
ನಟ ದರ್ಶನ್ ಅವರು ಪರಪ್ಪನ ಅಗ್ರಹಾರದಲ್ಲಿ ಪರದಾಡುವಂತಾಗಿದೆ. ತಾವಿರುವ ಜೈಲು ಕೊಠಡಿಯಿಂದ ಹೊರಗೆ ಕಾಲಿಡಲು ಕೂಡ ಅವರಿಗೆ ಅವಕಾಶ ಸಿಗುತ್ತಿಲ್ಲ. ದರ್ಶನ್ (Darshan) ಸೆರೆಯಾಗಿರುವ ಜೈಲು ಕೊಠಡಿ ಸ್ವಲ್ಪ ವಿಶಾಲವಾಗಿದೆ. ಅದೇ ರೂಮ್ನಲ್ಲಿ ಅವರು ವಾಕಿಂಗ್ ಮಾಡುತ್ತಾ ಕಾಲ ಕಳೆದಿದ್ದಾರೆ. ಆದರೆ ಆ ಕೊಠಡಿಯಿಂದ ಹೊರಗೆ ಬರಲು ಅನುಮತಿ ಇಲ್ಲ. ಕಳೆದ ಬಾರಿ ಪರಪ್ಪನ ಅಗ್ರಹಾರ (Parappana Agrahara) ಜೈಲಿನಲ್ಲಿ ನಿಯಮ ಉಲ್ಲಂಘನೆ ಮಾಡಿದ್ದ ದರ್ಶನ್ ಅವರಿಗೆ ಈಗ ಅಸಲಿ ಜೈಲಿನ ದರ್ಶನ ಆಗುತ್ತಿದೆ. ಜೈಲಿನ ಸಿಬ್ಬಂದಿ ಹದ್ದಿನ ಕಣ್ಣು ಇಟ್ಟಿದ್ದಾರೆ.
ದರ್ಶನ್ ಕೊಠಡಿಯೊಳಗೆ ವಾಕಿಂಗ್ ಮಾಡುತ್ತಾ, ಅಲ್ಲಿಯೇ ಮಲಗುತ್ತಿದ್ದಾರೆ. ಭದ್ರತೆಗೆ ನಿಯೋಜನೆಗೊಂಡ ಸಿಬ್ಬಂದಿಯ ಬಾಡಿವೋರ್ನ್ ಕ್ಯಾಮೆರಾವನ್ನು ಹಿರಿಯ ಅಧಿಕಾರಿಗಳು ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಕೊಠಡಿಯಲ್ಲಿ ವಾಕ್ ಮಾಡುತ್ತಿರುವುದು, ಮಲಗಿರೋದಷ್ಟೇ ವಿಡಿಯೋದಲ್ಲಿದೆ ಎಂಬುದು ತಿಳಿದುಬಂದಿದೆ. ಒಟ್ಟಿನಲ್ಲಿ ದರ್ಶನ್ ಅವರಿಗೆ ಈ ಬಾರಿ ಜೈಲಿನ ನಿಯಮಗಳು ಬಹಳ ಕಠಿಣವಾಗಿವೆ.
ತೆಳುವಾದ ಬೆಡ್ ಮೇಲೆಯೇ ಮಲಗಿ ದರ್ಶನ್ ಅವರು ನಿದ್ದೆಗೆ ಜಾರಿದ್ದಾರೆ. ಕಳೆದ ಬಾರಿ ಜೈಲಿಗೆ ಬಂದಿದ್ದಾಗ ಸಹ ಖೈದಿಗಳ ಬೆಡ್ಗಳನ್ನು ಕೂಡ ದರ್ಶನ್ ತೆಗೆದುಕೊಂಡಿದ್ದರು. ಎರಡು ಬೆಡ್ಗಳನ್ನು ಜೋಡಿಸಿ ಮಲಗಿಕೊಳ್ಳುತ್ತಿದ್ದರು. ಆದರೆ ಈ ಬಾರಿ ಎಲ್ಲದಕ್ಕೂ ಜೈಲು ಸಿಬ್ಬಂದಿ ಕಡಿವಾಣ ಹಾಕಿದ್ದಾರೆ. ಬೇರೆ ಸಿಬ್ಬಂದಿ ಬರದಂತೆ ದರ್ಶನ್ ಕೊಠಡಿ ಮುಂದೆ ಬ್ಯಾರಿಕೇಡ್ ಅಳವಡಿಕೆ ಮಾಡಲಾಗಿದೆ.
ಜೈಲಿನಲ್ಲಿ ಇನ್ನುಳಿದ ಆರೋಪಿಗಳದ್ದು ಸದ್ದೇ ಇಲ್ಲ. ಕುಳಿತು ಪರಸ್ಪರ ಮಾತನಾಡಿಕೊಳ್ಳುತ್ತಾ ಕಾಲ ಕಳೆಯುತ್ತಿದ್ದಾರೆ. ಈ ಮೊದಲು ಪರಪ್ಪನ ಅಗ್ರಹಾರಕ್ಕೆ ಬಂದಿದ್ದ ದರ್ಶನ್ ಅವರು ಸಿಗರೇಟು ಸೇದುತ್ತಾ ಹಾಯಾಗಿ ಕಾಲ ಕಳೆದ ಫೋಟೋ ವೈರಲ್ ಆಗಿತ್ತು. ನಿಯಮ ಉಲ್ಲಂಘನೆ ಆಗಿದ್ದಕ್ಕೆ ಸುಪ್ರೀಂ ಕೋರ್ಟ್ ಚಾಟಿ ಬೀಸಿದೆ. ಅದರ ಪರಿಣಾಮವಾಗಿ ಈ ಬಾರಿ ದರ್ಶನ್ ಎಲ್ಲದಕ್ಕೂ ಕಷ್ಟಪಡುವಂತಾಗಿದೆ.
ಇದನ್ನೂ ಓದಿ: ದರ್ಶನ್ ಇಲ್ಲದಿದ್ದರೂ ಈ ವರ್ಷವೇ ಬಿಡುಗಡೆ ಆಗುತ್ತಾ ‘ದಿ ಡೆವಿಲ್’ ಸಿನಿಮಾ?
ಇದೂ ಸಾಲದೆಂಬಂತೆ ದರ್ಶನ್ ಅವರಿಗೆ ಇನ್ನೊಂದು ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಜಾಮೀನು ಸಿಗುವುದಕ್ಕೂ ಮೊದಲು ಅವರನ್ನು ಬಳ್ಳಾರಿ ಜೈಲಿಗೆ ಹಾಕಲಾಗಿತ್ತು. ಈ ಬಾರಿಯೂ ದರ್ಶನ್ ಸೇರಿದಂತೆ ಎಲ್ಲ ಆರೋಪಿಗಳ ಸ್ಥಳಾಂತರ ಕೋರಿ ಅರ್ಜಿ ಸಲ್ಲಿಸಲಾಗಿದೆ. ಪ್ರಾಸಿಕ್ಯೂಷನ್ ಪರ ಎಸ್ಪಿಪಿ ಪ್ರಸನ್ನಕುಮಾರ್ ಅವರು ಕೋರ್ಟ್ಗೆ ಅರ್ಜಿ ಹಾಕಿದ್ದಾರೆ. ಜಾಮೀನಿಗೂ ಮೊದಲಿದ್ದ ಜೈಲುಗಳಿಗೇ ವರ್ಗಾವಣೆ ಮಾಡುವಂತೆ ಮನವಿ ಮಾಡಿದ್ದಾರೆ. ಈ ಅರ್ಜಿ ಬಗ್ಗೆ ದರ್ಶನ್ ಪ್ರತಿಕ್ರಿಯೆ ಪಡೆಯಬೇಕಿದೆ. ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ದರ್ಶನ್ ಪರ ವಕೀಲ ಸುನಿಲ್ ಕುಮಾರ್ ಕಾಲಾವಕಾಶ ಕೋರಿದ್ದಾರೆ. ವಿಚಾರಣೆಯನ್ನು ಆಗಸ್ಟ್ 23ಕ್ಕೆ ಸೆಷನ್ಸ್ ಕೋರ್ಟ್ ಮುಂದೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.