ಮೋದಿಯ ಹೊಗಳಿ, ಜೆಪಿ ನಡ್ಡಾ ಜೊತೆ ಸೆಲ್ಫಿ ಹಂಚಿಕೊಂಡ ನಟ ಸುದೀಪ್, ಬಿಜೆಪಿ ಪರ ಪ್ರಚಾರ ಪ್ರಾರಂಭ

|

Updated on: Apr 19, 2023 | 3:00 PM

Sudeep: ಬಿಜೆಪಿ ಪರವಾಗಿ ಇಂದು ಅಧಿಕೃತವಾಗಿ ಚುನಾವಣಾ ಪ್ರಚಾರ ಆರಂಭಿಸಿದ ನಟ ಕಿಚ್ಚ ಸುದೀಪ್, ಮೋದಿ ಹಾಗೂ ಸಿಎಂ ಬೊಮ್ಮಾಯಿ ಅವರನ್ನು ಹೊಗಳಿದ್ದಾರೆ. ಬಿಜೆಪಿ ಅಧ್ಯಕ್ಷ ಜೆಪಿ ನಡ್ಡ ಜೊತೆಗಿನ ಸೆಲ್ಫಿ ಹಂಚಿಕೊಂಡಿದ್ದಾರೆ.

ಮೋದಿಯ ಹೊಗಳಿ, ಜೆಪಿ ನಡ್ಡಾ ಜೊತೆ ಸೆಲ್ಫಿ ಹಂಚಿಕೊಂಡ ನಟ ಸುದೀಪ್, ಬಿಜೆಪಿ ಪರ ಪ್ರಚಾರ ಪ್ರಾರಂಭ
ಸುದೀಪ್
Follow us on

ಹಲವು ವಿಮರ್ಶೆ, ಟೀಕೆ, ಬೆಂಬಲಗಳ ನಡುವೆ ಕೊನೆಗೂ ನಟ ಸುದೀಪ್ (Sudeep) ಬಿಜೆಪಿ (BJP) ಪರ ಚುನಾವಣಾ ಪ್ರಚಾರ (Election Campaign) ಆರಂಭಿಸಿದ್ದಾರೆ. ಇಂದು (ಏಪ್ರಿಲ್ 19) ಶಿಗ್ಗಾಂವಿಯಿಂದ (Shiggaon) ಬಿಜೆಪಿ ಪ್ರಚಾರ ಪ್ರಾರಂಭ ಮಾಡಿರುವ ನಟ ಸುದೀಪ್ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರೊಟ್ಟಿಗೆ ಬೃಹತ್ ರ್ಯಾಲಿಯಲ್ಲಿ ಭಾಗವಹಿಸಿದ್ದಾರೆ. ಬಿಜೆಪಿ ಪರ ಪ್ರಚಾರ ಪ್ರಾರಂಭ ಮಾಡಿರುವ ಕುರಿತಾಗಿ ಟ್ವೀಟ್ ಮಾಡಿರುವ ಸುದೀಪ್, ಶಿಗ್ಗಾಂವಿಯಿಂದ ಪ್ರಚಾರ ಶುರು ಮಾಡಿರುವುದು ಹೆಮ್ಮೆಯ ವಿಚಾರ ಎಂದಿದ್ದಾರೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಜೊತೆಗಿನ ಸೆಲ್ಫಿ ಸಹ ಹಂಚಿಕೊಂಡಿದ್ದಾರೆ.

”ನಮಸ್ಕಾರ, ಶ್ರೀ ಕನಕದಾಸರು ಮತ್ತು ಶ್ರೀ ಸಂತ ಶಿಶುನಾಳರು ಹುಟ್ಟಿದ ಶಿಗ್ಗಾವಿ ತಾಲೂಕಿನಿಂದಲೆ ಪ್ರಚಾರ ಶುರು ಮಾಡುತ್ತಿರುವುದು ನಿಜಕ್ಕೂ ಹೆಮ್ಮೆ ಮತ್ತು ಸಂತೋಷದ ಸಂಗತಿ. ಎಲ್ಲರಿಗೂ ಶುಭವಾಗಲಿ” ಎಂದು ಟ್ವೀಟ್ ಮಾಡಿರುವ ಸುದೀಪ್ ಟ್ವೀಟ್ ಜೊತೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಜೊತೆಗಿನ ಸೆಲ್ಫಿ ಹಂಚಿಕೊಂಡಿದ್ದಾರೆ. ಜೊತೆಗೆ ಸಿಎಂ ಬಸವರಾಜ ಬೊಮ್ಮಾಯಿ ಅವರೊಟ್ಟಿಗಿನ ಚಿತ್ರವನ್ನೂ ಹಂಚಿಕೊಂಡಿದ್ದಾರೆ.

ಸಿಎಂ ಬೊಮ್ಮಾಯಿ, ಜೆಪಿ ನಡ್ಡಾ ಹಾಗೂ ಸುದೀಪ್ ಶಿಗ್ಗಾಂವಿಯಲ್ಲಿ ರಾಣಿ ಚೆನ್ನಮ್ಮನ ಪ್ರತಿಮೆಗೆ ಮಾಲಾರ್ಪಣೆ ಮಾಡಿ ರ್ಯಾಲಿಗೆ ಚಾಲನೆ ನೀಡಿದರು. ಬೃಹತ್ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ ಸುದೀಪ್, ”ಶಿಗ್ಗಾಂವಿಯಲ್ಲಿ ಪ್ರಚಾರ ಆರಂಭಿಸಿದ್ದಕ್ಕೆ ಬಹಳ ಖುಷಿಯಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪರವಾಗಿ ನಾನು ಪ್ರಚಾರಕ್ಕೆ ಬಂದಿದ್ದೇನೆ. ಸಿಎಂ ಬೊಮ್ಮಾಯಿಯವರು ಕಡಿಮೆ ಅವಧಿಯಲ್ಲಿ ಉತ್ತಮವಾಗಿ ಕೆಲಸ ಮಾಡಿದ್ದಾರೆ. ನನ್ನನ್ನು ಆಹ್ವಾನಿಸಿದ್ದಕ್ಕೆ ಧನ್ಯವಾದ ಹೇಳುತ್ತೇನೆ. ನಾನು ಭಾರತೀಯನಾಗಿ ಪ್ರಧಾನಿ ನರೇಂದ್ರ ಮೋದಿಯವರ ಕೆಲಸವನ್ನು ಮೆಚ್ಚುತ್ತೇನೆ. ಗೆದ್ದೇ ಗೆಲ್ಲುವೆ ಒಂದು ದಿನ, ಗೆಲ್ಲಲೇ ಬೇಕು ಒಳ್ಳೆಯತನ” ಎಂದು ಕಿಚ್ಚ ಸುದೀಪ್​​ ಹೇಳಿದರು.

ಇದನ್ನೂ ಓದಿ:Karnataka Assembly Polls: ಬಿಜೆಪಿ ಅಭ್ಯರ್ಥಿಗಳ ಪರ ನಟ ಕಿಚ್ಚ ಸುದೀಪ್ ಇಂದಿನಿಂದ ಪ್ರಚಾರ, ಬೊಮ್ಮಾಯಿಯವರ ಕ್ಷೇತ್ರ ಶಿಗ್ಗಾಂವಿಯಿಂದ ಆರಂಭ

”ಶಿಗ್ಗಾಂವಿಯಲ್ಲಿ ಬೊಮ್ಮಾಯಿ ಅವರಿಗೆ ಇಷ್ಟು ಜನ ಸೇರಿರುವುದು ನೋಡಿದರೆ ಗೊತ್ತಾಗುತ್ತದೆ ಅವರು ಎಂಥಹಾ ವ್ಯಕ್ತಿ, ಜನರಿಗಾಗಿ ಎಷ್ಟು ಕೆಲಸ ಮಾಡಿದ್ದಾರೆ ಎಂಬುದು. ಅವರಿಗೆ ಸಿಕ್ಕಿರುವ ಅವಧಿ ಬಹಳ ಕಡಿಮೆ. ಅವರು ಕೆಲಸ ಮಾಡಲು ಅವಕಾಶ ಬೇಕು. ಈಗ ಅವರೊಬ್ಬರೆ ಇಲ್ಲ ಅವರ ಪರವಾಗಿ ನಾನೂ ಬಂದಿದ್ದೇನೆ. ಕೆಲಸ ಆಗಬೇಕು, ಜನರಿಗೆ ಒಳ್ಳೆಯದಾಗಬೇಕು. ಭಾರತೀಯನಾಗಿ ಮೋದಿ ಅವರ ಕಾರ್ಯಗಳನ್ನು ನಾನು ಮೆಚ್ಚುತ್ತೇನೆ. ವಿದೇಶಗಳಲ್ಲಿ ಹೋದರೆ ಭಾರತದ ಹೆಮ್ಮೆಯಾಗಿ ಮಾತನಾಡ್ತಾರೆ. ನಾನೂ ಸಹ ಸುಮ್ಮ-ಸುಮ್ಮನೆ ಪ್ರಚಾರಕ್ಕೆ ಬರುವವನಲ್ಲ. ಕೆಲಸಗಳಾಗುತ್ತವೆ ಎಂಬ ನಂಬಿಕೆ ಇದ್ದರೆ ಮಾತ್ರ ಬರ್ತೇನೆ” ಎಂದರು ಸುದೀಪ್.

ಸುದೀಪ್ ಅವರ ಬಿಜೆಪಿ ಪರ ಪ್ರಚಾರಕ್ಕೆ ಅಧಿಕೃತ ಚಾಲನೆ ದೊರೆತಿದ್ದು, ಸಿಎಂ ಪರವಾಗಿ ಇಂದು ಪ್ರಚಾರ ಆರಂಭಿಸಿದ್ದಾರೆ. ಇನ್ನು ಮತದಾನದ ಹಿಂದಿನ ದಿನದ ವರೆಗೆ ಸತತವಾಗಿ ಬೊಮ್ಮಾಯಿ ಅವರು ಸೂಚಿಸಿದ ವ್ಯಕ್ತಿಯ ಪರವಾಗಿ ಸುದೀಪ್ ಅವರು ಪ್ರಚಾರ ಮಾಡಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:58 pm, Wed, 19 April 23