ಅಂಬರೀಶ್ (Ambareesh) ಕಾಲವಾಗಿ ನಾಲ್ಕು ವರ್ಷಗಳ ಬಳಿಕ ಅವರ ಸ್ಮಾರಕ ನಿರ್ಮಾಣವಾಗಿದ್ದು ಸ್ಮಾರಕವನ್ನು ನಿನ್ನೆ (ಮಾರ್ಚ್ 27)ಯಷ್ಟೆ ಸಿಎಂ ಬಸವರಾಜ ಬೊಮ್ಮಾಯಿ, ಸಂಸದೆ ಸುಮಲತಾ ಅಂಬರೀಶ್ ಹಾಗೂ ಇತರೆ ಗಣ್ಯರು ಉದ್ಘಾಟಿಸಿದ್ದಾರೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾವಕರಾಗಿ ಮಾತನಾಡಿದ ಸುಮಲತಾ, ಅಂಬರೀಶ್ ತಮ್ಮ ಜೀವಿತಾವಧಿಯಲ್ಲಿ ಯಾರ ಬಳಿಯೂ ಕೈಚಾಚಿಲ್ಲ ಎಂದಿದ್ದರು. ಆದರೆ ಸುಮಲತಾ (Sumalatha Ambareesh) ಅವರ ಇದೇ ಮಾತನ್ನು ಮುಂದಿಸಿಕೊಂಡು, ನಟ, ಹೋರಾಟಗಾರ ಚೇತನ್ ಅಹಿಂಸಾ (Chetan Ahimsa), ಅಂಬರೀಶ್ ಯಾರ ಬಳಿಯೂ ಕೈಚಾಚಿರಲಿಲ್ಲ ಆದರೆ ಸ್ಮಾರಕ ನಿರ್ಮಾಣಕ್ಕಾಗಿ ಸುಮಲತಾ, ಸರ್ಕಾರದ ಬಳಿ ಕೈಚಾಚಿದ್ದಾರೆ ಎಂದಿದ್ದಾರೆ.
ಅಂಬರೀಶ್ ಸ್ಮಾರಕದ ಬಗ್ಗೆ ಹಾಗೂ ಅದಕ್ಕೆ ಖರ್ಚಾಗಿರುವ ಸರ್ಕಾರಿ ಹಣದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಚೇತನ್ ಅಹಿಂಸ, ಅನಗತ್ಯವಾಗಿದ್ದ ಅಂಬರೀಶ್ ಸ್ಮಾರಕ ನಿರ್ಮಾಣಕ್ಕೆ ಸುಮಲತಾರವರು ಅಂದಾಜು ಎರಡು ಎಕರೆ ಜಾಗ ಮತ್ತು 12 ಕೋಟಿ ರೂಪಾಯಿ ಹಣವನ್ನು ಸರ್ಕಾರದಿಂದ ‘ಕೈ ಚಾಚಿ’ ಪಡೆದಿರುವುದು ವಿಪರ್ಯಾಸವಾಗಿದೆ. ತೆರಿಗೆದಾರರ ಹಣವನ್ನು ಹೀಗೆ ದುರುಪಯೋಗಪಡಿಸಿಕೊಳ್ಳುವ ಬದಲು ಸುಮಲತಾರವರು ತಮ್ಮ ಸ್ವಂತದ 23.4 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲು ಸಾಧ್ಯವಾಗಲಿಲ್ಲವೇ? ಎಲ್ಲಾ ಉಳ್ಳವರಿಗೆ ಮತ್ತೆ ಸವಲತ್ತು ಒದಗಿಸುವುದು ನ್ಯಾಯವೇ? ಎಂದು ಪ್ರಶ್ನೆ ಮಾಡಿದ್ದಾರೆ.
ನಟರಾಗಿರುವ ಜೊತೆಗೆ ಸಾಮಾಜಿಕ ಹೋರಾಟಗಾರರೂ ಆಗಿರುವ ಚೇತನ್ ಅಹಿಂಸ, ಪ್ರಚಲಿತ ರಾಜಕೀಯ, ಸಾಮಾಜಿಕ ವಿದ್ಯಮಾನಗಳ ಬಗ್ಗೆ ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಅಭಿಪ್ರಾಯವನ್ನು ಹಿಂಜರಿಕೆಯಿಲ್ಲದೆ ಹಂಚಿಕೊಳ್ಳುತ್ತಲೇ ಬರುತ್ತಿದ್ದಾರೆ. ಇದೇ ಕಾರಣಕ್ಕೆ ಎರಡು ಬಾರಿ ಜೈಲು ವಾಸವನ್ನೂ ಅನುಭವಿಸಿದ್ದಾರೆ. ಕೆಲವು ದಿನಗಳ ಹಿಂದಷ್ಟೆ ಹಿಂದುತ್ವವನ್ನು ಅಪಮಾನಿಸಿದ ಪ್ರಕರಣದಲ್ಲಿ ಜೈಲು ಸೇರಿದ್ದ ಚೇತನ್ ಎರಡು ದಿನಗಳ ಬಳಿಕ ಜಾಮೀನು ಪಡೆದು ಹೊರಬಂದಿದ್ದಾರೆ. ಕಳೆದ ವರ್ಷವೂ ಸಹ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಪೋಸ್ಟ್ ಒಂದರ ಕಾರಣಕ್ಕಾಗಿಯೇ ಬಂಧಿತರಾಗಿ ಹದಿನಾಲ್ಕು ದಿನಗಳ ಕಾಲ ಜೈಲಿನಲ್ಲಿದ್ದು ಜಾಮೀನಿನ ಮೇಲೆ ಹೊರಗೆ ಬಂದಿದ್ದರು.
ಅಂಬರೀಶ್ ಅವರ ಸ್ಮಾರಕವನ್ನು ಸರ್ಕಾರವು ಕಂಠೀರವ ಸ್ಟುಡಿಯೋನಲ್ಲಿ ನಿರ್ಮಾಣ ಮಾಡಿದೆ. ಒಂದು ಎಕರೆ 34 ಗುಂಟೆ ಪ್ರದೇಶದಲ್ಲಿ ಭವ್ಯವಾಗಿ ಸ್ಮಾರಕ ನಿರ್ಮಾಣವಾಗಿದ್ದು ಇದಕ್ಕೆ ಸುಮಾರು 12 ಕೋಟಿಗೂ ಹೆಚ್ಚಿನ ಮೊತ್ತ ಖರ್ಚಾಗಿದೆ. ಸ್ಮಾರಕವನ್ನು ಮಾರ್ಚ್ 27 ರಂದು ಸಿಎಂ ಬೊಮ್ಮಾಯಿ, ಸಚಿವ ಸುಧಾಕರ್, ಸಂಸದೆ ಸುಮಲತಾ ಅಂಬರೀಶ್ ಹಾಗೂ ಇತರರು ಉದ್ಘಾಟನೆ ಮಾಡಿದರು. ಅದೇ ದಿನ ಬೆಂಗಳೂರಿನ ರೇಸ್ಕೋರ್ಸ್ ರಸ್ತೆಗೆ ಅಂಬರೀಶ್ ಅವರ ಹೆಸರನ್ನು ಇಡಲಾಯಿತು.
Published On - 9:36 pm, Tue, 28 March 23