Margaret Lover of Ramachari: ‘ಮಾರ್ಗರೇಟ್ ಲವರ್ ಆಫ್ ರಾಮಾಚಾರಿ’ ಚಿತ್ರದಲ್ಲಿ ಅಭಿಲಾಶ್-ಸೋನಲ್ ಜೋಡಿ
ಶೀರ್ಷಿಕೆಯ ಕಾರಣದಿಂದ ‘ಮಾರ್ಗರೇಟ್ ಲವರ್ ಆಫ್ ರಾಮಾಚಾರಿ’ ಚಿತ್ರ ಗಮನ ಸೆಳೆಯುತ್ತಿದೆ. ಶೀಘ್ರದಲ್ಲೇ ಈ ಸಿನಿಮಾಗೆ ಮುಹೂರ್ತ ನೆರವೇರಲಿದೆ. ಮೇ ತಿಂಗಳಲ್ಲಿ ಶೂಟಿಂಗ್ ಆರಂಭ ಆಗಲಿದೆ.
ಪುಟ್ಟಣ್ಣ ಕಣಗಾಲ್ ನಿರ್ದೇಶನ ಮಾಡಿದ ‘ನಾಗರಹಾವು’ ಸಿನಿಮಾ ಬಿಡುಗಡೆ ಆಗಿದ್ದು 1972ರಲ್ಲಿ. ವಿಷ್ಣುವರ್ಧನ್, ಆರತಿ, ಅಂಬರೀಷ್ ಮುಂತಾದವರು ನಟಿಸಿದ ಆ ಸಿನಿಮಾ ಎಂದರೆ ಕನ್ನಡ ಸಿನಿಪ್ರಿಯರಿಗೆ ಇಂದಿಗೂ ಫೇವರಿಟ್. ಕೆಲವು ವರ್ಷಗಳ ಹಿಂದೆ ಆ ಚಿತ್ರ ಮರುಬಿಡುಗಡೆಯಾಗಿ ಯಶಸ್ಸು ಕಂಡಿತ್ತು. ಅಷ್ಟಕ್ಕೂ ಅಂದಿನ ‘ನಾಗರಹಾವು’ ಬಗ್ಗೆ ಈಗ ಮಾತನಾಡಲು ಕಾರಣ ಏನು? ಅದಕ್ಕೆ ಉತ್ತರ ‘ಮಾರ್ಗರೇಟ್ ಲವರ್ ಆಫ್ ರಾಮಾಚಾರಿ’ (Margaret Lover of Ramachari). ಹೌದು, ಈ ಶೀರ್ಷಿಕೆಯಲ್ಲೊಂದು ಕನ್ನಡ ಸಿನಿಮಾ ಮೂಡಿಬರುತ್ತಿದೆ. ‘ನಾಗರಹಾವು’ ಚಿತ್ರದಲ್ಲಿ ರಾಮಾಚಾರಿ ಮತ್ತು ಮಾರ್ಗರೇಟ್ ನಡುವೆ ಲವ್ ಆಗುತ್ತದೆ. ಆ ಪಾತ್ರಗಳ ಹೆಸರನ್ನೇ ಇಟ್ಟುಕೊಂಡು ಹೊಸ ಸಿನಿಮಾಗೆ ಶೀರ್ಷಿಕೆ ಇಡಲಾಗಿದೆ. ಈ ಸಿನಿಮಾದಲ್ಲಿ ಅಭಿಲಾಶ್ (Abhilash) ಹಾಗೂ ಸೋನಲ್ ಮೊಂಥೆರೋ (Sonal Monteiro) ಅವರು ಮುಖ್ಯ ಭೂಮಿಕೆ ನಿಭಾಯಿಸಲಿದ್ದಾರೆ.
ಗಿರಿಧರ್ ಕುಂಬಾರ ಅವರು ‘ಮಾರ್ಗರೇಟ್ ಲವರ್ ಆಫ್ ರಾಮಾಚಾರಿ’ ಸಿನಿಮಾಗೆ ನಿರ್ದೇಶನ ಮಾಡಲಿದ್ದಾರೆ. 1972ರ ‘ನಾಗರಹಾವು’ ರೀತಿಯೇ ಈಗ ‘ಮಾರ್ಗರೇಟ್ ಲವರ್ ಆಫ್ ರಾಮಾಚಾರಿ’ ಚಿತ್ರದ ಶೂಟಿಂಗ್ ಕೂಡ ಚಿತ್ರದುರ್ಗದಲ್ಲಿ ನಡೆಯಲಿದೆ. ಅದನ್ನು ಹೊರತುಪಡಿಸಿದರೆ ಇದು ಬೇರೆಯದೇ ಕಥೆ ಇರುವಂತಹ ಸಿನಿಮಾ. ಶೀರ್ಷಿಕೆಯ ಕಾರಣದಿಂದ ಈ ಸಿನಿಮಾ ಬಗ್ಗೆ ಕುತೂಹಲ ಮೂಡುವಂತಾಗಿದೆ.
ಇದನ್ನೂ ಓದಿ: ಚಂದನವನದ ಸುಂದರಿ ಸೋನಲ್ ಮಾಂಥೆರೋ
ರಂಗಭೂಮಿ ಹಿನ್ನೆಲೆ ಹೊಂದಿರುವ ನಟ ಅಭಿಲಾಶ್ ಅವರು ‘ಮಾರ್ಗರೇಟ್ ಲವರ್ ಆಫ್ ರಾಮಾಚಾರಿ’ ಸಿನಿಮಾ ಮೂಲಕ ಹೀರೋ ಆಗುತ್ತಿದ್ದಾರೆ. ‘ಕೆಜಿಎಫ್’, ‘ಲವ್ ಮಾಕ್ಟೇಲ್’, ‘ಬಡವ ರಾಸ್ಕಲ್’, ‘ಗುರುದೇವ್ ಹೊಯ್ಸಳ’ ಮುಂತಾದ ಸಿನಿಮಾಗಳಲ್ಲೂ ನಟಿಸುವ ಮೂಲಕ ಅಭಿಲಾಶ್ ಗುರುತಿಸಿಕೊಂಡಿದ್ದಾರೆ. ‘ನಾಗರಹಾವು’ ಸಿನಿಮಾದಲ್ಲಿನ ಪಾತ್ರಗಳನ್ನು ಹೋಲುವ ರೀತಿಯ ಹೆಸರುಗಳನ್ನೇ ‘ಮಾರ್ಗರೇಟ್ ಲವರ್ ಆಫ್ ರಾಮಾಚಾರಿ’ ಸಿನಿಮಾದ ಪಾತ್ರಗಳಿಗೆ ಇಡಲಾಗಿದೆ.
ಇದನ್ನೂ ಓದಿ: ಸರೋಜಿನಿ ನಾಯ್ಡು ಬಯೋಪಿಕ್ನಲ್ಲಿ ಶಾಂತಿಪ್ರಿಯಾ, ಸೋನಲ್: ಪ್ಯಾನ್ ಇಂಡಿಯಾ ಚಿತ್ರಕ್ಕೆ ಕನ್ನಡಿಗನ ನಿರ್ದೇಶನ
ಅಭಿಲಾಶ್ ಅವರು ರಾಮಾಚಾರಿ ಅಲಿಯಾಸ್ ರಾಮು ಎಂಬ ಪಾತ್ರ ಮಾಡಲಿದ್ದಾರೆ. ನಟಿ ಸೋನಲ್ ಮೊಂಥೆರೋ ಅವರು ಮೀರಾ ರಾಘವ್ ರಾಮ್ ಅಲಿಯಾಸ್ ಮ್ಯಾಗಿ ಎಂಬ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಯಶ್ ಶೆಟ್ಟಿ ಅವರು ಜಯಂತ್ ಅಲಿಯಾಸ್ ಜಲೀಲಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ವಿಶೇಷ. ಅನುಭವಿ ನಟರಾದ ಅವಿನಾಶ್ ಮತ್ತು ರವಿಶಂಕರ್ ಮುಂತಾದವರು ಕೂಡ ನಟಿಸುತ್ತಿದ್ದಾರೆ.
ವನಿತಾ ಎಚ್.ಎನ್. ಅವರ ‘ನಿಹಾಂತ್ ಪ್ರೊಡಕ್ಷನ್ಸ್’ ಮೂಲಕ ‘ಮಾರ್ಗರೇಟ್ ಲವರ್ ಆಫ್ ರಾಮಾಚಾರಿ’ ಸಿನಿಮಾ ನಿರ್ಮಾಣ ಆಗಲಿದೆ. ಈ ಚಿತ್ರಕ್ಕೆ ವಾಸುಕಿ ವೈಭವ್ ಅವರು ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಏಪ್ರಿಲ್ ಕೊನೇ ವಾರದಲ್ಲಿ ಈ ಸಿನಿಮಾಗೆ ಮುಹೂರ್ತ ನೆರವೇರಲಿದೆ. ಮೇ ತಿಂಗಳಲ್ಲಿ ಶೂಟಿಂಗ್ ಆರಂಭ ಆಗಲಿದೆ ಎಂದು ‘ಸಿನಿಮಾ ಎಕ್ಸ್ಪ್ರೆಸ್’ ವರದಿ ಮಾಡಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.