ಸ್ಯಾಂಡಲ್​ವುಡ್​ ಡ್ರಗ್​ ಕೇಸ್​: ಇನ್ನೂ ಸಿಸಿಬಿ ಕೈಗೆ ಸೇರಿಲ್ಲ ರಾಗಿಣಿ, ಸಂಜನಾ ಹೇರ್ ಸ್ಯಾಂಪಲ್​ನ ವರದಿ

Ragini Dwivedi | Sanjana Galrani: ಹೈದರಾಬಾದ್​ನ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಹೇರ್ ಸ್ಯಾಂಪಲ್ ಕಳಿಸಿಕೊಡಲಾಗಿತ್ತು. ಆದರೆ ಈವರೆಗೂ ಪೊಲೀಸರ ಕೈಗೆ ಸ್ಯಾಂಪಲ್​ನ ರಿಪೋರ್ಟ್ ತಲುಪಿಲ್ಲ ಎಂಬುದು ಅಚ್ಚರಿಯ ಸಂಗತಿ.

ಸ್ಯಾಂಡಲ್​ವುಡ್​ ಡ್ರಗ್​ ಕೇಸ್​: ಇನ್ನೂ ಸಿಸಿಬಿ ಕೈಗೆ ಸೇರಿಲ್ಲ ರಾಗಿಣಿ, ಸಂಜನಾ ಹೇರ್ ಸ್ಯಾಂಪಲ್​ನ ವರದಿ
ರಾಗಿಣಿ, ಸಂಜನಾ

ಸ್ಯಾಂಡಲ್​ವುಡ್​ನಲ್ಲಿ ಭಾರಿ ಸಂಚಲನ ಮೂಡಿಸಿದ್ದ ಡ್ರಗ್ಸ್​ ಪ್ರಕರಣ (Sandalwood Drug Case) ಬೆಳಕಿಗೆ ಬಂದು ಒಂದು ವರ್ಷ ಸಮೀಪಿಸುತ್ತಿದೆ. ಅಂತಿಮವಾಗಿ ಈ ಕೇಸ್​ನಲ್ಲಿ ಯಾರು ನಿಜವಾದ ಅಪರಾಧಿಗಳು ಎಂಬುದು ಇನ್ನೂ ತಿಳಿದುಬಂದಿಲ್ಲ. ಮಾದಕ ವಸ್ತು ಜಾಲದ ಜೊತೆ ನಂಟು ಹೊಂದಿದ್ದರು ಎಂಬ ಆರೋಪದ ಮೇಲೆ ನಟಿ ರಾಗಿಣಿ ದ್ವಿವೇದಿ (Ragini Dwivedi), ಸಂಜನಾ ಗಲ್ರಾನಿ (Sanjana Galrani) ಮುಂತಾದವರನ್ನು ಪೊಲೀಸರು ಬಂಧಿಸಿದ್ದರು. ಹಲವು ತಿಂಗಳು ಪರಪ್ಪನ ಅಗ್ರಹಾರದಲ್ಲಿ ಕಾಲ ಕಳೆದ ಬಳಿಕ ಅವರು ಜಾಮೀನು ಪಡೆದು ಹೊರಬಂದರು. ಇಷ್ಟು ದಿನ ಕಳೆದರೂ ಸಿಸಿಬಿ ಪೊಲೀಸರಿಗೆ ಮುಖ್ಯವಾದ ವರದಿಯೇ ಕೈಸೇರಿಲ್ಲ. ಆರೋಪಿಗಳ ಎಫ್ಎಸ್ಎಲ್ ರಿಪೋರ್ಟ್​ಗಾಗಿ ತನಿಖಾಧಿಕಾರಿಗಳು ಕಾದು ಕುಳಿತಿದ್ದಾರೆ.

ಆರೋಪಿಗಳನ್ನು ಬಂಧಿಸಿದ ಬಳಿಕ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ಸೇರಿದಂತೆ 10ಕ್ಕೂ ಹೆಚ್ಚು ಮಂದಿಯ ಸ್ಯಾಂಪಲ್​ಗಳನ್ನು ಪ್ರಯೋಗಾಲಯಕ್ಕೆ ಕಳಿಸಲಾಗಿತ್ತು. ಹೇರ್ ಸ್ಯಾಂಪಲ್, ರಕ್ತದ ಮಾದರಿ ಮತ್ತು ಯೂರಿನ್ ಸ್ಯಾಂಪಲ್ ಸಂಗ್ರಹ ಮಾಡಲಾಗಿತ್ತು. ಹೈದರಾಬಾದ್​ನ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಹೇರ್ ಸ್ಯಾಂಪಲ್ ಕಳಿಸಿಕೊಡಲಾಗಿತ್ತು. ಆದರೆ ಈವರೆಗೂ ಪೊಲೀಸರ ಕೈಗೆ ಸ್ಯಾಂಪಲ್​ನ ರಿಪೋರ್ಟ್ ತಲುಪಿಲ್ಲ ಎಂಬುದು ಅಚ್ಚರಿಯ ಸಂಗತಿ.

ಪ್ರಕರಣದಲ್ಲಿ ಇದೇ ಮೊದಲ ಬಾರಿಗೆ ಹೇರ್ ಸ್ಯಾಂಪಲ್ ಟೆಸ್ಟ್​ಗೆ ಕಳಿಸಲಾಗಿತ್ತು. ಇದರ ವರದಿ ಬಂದರೆ ಅದು ಬಹುಮುಖ್ಯ ಸಾಕ್ಷಿ ಆಗಲಿದೆ. ಆರೋಪಿಗಳು ಡ್ರಗ್ಸ್ ಸೇವಿಸಿದ್ದರಾ ಅಥವಾ ಇಲ್ಲವಾ ಎಂಬುದನ್ನು ಈ ವರದಿ ಆಧರಿಸಿ ದೃಢಪಡಿಸಬಹುದು. ಒಮ್ಮೆ ಸರಿಯಾದ ರೀತಿಯಲ್ಲಿ ಹೇರ್​ ಸ್ಯಾಂಪಲ್​ ಕಳಿಸಿಲ್ಲ ಎಂಬ ಹಿನ್ನೆಲೆಯಲ್ಲಿ ಎರಡನೇ ಬಾರಿ ರವಾನೆ ಮಾಡಲಾಗಿತ್ತು. ಅದಾಗಿ ಬರೋಬ್ಬರಿ ವರ್ಷವಾಗುತ್ತಾ ಬಂದರೂ ಎಫ್ಎಸ್ಎಲ್ ರಿಪೋರ್ಟ್ ಇನ್ನೂ ಬಂದಿಲ್ಲ.

ಹೈದರಾಬಾದ್ ಎಫ್ಎಸ್ಎಲ್ ಕೇಂದ್ರಕ್ಕೆ ದೇಶದ ಹಲವೆಡೆಯಿಂದ ಸ್ಯಾಂಪಲ್ಸ್ ರವಾನೆ ಆಗುತ್ತವೆ. ನೂರಾರು ಪ್ರಕರಣಗಳ ತನಿಖೆಯ ಒತ್ತಡ ಇರುತ್ತದೆ. ಆದ್ದರಿಂದ ರಿಪೋರ್ಟ್ ಬರುವುದು ವಿಳಂಬ ಆಗಿರಬಹುದು ಎನ್ನಲಾಗುತ್ತಿದೆ. ಇದರಿಂದಾಗಿ ಎಫ್ಎಸ್ಎಲ್ ರಿಪೋರ್ಟ್ ಇಂದು ಬರುತ್ತೆ, ನಾಳೆ ಬರುತ್ತೆ ಎಂದು ತನಿಖಾ ತಂಡ ಕಾಯುವ ಪರಿಸ್ಥಿತಿ ಬಂದಿದೆ. ಕೇಸ್​ಗೆ ಸಂಬಂಧಿಸಿದಂತೆ ಕನ್ನಡ ಚಿತ್ರರಂಗ ಮತ್ತು ಕಿರುತೆರೆ ಲೋಕದ ಅನೇಕರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು.

ಇದನ್ನೂ ಓದಿ:

ಡ್ರಗ್ಸ್ ವಿಚಾರದಲ್ಲಿ ನನ್ನನ್ನು ಟಾರ್ಗೆಟ್ ಮಾಡಲಾಗಿದೆ; ನನಗೆ ಕಾಸ್ಟಿಂಗ್ ಕೌಚ್ ಎಕ್ಸ್​​ಪೀರಿಯನ್ಸ್ ಆಗಿಲ್ಲ: ರಾಗಿಣಿ ದ್ವಿವೇದಿ

ಕೊವಿಡ್​ ಸಂಕಷ್ಟದಲ್ಲಿದ್ದವರಿಗೆ ಊಟ ಹಂಚಲು ಸ್ವಂತ ಪಾರ್ಟಿ ಹಾಲ್​​​ಅನ್ನು ಕಿಚನ್​ ಆಗಿ ಬದಲಾಯಿಸಿದ ನಟಿ ರಾಗಿಣಿ

(Sandalwood Drug Case: CCB team yet to receive FSL report of Ragini Dwivedi Sanjana Galrani)

Click on your DTH Provider to Add TV9 Kannada