿದ್ದರು. ಇದರ ನಡುವೆ ರಾಜಮೌಳಿಯ ಮುಂದಿನ ಸಿನಿಮಾ ಬಗ್ಗೆ ಅವರ ತಂದೆ ಕತೆಗಾರ ವಿಜಯೇಂದ್ರಪ್ರಸಾದ್ ಮಾತನಾಡಿದ್ದಾರೆ.
ರಾಜಮೌಳಿ ನಿರ್ದೇಶನ ಮಾಡುವ ಬಹುತೇಕ ಎಲ್ಲ ಸಿನಿಮಾಗಳಿಗೆ ಅವರ ತಂದೆ ವಿಜಯೇಂದ್ರ ಪ್ರಸಾದ್ ಕತೆ ಒದಗಿಸುತ್ತಾರೆ. ಭಾರತದ ಅತ್ಯುತ್ತಮ ಸಿನಿಮಾ ಕತೆಗಾರರಲ್ಲಿ ವಿಜಯೇಂದ್ರಪ್ರಸಾದ್ ಪ್ರಮುಖರು. ರಾಜಮೌಳಿ ಈ ವರೆಗೆ ನಿರ್ದೆಶಿಸಿರುವ ಸಿನಿಮಾಗಳಲ್ಲಿ ಮೊದಲ ಸಿನಿಮಾ ಆಗಿರುವ ‘ಸ್ಟೂಡೆಂಟ್ ನಂ.1’ ಹೊರತಾಗಿ ಇನ್ನೆಲ್ಲ ಸಿನಿಮಾಗಳಿಗೂ ಕತೆ ಬರೆದಿರುವುದು ವಿಜಯೇಂದ್ರ ಪ್ರಸಾದ್. ಇತ್ತೀಚೆಗಿನ ಸಂದರ್ಶನದಲ್ಲಿ ರಾಜಮೌಳಿಯ ಮುಂದಿನ ಸಿನಿಮಾ ಬಗ್ಗೆ ಅವರು ಸುಳಿವು ನೀಡಿದ್ದಾರೆ.
ವಿಜಯೇಂದ್ರ ಪ್ರಸಾದ್ ಅವರು ಸೀತೆಯ ಕುರಿತಾದ ಕತೆಯೊಂದನ್ನು ಬರೆದಿದ್ದಾರಂತೆ. ಇಡೀ ರಾಮಾಯಣವನ್ನು ಸೀತೆಯ ದೃಷ್ಟಿಕೋನದಿಂದ ನೋಡುವ ಪ್ರಯತ್ನ ಅದಾಗಿದ್ದು, ಆ ಸಿನಿಮಾ ಬಹುಕೋಟಿ ಬಜೆಟ್ನಲ್ಲಿ ನಿರ್ಮಾಣ ಆಗಲಿದೆ ಎಂದಿದ್ದಾರೆ. ಆದರೆ ಆ ಸಿನಿಮಾವನ್ನು ರಾಜಮೌಳಿಯೇ ನಿರ್ದೇಶನ ಮಾಡುತ್ತಾರೋ ಅಥವಾ ಬೇರೆ ಯಾರಾದರೂ ನಿರ್ದೇಶನ ಮಾಡುತ್ತಾರೋ ಎಂಬುದು ಇನ್ನೂ ಅನುಮಾನದಲ್ಲಿಯೇ ಇದೆ. ರಾಜಮೌಳಿಯೇ ನಿರ್ದೇಶನ ಮಾಡಬೇಕು ಎಂದರೆ ಕನಿಷ್ಟ ನಾಲ್ಕು ವರ್ಷವಾದರೂ ಕಾಯಬೇಕಾಗುತ್ತದೆ.
ಇದನ್ನೂ ಓದಿ:ರಾಜಮೌಳಿ ಹೊಸ ವಿಡಿಯೋದ ಅರ್ಥವೇನು?
ಅಸಲಿಗೆ ವಿಜಯೇಂದ್ರ ಪ್ರಸಾದ್ ಅವರು ಈ ಹಿಂದೆಯೂ ‘ಸೀತೆ’ ಸಿನಿಮಾದ ಬಗ್ಗೆ ಮಾತನಾಡಿದ್ದರು. ಆಗ ಅವರೇ ಆ ಸಿನಿಮಾ ನಿರ್ದೇಶನ ಮಾಡುವ ಇಚ್ಛೆ ವ್ಯಕ್ತಪಡಿಸಿದ್ದರು. ಈಗಲೂ ಸಹ ವಿಜಯೇಂದ್ರ ಪ್ರಸಾದ್ ಅವರೇ ‘ಸೀತೆ’ ಸಿನಿಮಾ ನಿರ್ದೇಶನ ಮಾಡುವ ಸಾಧ್ಯತೆಯೂ ಇದೆ. ಕೆಲವೇ ದಿನಗಳಲ್ಲಿ ಈ ಸಿನಿಮಾದ ಕುರಿತ ಸುದ್ದಿ ಹೊರಬೀಳಲಿದೆ. ಅದೇ ಸಂದರ್ಶನದಲ್ಲಿ ವಿಜಯೇಂದ್ರ ಪ್ರಸಾದ್ ಹೇಳಿಕೊಂಡಿರುವಂತೆ ಕೇವಲ ಒಂದು ವರ್ಷದಲ್ಲಿ ಸಿನಿಮಾದ ನಿರ್ಮಾಣ ಮುಗಿದು ಹೋಗಲಿದೆಯಂತೆ.
ವಿಜಯೇಂದ್ರ ಪ್ರಸಾದ್ ಅವರು, ‘ಬಾಹುಬಲಿ’, ಸಲ್ಮಾನ್ ಖಾನ್ ನಟನೆಯ ‘ಭಜರಂಗಿ ಬಾಯಿಜಾನ್’ ಸೇರಿದಂತೆ ಹಲವು ಬ್ಲಾಕ್ ಬಸ್ಟರ್ ಸಿನಿಮಾಗಳಿಗೆ ಕತೆ ಬರೆದಿದ್ದಾರೆ. ಕನ್ನಡದಲ್ಲಿಯೂ ಸಹ ವಿಷ್ಣುವರ್ಧನ್ ನಟನೆಯ ‘ಅಪ್ಪಾಜಿ’, ‘ಕುರುಬನ ರಾಣಿ’, ‘ಪಾಂಡು ರಂಗ ವಿಠಲ’ ಸಿನಿಮಾಗಳಿಗೆ ಕತೆ ಬರೆದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ