
ದರ್ಶನ್ (Darshan) ಹಾಗೂ ‘ಮದರ್ ಇಂಡಿಯಾ’ ಸುಮಲತಾ (Sumalatha Ambareesh) ನಡುವೆ ಬಿರುಕು ಮೂಡಿರುವುದು ಬಹುತೇಕ ಖಾತ್ರಿ ಆಗಿದೆ. ಸುಮಲತಾ ಸೇರಿದಂತೆ ಕೆಲವರನ್ನು ಮಾತ್ರವೇ ದರ್ಶನ್, ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡುತ್ತಿದ್ದರು. ಆದರೆ ಇದೀಗ ದರ್ಶನ್, ಸುಮಲತಾ ಸೇರಿದಂತೆ ಎಲ್ಲರನ್ನೂ ಅನ್ಫಾಲೋ ಮಾಡಿದ್ದಾರೆ. ಅದರ ಬೆನ್ನಲ್ಲೆ ಸುಮಲತಾ, ಒಂದರ ಹಿಂದೊಂದರಂತೆ ಮಾರ್ಮಿಕ ಪೋಸ್ಟ್ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದು, ಈ ಪೋಸ್ಟ್ಗಳ ಹಿಂದೆ, ದರ್ಶನ್ ಜೊತೆಗಿನ ಭಿನ್ನಾಭಿಪ್ರಾಯ ಎದ್ದು ಕಾಣುತ್ತಿದೆ.
ಬೆಳಿಗ್ಗೆ ಪೋಸ್ಟ್ ಹಂಚಿಕೊಂಡಿದ್ದ ಮಾಜಿ ಸಂಸದೆ, ನಟಿ ಸುಮಲತಾ, ಅತ್ಯುತ್ತಮ ನಟ ಆಸ್ಕರ್ ಅವಾರ್ಡ್ ಯಾರಿಗೆ ಹೋಗುತ್ತೆ ಅಂದರೆ, ಯಾರು ಸತ್ಯವನ್ನ ತಿರುಚುತ್ತಾರೆಯೋ, ತಮ್ಮದೇ ತಪ್ಪು ಇಟ್ಕೊಂಡು ಬೇರೆವರ ಮೇಲೆ ಹಾಕಿ ನೋವು ಮಾಡುತ್ತಾರೆಯೋ, ತಮ್ಮ ಮೇಲಿನ ನಿಂದನೆಯನ್ನ ಬೇರೆವರ ಮೇಲೆ ಹಾಕುತ್ತಾರೆಯೋ, ಬೇರೆಯವರ ಮೇಲೆ ಗೂಬೆ ಕೂರಿಸಿ ತಮ್ಮನ್ನ ತಾವು ಹೀರೋ ಎಂಬಂತೆ ಬಿಂಬಿಸಿಕೊಳ್ಳುತ್ತಾರೆಯೋ ಅವರಿಗೆ ಹೋಗುತ್ತದೆ’ ಎಂದು ಪೋಸ್ಟ್ ಮಾಡಿದ್ದರು.
ಅದರ ಬೆನ್ನಲ್ಲೆ ಸರಣಿ ‘ಸುಭಾಷಿತ’ಗಳನ್ನು ಸುಮಲತಾ ಹಂಚಿಕೊಂಡಿದ್ದು, ಎಲ್ಲವೂ ಬಹುತೇಕ ದರ್ಶನ್ ಅನ್ನು ಗುರಿಯಾಗಿಸಿಯೇ ಹೇಳಿದಂತಿದೆ ಸುಮಲತಾ. ಮತ್ತೊಂದು ಪೋಸ್ಟ್ನಲ್ಲಿ, ನಮ್ಮ ನಿತ್ಯದ ಕಾರ್ಯಗಳು ಹೇಗಿರಬೇಕು ಎಂದು ಹೇಳುತ್ತಾ, ‘ನಿತ್ಯವೂ ನೋವಿಲ್ಲದೆ ಎಚ್ಚರಗೊಳ್ಳುವುದು, ನಿಮ್ಮನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡವ್ರ ಜೊತೆ ಸಂಭಾಷಣೆ ನಡೆಸುವುದು, ಮತ್ತು ಚಿಂತೆಯ ಕಡೆಗೆ ಓಡದೆ ವರ್ತಮಾನದಲ್ಲಿ ವಿಶ್ರಾಂತಿ ಪಡೆಯುವ ಮನಸ್ಸನ್ನು ಹೊಂದಿರುವುದು, ಸಾಮಾಜಿಕ ಮಾಧ್ಯಮಕ್ಕೆ ಚೆನ್ನಾಗಿ ಕಾಣಿಸಲು ಫೋಟೋ ತೆಗಿಸಿಕೊಳ್ಳುವುದರ ಬದಲಿಗೆ, ಒಳಗಿನಿಂದ ಶ್ರೀಮಂತವೆನಿಸುವ ಜೀವನದ ಅಡಿಪಾಯವನ್ನು ರೂಪಿಸಿ ಕೊಳ್ಳು ವಂತಿರಬೇಕು’ ಎಂಬ ಸಂದೇಶ ಹಂಚಿಕೊಂಡಿದ್ದರು.
ಇದನ್ನೂ ಓದಿ:ಸುಮಲತಾ-ದರ್ಶನ್ ಮಧ್ಯೆ ಬಿರುಕು? ಈ ಬೆಳವಣಿಗೆ ನೋಡಿದ್ರೆ ನೀವೂ ಒಪ್ತೀರಿ
ಅದಾದ ಬಳಿಕ, ಜೀವನದ ನಿಜವಾದ ಲಕ್ಷುರಿ ಯಾವುದು ಎಂದರೆ, ‘ಐಶಾರಾಮಿ ಕಾರುಗಳು, ದುಬಾರಿ ಬಟ್ಟೆಗಳು, ಅದ್ಧೂರಿ ಜೀವನ ಶೈಲಿ ಹೊಂದುವುದಲ್ಲ ಬದಲಿಗೆ ಆರಾಮವಾದ ಮುಂಜಾವು, ಆಯ್ಕೆಯಲ್ಲಿ ಇರುವ ಸ್ವಾತಂತ್ರ್ಯ, ಉತ್ತಮವಾದ ನಿದ್ದೆ, ಶಾಂತಿಯಿಂದ ತುಂಬಿದ ಮನಸ್ಸು, ನೆಮ್ಮದಿಯಿಂದ ತುಂಬಿದ ದಿನಗಳು, ನಿಮ್ಮನ್ನು ಪ್ರೀತಿಸುವ, ನಿಮ್ಮಿಂದ ಪ್ರೀತಿಸಲ್ಪಡುವ ಜನಗಳಿಂದ ಸುತ್ತುವರೆದುಕೊಂಡಿರುವುದು ನಿಜವಾದ ಐಶಾರಾಮಿ ಜೀವನ’ ಎಂದಿದ್ದಾರೆ ಸುಮಲತಾ.
ಮತ್ತೊಂದು ಪೋಸ್ಟ್ನಲ್ಲಿ, ಯಾವ ವ್ಯಕ್ತಿ ಒಳ್ಳೆಯವನಾಗಿರುತ್ತಾನೆ ಎಂಬುದನ್ನು ಹೇಳಿರುವ ಸುಮಲತಾ, ‘ಯಾವ ವ್ಯಕ್ತಿಯ ಹೃದಯ ಒಳ್ಳೆಯದಾಗಿರುತ್ತದೆಯೋ, ಯಾವ ವ್ಯಕ್ತಿಯ ಮಾತುಗಳು ಒಳ್ಳೆಯದಾಗಿರುತ್ತದೆಯೋ, ಯಾವ ವ್ಯಕ್ತಿಯ ಯೋಚನೆಗಳು ಒಳ್ಳೆಯದಾಗಿರುತ್ತದೆಯೋ, ಯಾವ ವ್ಯಕ್ತಿ ಇತರರಿಗೆ ಒಳ್ಳೆಯ ಎನರ್ಜಿ ನೀಡುತ್ತಾನೆಯೋ ಆ ವ್ಯಕ್ತಿ ಒಳ್ಳೆಯ ವ್ಯಕ್ತಿ ಆಗಿರುತ್ತಾನೆ’ ಎಂದಿದ್ದಾರೆ ಸುಮಲತಾ. ಇನ್ನೊಂದು ಪೋಸ್ಟ್ನಲ್ಲಿ, ‘ಅದೆಷ್ಟು ನೋವು ತಿಂದು ಆ ನೋವನ್ನೆಲ್ಲ ಶಕ್ತಿಯನ್ನಾಗಿ ಪರಿವರ್ತಿಸಿಕೊಂಡು ಈ ಸ್ಥಾನಕ್ಕೆ ಏರಿದ್ದೀಯ ಎಂಬುದು ಯಾವೊಬ್ಬರಿಗೂ ಗೊತ್ತಿಲ್ಲ’ ಎಂದು ತಮ್ಮ ಬಗ್ಗೆ ತಾವು ಬರೆದುಕೊಂಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ