Sudha Rani Birthday: ಕೇವಲ ಮೂರನೇ ವರ್ಷಕ್ಕೆ ಮೊದಲ ಬಾರಿಗೆ ಕ್ಯಾಮೆರಾ ಎದುರಿಸಿದ ನಟಿ ಸುಧಾರಾಣಿ ನಂತರ ಈ ದಿಗ್ಗಜರೊಂದಿಗೆ ತೆರೆ ಹಂಚಿಕೊಂಡರು

Sudha Rani best Movies: ಕನ್ನಡದ ಖ್ಯಾತ ನಟಿ ಸುಧಾರಾಣಿಯವರ ಜನ್ಮದಿನವಿಂದು. ಈ ಹಿನ್ನೆಲೆಯಲ್ಲಿ ಕನ್ನಡದ ಖ್ಯಾತ ನಟರೊಂದಿಗೆ ಅವರು ಅಭಿನಯಿಸಿದ ಯಶಸ್ವೀ ಚಿತ್ರಗಳನ್ನು ಇಲ್ಲಿ ಸ್ಮರಿಸಲಾಗಿದೆ.

Sudha Rani Birthday: ಕೇವಲ ಮೂರನೇ ವರ್ಷಕ್ಕೆ ಮೊದಲ ಬಾರಿಗೆ ಕ್ಯಾಮೆರಾ ಎದುರಿಸಿದ ನಟಿ ಸುಧಾರಾಣಿ ನಂತರ ಈ ದಿಗ್ಗಜರೊಂದಿಗೆ ತೆರೆ ಹಂಚಿಕೊಂಡರು
ಸುಧಾರಾಣಿ

ಕನ್ನಡದ ಖ್ಯಾತ ನಟಿ ಸುಧಾರಾಣಿ ಮೊದಲ ಬಾರಿಗೆ ಕ್ಯಾಮೆರಾ ಎದುರಿಸಿದ್ದು ಅವರ ಮೂರನೆಯ ವರ್ಷದಲ್ಲಿ. ಜಾಹಿರಾತೊಂದರಲ್ಲಿ ತಮ್ಮ ಸಹೋದರನೊಂದಿಗೆ ಕಾಣಿಸಿಕೊಂಡ ನಂತರ ಪ್ರಾರಂಭವಾದ ಅವರ ಪಯಣ, ಯಶಸ್ವಿಯಾಗಿ ಸಾಗುತ್ತಲೇ ಇದೆ. ಕನ್ನಡದ ನಟನಾ ದಿಗ್ಗಜರೊಂದಿಗೆ ತೆರೆ ಹಂಚಿಕೊಂಡಿರುವ ಅವರು ಹಲವಾರು ಹಿಟ್ ಚಿತ್ರಗಳನ್ನು ನೀಡಿದವರು. ಈಗ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾ, ಧ್ವನಿ ಕಲಾವಿದೆಯಾಗಿ ಕೆಲಸ ಮಾಡುತ್ತಾ ಚಿತ್ರರಂಗದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಇಂದು ಸುಧಾರಾಣಿಯವರ ಜನ್ಮದಿನ. 1970ರ ಆಗಸ್ಟ್ 14ರಂದು ಜನಿಸಿದ ಸುಧಾರಾಣಿಯವರ ಮೊದಲಿನ ಹೆಸರು ಜಯಶ್ರೀ. ಚಿತ್ರರಂಗಕ್ಕೆ ಸುಧಾರಾಣಿ ಎಂದು ಪರಿಚಿತರಾದ ಅವರು ಐವತ್ತು ವಸಂತಗಳನ್ನು ಪೂರೈಸಿದ್ದಾರೆ. ಈ ಹಿನ್ನೆಲೆಯಲ್ಲಿ ಕನ್ನಡದ ಖ್ಯಾತ ಹೀರೋಗಳೊಂದಿಗೆ ಅವರು ನಟಿಸಿದ ಯಶಸ್ವೀ ಚಿತ್ರಗಳನ್ನು ಇಲ್ಲಿ ನೀಡಲಾಗಿದೆ.

ಡಾ.ರಾಜ್​ಕುಮಾರ್ ಮಗಳಾಗಿ ನಟಿಸಿದ್ದ ಸುಧಾರಾಣಿ: ಸುಧಾರಾಣಿಯವರು ಬಾಲ ಕಲಾವಿದೆಯಾಗಿ ಕನ್ನಡದ ಮೇರು ನಟ ಡಾ.ರಾಜ್​ಕುಮಾರ್ ಅವರೊಂದಿಗೆ ಕೆಲವು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ದೇವತಾ ಮನುಷ್ಯ ಚಿತ್ರದಲ್ಲಿ ಸುಧಾರಾಣಿ ರಾಜ್​ಕುಮಾರ್ ಮಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ರಾಜ್ ಅಭಿನಯದ ‘ಭಾಗ್ಯವಂತ’ ಹಾಗೂ ‘ಜೀವನ ಚೈತ್ರ’ ಚಿತ್ರದಲ್ಲೂ ಸುಧಾರಾಣಿ ಕಾಣಿಸಿಕೊಂಡಿದ್ದಾರೆ.

ತೆರೆಯ ಮೇಲೆ ಮೋಡಿ ಮಾಡಿದ್ದ ಶಿವರಾಜ್ ಕುಮಾರ್ ಹಾಗೂ ಸುಧಾರಾಣಿ ಜೋಡಿ:

Sudharani

ಆನಂದ್ ಚಿತ್ರದಲ್ಲಿ ಶಿವರಾಜ್​ಕುಮಾರ್ ಹಾಗೂ ಸುಧಾರಾಣಿ

‘ಆನಂದ್’ ಚಿತ್ರಕ್ಕೆ ನಾಯಕಿಯಾಗುವ ಮೂಲಕ ಪರಿಪೂರ್ಣ ನಾಯಕಿಯಾಗಿ ಸುಧಾರಾಣಿ ಮೊದಲ ಬಾರಿಗೆ ಕಾಣಿಸಿಕೊಂಡರು. ಆ ಚಿತ್ರದ ಯಶಸ್ಸು ಶಿವಾರಾಜ್ ಕುಮಾರ್ ಹಾಗೂ ಸುಧಾರಾಣಿ ಹಲವು ಚಿತ್ರಗಳಲ್ಲಿ ಒಟ್ಟಿಗೆ ನಟಿಸುವಂತೆ ಮಾಡಿತು. ಈರ್ವರೂ ಉತ್ತಮ ನೃತ್ಯಗಾರರಾಗಿದ್ದರಿಂದ ಅವರ ಚಿತ್ರಗಳಲ್ಲಿ ಡಾನ್ಸ್​ಗೆ ವಿಶೇಷ ಪ್ರಾಧಾನ್ಯವಿರುತ್ತಿತ್ತು. ಈ ಜೋಡಿ ಸುಮಾರು ಹತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ತೆರೆ ಹಂಚಿಕೊಂಡಿದ್ದು, ಮನ ಮೆಚ್ಚಿದ ಹುಡುಗಿ, ಸಮರ, ಆಸೆಗೊಬ್ಬ ಮೀಸೆಗೊಬ್ಬ, ಅಣ್ಣ ತಂಗಿ, ಮಿಡಿದ ಶೃತಿ ಮೊದಲಾದವುಗಳು ಭರ್ಜರಿ ಯಶಸ್ಸು ಗಳಿಸಿದವು.

ರಮೇಶ್ ಅರವಿಂದ್ ಮತ್ತು ಸುಧಾರಾಣಿ ಜೋಡಿ:

ಶಿವರಾಜ್​ಕುಮಾರ್ ನಂತರ ಸುಧಾ ರಾಣಿ ಅತೀ ಹೆಚ್ಚು ಕಾಣಿಸಿಕೊಂಡಿದ್ದು ರಮೇಶ್ ಅರವಿಂದ್ ಅವರ ಚಿತ್ರಗಳಲ್ಲಿ. ಪಂಚಮ ವೇದ, ಶ್ರೀಗಂಧ, ಅರಗಿಣಿ, ಅನುರಾಗ ಸಂಗಮ ಸೇರಿದಂತೆ ಸುಮಾರು 8ಕ್ಕೂ ಅಧಿಕ ಚಿತ್ರಗಳಲ್ಲಿ ಈ ಜೋಡಿ ತೆರೆ ಹಂಚಿಕೊಂಡರು. 90ರ ಕಾಲಘಟ್ಟದಲ್ಲಿ ಶೃತಿ, ಮಾಲಾಶ್ರೀ ಅವರೊಂದಿಗೆ ಮುಂಚೂಣಿಯಲ್ಲಿದ್ದ ನಾಯಕಿಯೆಂದರೆ ಅದು ಸುಧಾ ರಾಣಿ. ಈ ಕುರಿತು ಒಮ್ಮೆ ಮಾತನಾಡಿದ್ದ ಅವರು, ನಾವು ಮೂವರು ತೆರೆಯ ಮೇಲೆ ಪೈಪೋಟಿಯಲ್ಲಿದ್ದಂತೆ ಅನಿಸುತ್ತಿತ್ತು. ಆದರೆ ನಿಜ ಜೀವನದಲ್ಲಿ ನಾವು ಉತ್ತಮ ಸ್ನೇಹಿತರು ಎಂದಿದ್ದರು.

ವಿಷ್ಣುವರ್ಧನ್ ಮತ್ತು ಸುಧಾರಾಣಿ:

ವಿಷ್ಣುವರ್ಧನ್ ಅಭಿನಯದ ಕಿಲಾಡಿ ಕಿಟ್ಟು ಚಿತ್ರದಲ್ಲಿ ಸುಧಾರಾಣಿ ಬಾಲ ಕಲಾವಿದೆಯಾಗಿ ಕಾಣಿಸಿಕೊಂಡಿದ್ದರು. ನಂತರ ಮಹಾಕ್ಷತ್ರಿಯ ಚಿತ್ರದಲ್ಲಿ ಪ್ರಮುಖ ಪಾತ್ರವೊಂದನ್ನು ಸುಧಾರಾಣಿ ನಿರ್ವಹಿಸಿದ್ದರು. ‘ಕೋಣ ಈದೈತೆ’ ಚಿತ್ರದಲ್ಲಿ ವಿಷ್ಣುವರ್ಧನ್ ಪತ್ನಿಯಾಗಿ ಅತಿಥಿ ಪಾತ್ರವನ್ನು ಸುಧಾರಾಣಿ ನಿರ್ವಹಿಸಿದ್ದರು.

ಅಂಬರೀಷ್ ಜೊತೆ ಮೂರು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ಸುಧಾರಾಣಿ:

ರೆಬೆಲ್ ಸ್ಟಾರ್ ಅಂಬರೀಷ್ ಅವರೊಂದಿಗೆ ಸುಧಾರಾಣಿ ಮೂರು ಚಿತ್ರಗಳಲ್ಲಿ ತೆರೆ ಹಂಚಿಕೊಂಡಿದ್ದರು. ಮಣ್ಣಿನ ದೋಣಿ, ಸಪ್ತಪದಿ ಹಾಗೂ ಮುಂಜಾನೆಯ ಮಂಜು ಚಿತ್ರದಲ್ಲಿನ ಈ ಜೋಡಿಯ ನಟನೆ ಅಭಿಮಾನಿಗಳಿಗೆ ಪ್ರಿಯವಾಗಿತ್ತು.

ರವಿಚಂದ್ರನ್, ಸುಧಾರಾಣಿ: 

1993ರಲ್ಲಿ ತೆರೆಕಂಡ ‘ಮನೆ ದೇವ್ರು’ ಚಿತ್ರದಲ್ಲಿ ನಟ ರವಿಚಂದ್ರನ್ ಅವರೊಂದಿಗೆ ಸುಧಾರಾಣಿ ಅಭಿನಯಿಸಿದ್ದರು. ಈ ಚಿತ್ರ ಹಿಟ್ ಆಗಿದ್ದಲ್ಲದೇ ದೊಡ್ಡ ಹೆಸರು ತಂದುಕೊಟ್ಟಿತು. ಈ ಚಿತ್ರವನ್ನು ಸ್ವತಃ ರವಿಚಂದ್ರನ್ ನಿರ್ದೇಶಿಸಿದ್ದು, ಚಿತ್ರದಲ್ಲಿ ಕೆ.ಎಸ್.ಅಶ್ವತ್ಥ್, ಟೆನ್ನಿಸ್ ಕೃಷ್ಣ ಮೊದಲಾದವರು ಕಾಣಿಸಿಕೊಂಡಿದ್ದರು.

ಸುಧಾರಾಣಿಯವರು ನಟ ಸುದೀಪ್ ಅವರೊಂದಿಗೆ ಸ್ಪರ್ಶ ಚಿತ್ರದಲ್ಲಿ ತೆರೆ ಹಂಚಿಕೊಂಡಿದ್ದರು. ಅವರು ‘ಅನ್ನಾಕಿ ಸೊನ್ನ ಕಥೈ’, ‘ವಸಂತಕಾಲ ಪರವಾಯಿ’ ಮೊದಲಾದ ತಮಿಳು ಚಿತ್ರಗಳಲ್ಲೂ ಬಣ್ಣ ಹಚ್ಚಿದ್ದು, ಅದು ಅವರಿಗೆ ಕಮರ್ಷಿಯಲ್ ಯಶಸ್ಸನ್ನು ತಂದುಕೊಟ್ಟಿದ್ದವು. ಸುಧಾರಾಣಿಯವರು ಸುಮಾರು 80ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದು, ಅದರಲ್ಲಿ ಅನೇಕ ಚಿತ್ರಗಳು ನಾಯಕಿ ಪ್ರಧಾನ ಚಿತ್ರಗಳು ಎಂಬುದು ವಿಶೇಷ. ಪ್ರಸ್ತುತ ಧ್ವನಿ ಕಲಾವಿದೆಯಾಗಿಯೂ ಅವರು ಕಾರ್ಯ ನಿರ್ವಹಿಸುತ್ತಿದ್ದು, ಸುದೀಪ್ ಅಭಿನಯದ ‘ಮಾಣಿಕ್ಯ’ ಚಿತ್ರದಲ್ಲಿ ನಟಿ ರಮ್ಯಾ ಕೃಷ್ಣ ಅವರಿಗೆ ಸುಧಾ ರಾಣಿ ಧ್ವನಿಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.ಇದಲ್ಲದೇ ಪರಭಾಷೆಯ ಹಲವು ನಟಿಯರು ಕನ್ನಡದಲ್ಲಿ ಅಭಿನಯಿಸಿದಾಗ ಸುಧಾರಾಣಿಯವರು ಅವರಿಗೆ ಧ್ವನಿ ನೀಡಿದ್ದಾರೆ.

ಇದನ್ನೂ ಓದಿ:

Kannada Patriotic Movies: ದೇಶದ ಸ್ವಾತಂತ್ರ್ಯದ ಕುರಿತು ಮೈ ನವಿರೇಳಿಸುವ ಕನ್ನಡದ ದೇಶಭಕ್ತಿ ಸಿನಿಮಾಗಳು

ಸ್ಯಾಂಡಲ್​ವುಡ್​ ಡ್ರಗ್​ ಕೇಸ್​: ಇನ್ನೂ ಸಿಸಿಬಿ ಕೈಗೆ ಸೇರಿಲ್ಲ ರಾಗಿಣಿ, ಸಂಜನಾ ಹೇರ್ ಸ್ಯಾಂಪಲ್​ನ ವರದಿ

(Sandalwood actress Sudha Rani best movies with top kannada heroes)

Read Full Article

Click on your DTH Provider to Add TV9 Kannada