ನಿರಾಶ್ರಿತರು, ಬಡವರಿಂದ ಬಿಡುಗಡೆ ಆಯ್ತು ‘ಸುಮಾ’ ಸಿನಿಮಾ ಟ್ರೇಲರ್
‘ಇದು ಜನಸಾಮಾನ್ಯರ ಕಥೆ ಆಗಿರುವುದರಿಂದ, ಈ ಸಿನಿಮಾದ ಟ್ರೇಲರ್ ಅನ್ನು ಜನಸಾಮಾನ್ಯರ ಕೈಯಲ್ಲಿ ಬಿಡುಗಡೆ ಮಾಡಿಸಿದ್ದೇವೆ’ ಎಂದು ನಿರ್ದೇಶಕಿ ರಶ್ಮಿ ಎಸ್. ಅವರು ಹೇಳಿದ್ದಾರೆ. ಅಕ್ಟೋಬರ್ 2ರಂದು ರಾಜ್ಯಾದ್ಯಂತ ಈ ಸಿನಿಮಾ ಬಿಡುಗಡೆ ಆಗಲಿದೆ. ಪ್ರದೀಪ್ ಗೌಡ ಮತ್ತು ಮಾನ್ಯತಾ ನಾಯ್ಡು ಅವರು ಈ ಸಿನಿಮಾದಲ್ಲಿ ಮುಖ್ಯ ಪಾತ್ರಗಳನ್ನು ಮಾಡಿದ್ದಾರೆ.

‘ಓಂ ಸಾಯಿ ಸಿನಿಮಾಸ್’ ಬ್ಯಾನರಿನಲ್ಲಿ ನಿರ್ಮಾಣ ಆಗಿರುವ ಮಹಿಳಾ ಪ್ರಧಾನ ಕಥಾಹಂದರ ಹೊಂದಿರುವ ‘ಸುಮಾ’ ಸಿನಿಮಾದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಯಿತು. ಸಾಮಾನ್ಯವಾಗಿ ಸೆಲೆಬ್ರಿಟಿಗಳು ಅಥವಾ ಗಣ್ಯರ ಕೈಯಲ್ಲಿ ಬಹುತೇಕ ಸಿನಿಮಾಗಳ ಟ್ರೇಲರ್ ಬಿಡುಗಡೆ ಮಾಡಿಸುವುದು ಚಿತ್ರರಂಗದಲ್ಲಿರುವ ವಾಡಿಕೆ. ಆದರೆ ಇದಕ್ಕೆ ಅಪವಾದ ಎಂಬಂತೆ ‘ಸುಮಾ’ ಚಿತ್ರತಂಡದವರು ತಮ್ಮ ಚಿತ್ರದ ಟ್ರೇಲರ್ ಅನ್ನು ನಿರಾಶ್ರಿತರು ಮತ್ತು ಬಡವರ ಕೈಯಲ್ಲಿ ಬಿಡುಗಡೆ ಮಾಡಿಸಿದ್ದಾರೆ.
ಈ ಮೂಲಕ ಹೊಸ ಸಂಪ್ರದಾಯಕ್ಕೆ ‘ಸುಮಾ’ ಚಿತ್ರತಂಡ ನಾಂದಿ ಹಾಡಿದೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಲಾಗಿದೆ. ಈ ವೇಳೆ ಸಿನಿಮಾದ ಕಲಾವಿದರು, ತಂತ್ರಜ್ಞರು ಸೇರಿದಂತೆ ಅನೇಕರು ಹಾಜರಿದ್ದರು. ಈ ಹಿಂದೆ ಕನ್ನಡದಲ್ಲಿ ‘ಶ್ರೀಕಬ್ಬಾಳಮ್ಮನ ಮಹಿಮೆ’, ‘ಮನೆ’, ‘ಬ್ಯಾಂಕ್ ಲೋನ್’, ‘ಸುಳಿ’ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ ರಶ್ಮಿ ಎಸ್. (ಸಾಯಿ ರಶ್ಮಿ) ಅವರು ಈಗ ‘ಸುಮಾ’ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ.
View this post on Instagram
ರಶ್ಮಿ ಎಸ್. ಅವರು ನಿರ್ದೇಶನ ಮಾಡುವುದರ ಜೊತೆಗೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಮೈಸೂರು ಮೂಲದ ಪ್ರದೀಪ್ ಗೌಡ ಅವರು ಈ ಚಿತ್ರದಲ್ಲಿ ಹೀರೋ ಆಗಿ ಅಭಿನಯಿಸಿದ್ದಾರೆ. ಹಿರಿಯ ನಟ ಹಾಗೂ ನಿರ್ದೇಶಕ ಜೋ ಸೈಮನ್ ಅವರು ಅಭಿನಯಿಸಿದ್ದ ಕೊನೆ ಸಿನಿಮಾ ಇದಾಗಿದೆ. ಈ ಚಿತ್ರದಲ್ಲಿ ಅವರೊಂದು ಪ್ರಮುಖ ಪಾತ್ರವನ್ನು ಮಾಡಿದ್ದಾರೆ.
‘ಸುಮಾ’ ಸಿನಿಮಾದ ಟ್ರೇಲರ್:
ಬಾಲ ರಾಜವಾಡಿ, ವಿಜಯಲಕ್ಷ್ಮಿ ಉಪಾಧ್ಯಾಯ, ಮುರಳೀಧರ್ ಡಿ. ಆರ್, ಕಾವ್ಯ ಪ್ರಕಾಶ್, ಕುಮಾರಿ ಬೈರವಿ, ಪವಿತ್ರ ಅವಿನಾಶ್, ಸಿದ್ದು ಮಂಡ್ಯ, ಅವಿನಾಶ ಗಂಜೀಹಾಳ, ಶಿವಕುಮಾರ್ ಆರಾಧ್ಯ, ಹರಿಹರನ್ ಬಿ.ಪಿ. ಮುಂತಾದವರು ‘ಸುಮಾ’ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ. ವಿ. ನಾಗೇಂದ್ರ ಪ್ರಸಾದ್ ಅವರು ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ: ಮಹಿಳಾ ಪ್ರಧಾನ ಸಿನಿಮಾಗಳತ್ತ ಹೊರಳುತ್ತಿರುವ ನಟಿ ರಶ್ಮಿಕಾ ಮಂದಣ್ಣ
ಸುದ್ದಿಗೋಷ್ಠಿ ವೇಳೆ ನಿರ್ದೇಶಕಿ ಸಾಯಿ ರಶ್ಮಿ ಅವರು ಮಾತನಾಡಿದರು. ‘ಇದೊಂದು ಮಹಿಳಾ ಪ್ರಧಾನ ಕಥಾಹಂದರದ ಸಿನಿಮಾ. ಸುಮಾ ಅಂದರೆ ಸಂಪೂರ್ಣ ಮೊಗ್ಗು ಅಲ್ಲದ, ಸಂಪೂರ್ಣ ಅರಳಿಯೂ ಇರದಂತಹ ಹೂವು. ಈ ಸಿನಿಮಾದ ನಾಯಕಿಯ ಪಾತ್ರ ಕೂಡ ಹಾಗೇ ಇರುವಂಥದ್ದು. ನಮ್ಮ ನಡುವೆಯೇ ಇರುವಂಥ ಹುಡುಗಿಯೊಬ್ಬಳ ಅಂತರಂಗದ ಕಥೆ ಈ ಚಿತ್ರದಲ್ಲಿದೆ’ ಎಂದು ಅವರು ಹೇಳಿದರು. ಮಂಡ್ಯ, ಮದ್ದೂರು, ಆಲಭುಜನಹಳ್ಳಿ, ನಗರಕೆರೆ, ಕೆ.ಎಂ. ದೊಡ್ಡಿ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




