ಎಲ್ಲೆಡೆ ದೀಪಾವಳಿ (Diwali 2022) ಹಬ್ಬವನ್ನು ಸಡಗರದಿಂದ ಆಚರಿಸಲಾಗುತ್ತಿದೆ. ಹಬ್ಬಕ್ಕೆ ಎಲ್ಲ ಸಿದ್ಧತೆಗಳು ನಡೆದಿವೆ. ಜನಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಎಲ್ಲರೂ ಬೆಳಕಿನ ಹಬ್ಬದಲ್ಲಿ ಹಲವು ಬಗೆಯ ಪೂಜೆಗಳನ್ನು ಮಾಡುತ್ತಾರೆ. ಹಿರಿಯ ನಟಿ ಸುಧಾರಾಣಿ (Sudharani) ಅವರ ಮನೆಯಲ್ಲೂ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಅದರ ಝಲಕ್ ತೋರಿಸಲು ಅವರು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಹಬ್ಬದ ಪೂಜೆಯ ಸಂದರ್ಭದಲ್ಲಿ ಅವರ ಮನೆಯ ಮುದ್ದಿನ ಶ್ವಾನ (Dog) ಕೂಡ ಭಾಗಿ ಆಗಿದೆ. ಇದನ್ನು ಕಂಡು ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಶ್ವಾನಪ್ರಿಯರಿಗೆ ಈ ವಿಡಿಯೋ ಸಖತ್ ಇಷ್ಟ ಆಗಿದೆ.
ಸುಧಾರಾಣಿ ಅವರು ಪ್ರಾಣಿಪ್ರಿಯೆ. ಮನೆಯಲ್ಲಿ ಎರಡು ಮುದ್ದಿನ ಶ್ವಾನಗಳನ್ನು ಸಾಕಿದ್ದಾರೆ. ಅವುಗಳನ್ನು ಮಕ್ಕಳಂತೆ ಅವರು ನೋಡಿಕೊಳ್ಳುತ್ತಾರೆ. ತಮ್ಮ ಮನೆಯ ನಾಯಿಗಳ ಬಗ್ಗೆ ಅವರು ಆಗಾಗ ವಿಡಿಯೋ ಹಂಚಿಕೊಳ್ಳುತ್ತಾರೆ. ಈಗ ಅವರು ಶೇರ್ ಮಾಡಿಕೊಂಡಿರುವ ಹೊಸ ವಿಡಿಯೋ ಹೆಚ್ಚು ಗಮನ ಸೆಳೆಯುತ್ತಿದೆ. ‘ದೀಪಾವಳಿ ಹಬ್ಬದ ಆಚರಣೆ ಶುರು ಮಾಡುತ್ತಿದ್ದೇವೆ. ನಾವಿಬ್ಬರೂ ಒಟ್ಟಿಗೆ ಆಶೀರ್ವಾದ ಪಡೆದೆವು. ಎಂಥಾ ಗುಡ್ ಬಾಯ್’ ಎಂದು ಪ್ರೀತಿಯ ಶ್ವಾನವನ್ನು ಹೊಗಳಿದ್ದಾರೆ ಸುಧಾರಾಣಿ.
ಸುಧಾರಾಣಿ ಅವರು ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ. ತಮ್ಮ ದಿನಚರಿ ಕುರಿತು ಅವರು ಆಗಾಗ ಅಪ್ಡೇಟ್ ನೀಡುತ್ತಾ ಇರುತ್ತಾರೆ. ಇನ್ಸ್ಟಾಗ್ರಾಮ್ನಲ್ಲಿ ಅವರನ್ನು 22 ಲಕ್ಷಕ್ಕೂ ಅಧಿಕ ಮಂದಿ ಫಾಲೋ ಮಾಡುತ್ತಿದ್ದಾರೆ. ಚಿತ್ರರಂಗದಲ್ಲಿ ಅವರು ಮಾಡಿದ ಸಾಧನೆ ಅಪಾರ. ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ಖ್ಯಾತಿ ಸುಧಾರಾಣಿ ಅವರಿಗೆ ಸಲ್ಲುತ್ತದೆ. ಈಗ ಪೋಷಕ ಪಾತ್ರಗಳ ಮೂಲಕ ಅವರು ಜನರನ್ನು ರಂಜಿಸುತ್ತಿದ್ದಾರೆ. ಇಂದಿಗೂ ಅದೇ ಚಾರ್ಮ್ ಉಳಿಸಿಕೊಂಡಿದ್ದಾರೆ.
ಅಭಿನಯದಲ್ಲಿ ಸುಧಾರಾಣಿ ಅವರು ಅನೇಕ ಹೊಸ ನಟಿಯರಿಗೆ ಸ್ಫೂರ್ತಿ ಆಗಿದ್ದಾರೆ. ಈಗ ಅವರು ಕಿರುತೆರೆಯಲ್ಲಿ ಹೊಸ ಜರ್ನಿ ಆರಂಭಿಸುತ್ತಿದ್ದಾರೆ. ಧಾರಾವಾಹಿಯೊಂದರಲ್ಲಿ ಸುಧಾರಾಣಿ ಮುಖ್ಯ ಭೂಮಿಕೆ ನಿಭಾಯಿಸುತ್ತಿದ್ದಾರೆ. ಜೀ ಕನ್ನಡದಲ್ಲಿ ಪ್ರಸಾರ ಆಗಲಿರುವ ಈ ಧಾರಾವಾಹಿಗೆ ‘ಶ್ರೀರಸ್ತು ಶುಭಮಸ್ತು’ ಎಂದು ಶೀರ್ಷಿಕೆ ಇಡಲಾಗಿದೆ. ಇದರ ಪ್ರೋಮೋ ಗಮನ ಸೆಳೆಯುತ್ತಿದೆ.
ಅಕ್ಟೋಬರ್ 31ರಂದು ‘ಶ್ರೀರಸ್ತು ಶುಭಮಸ್ತು’ ಸೀರಿಯಲ್ ಆರಂಭ ಆಗಲಿದೆ. ಇನ್ಸ್ಟಾಗ್ರಾಮ್ನಲ್ಲಿ ಸುಧಾರಾಣಿ ಅವರು ಇದರ ಪ್ರೋಮೋ ಹಂಚಿಕೊಂಡಿದ್ದಾರೆ. ‘ಹೊಸ ಪಯಣ ಆರಂಭಿಸುತ್ತಿದ್ದೇನೆ. ನಿಮ್ಮೆಲ್ಲರ ಪ್ರೀತಿ ಮತ್ತು ಬೆಂಬಲ ಬೇಕಿದೆ’ ಎಂದು ಅವರು ಬರೆದುಕೊಂಡಿದ್ದಾರೆ. ರಾತ್ರಿ 8.30ಕ್ಕೆ ಈ ಸೀರಿಯಲ್ ಪ್ರಸಾರ ಆಗಲಿದೆ. ಕಿರುತೆರೆಯಲ್ಲಿ ಸುಧಾರಾಣಿ ಅವರನ್ನು ನೋಡಲು ಫ್ಯಾನ್ಸ್ ಕಾದಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:38 am, Mon, 24 October 22