ದರ್ಶನ್ ಮತ್ತೆ ಬಳ್ಳಾರಿ ಜೈಲಿಗೆ ಶಿಫ್ಟ್? ದಾಸನಿಗೆ ಮತ್ತೆ ಹೆಚ್ಚಿದ ಟೆನ್ಶನ್
ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ ಅವರ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಇದರಿಂದಾಗಿ ಅವರು ಮತ್ತೆ ಜೈಲಿಗೆ ಹೋಗಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲಿಗೆ ವರ್ಗಾವಣೆ ಮಾಡುವ ಸಾಧ್ಯತೆಯಿದೆ. ಅಭಿಯೋಜಕರು ಈ ಬಗ್ಗೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಾರೆ. ಈ ವರ್ಗಾವಣೆಯಿಂದ ದರ್ಶನ್ ಅವರ ಕುಟುಂಬಕ್ಕೆ ತೊಂದರೆಯಾಗುವ ಸಾಧ್ಯತೆಯಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ (Darshan) ಕರ್ನಾಟಕ ಹೈಕೋರ್ಟ್ನಿಂದ ಜಾಮೀನು ಪಡೆದು ಹೊರಗೆ ಹಾಯಾಗಿ ಸುತ್ತಾಡಿಕೊಂಡಿದ್ದರು. ಆದರೆ, ಈಗ ಸುಪ್ರೀಂಕೋರ್ಟ್ ಅವರ ಜಾಮೀನು ರದ್ದು ಮಾಡಿದೆ. ಇದರಿಂದ ಅವರು ಮತ್ತೆ ಜೈಲು ಹಕ್ಕಿ ಆಗಿದ್ದಾರೆ. ಈ ಮೊದಲು ಅವರು ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿ ಇದ್ದರು. ಈಗ ಜಾಮೀನು ರದ್ದಾದ ಬಳಿಕ ಬೆಂಗಳೂರಿನ ಪರಪ್ಪನ ಅಗ್ರಹಾರ ಸೇರಿದ್ದಾರೆ. ದರ್ಶನ್ ಅವರಿಗೆ ಈಗ ಮತ್ತೆ ಬಳ್ಳಾರಿ ಜೈಲಿಗೆ ಸ್ಥಳಾಂತರ ಆಗುವ ಭಯ ಕಾಡಿದೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಅವರು 2024ರ ಜೂನ್ 11ರಂದು ಬಂಧನಕ್ಕೆ ಒಳಗಾದರು. ಆರಂಭದಲ್ಲಿ ಅವರು ಪೊಲೀಸ್ ವಿಚಾರಣೆ ಎದುರಿಸಿದರು. ಆ ಬಳಿಕ ಅವರಿಗೆ ನ್ಯಾಯಾಂಗ ಬಂಧನ ಒದಗಿಸಿದ್ದರಿಂದ ಅವರನ್ನು ಪರಪ್ಪನ ಅಗ್ರಹಾರಕ್ಕೆ ಶಿಫ್ಟ್ ಮಾಡಲಾಯಿತು. ಆದರೆ, ಅಲ್ಲಿ ಅವರು ಐಷಾರಾಮಿ ಸವಲತ್ತು ಪಡೆದರು. ಇತರ ರೌಡಿಶೀಟರ್ಗಳ ಜೊತೆ ದರ್ಶನ್ ಸಿಗರೇಟ್ ಸೇದುತ್ತಾ ಕುಳಿತ ಫೋಟೋ ವೈರಲ್ ಆಯಿತು. ಅಲ್ಲದೆ, ಸಹ ಕೈದಿ ವಿಡಿಯೋ ಕಾಲ್ ಮಾಡುವಾಗ ಇವರು ಕೂಡ ಅದರಲ್ಲಿ ಕಾಣಿಸಿಕೊಂಡಿದ್ದರು.
ಈ ಪ್ರಕರಣ ಗಂಭೀರವಾಗಿ ಸ್ವೀಕರಿಸಿದ ನ್ಯಾಯಾಲಯ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಿ ಆದೇಶ ಹೊರಡಿಸಿತು. ಈ ಆದೇಶದ ಬೆನ್ನಲ್ಲೇ ದರ್ಶನ್ ಅವರು ಬಳ್ಳಾರಿಗೆ ಸ್ಥಳಾಂತರಗೊಂಡರು. ಈಗ ಅವರು ಮತ್ತೆ ಜೈಲಿಗೆ ಮರಳಿದ್ದು, ಪರಪ್ಪನ ಅಗ್ರಹಾರದಲ್ಲಿ ಇದ್ದಾರೆ.
ಇದನ್ನೂ ಓದಿ: ‘ಡಿ ಬಾಸ್ ಹುಡುಕಾಟದಲ್ಲಿ ಚಾಲೆಂಜಿಂಗ್ ಸ್ಟಾರ್ನ ಕಳೆದುಕೊಂಡೆವು’; ದರ್ಶನ್ ಅಭಿಮಾನಿಗಳ ಬೇಸರ
ಈ ಹಿನ್ನೆಲೆಯಲ್ಲಿ ದರ್ಶನ್ ದರ್ಶನ್ ಸೇರಿದಂತೆ ಇತರ ಆರೋಪಿಗಳ ಸ್ಥಳಾಂತರ ಕೋರಿ ಅರ್ಜಿ ಸಲ್ಲಿಕೆ ಮಾಡಲಾಗಿದೆ. ಪ್ರಾಸಿಕ್ಯೂಷನ್ ಪರ ಅಭಿಯೋಜಕರು ಸೆಷನ್ ಕೋರ್ಟ್ನಲ್ಲಿ ಹೀಗೊಂದು ಮನವಿ ಮಾಡಿದ್ದಾರೆ. ಆರೋಪಿಗಳು ಜಾಮೀನಿಗೂ ಮುಂಚೆ ಇರುವ ಜೈಲಿಗೆ ಶಿಫ್ಟ್ ಆಗಬೇಕು ಎಂದು ಅದರಲ್ಲಿ ಕೋರಲಾಗಿದೆ. ಹಾಗಾದಲ್ಲಿ ದರ್ಶನ್ಗೆ ಸಂಕಷ್ಟ ಎದುರಾಗಲಿದೆ. ದರ್ಶನ್ ಮತ್ತೆ ಬಳ್ಳಾರಿ ಜೈಲಿಗೆ ಶಿಫ್ಟ್ ಆದರೆ, ಕುಟುಂಬದವರಿಗೆ ಸಮಸ್ಯೆ ಆಗಲಿದೆ. ದರ್ಶನ್ ಭೇಟಿಗಾಗಿ ಕುಟುಂಬದವರು ಸಾಕಷ್ಟು ದೂರ ಪ್ರಯಾಣ ಮಾಡಬೇಕಾಗುತ್ತದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








