ಮಳೆಗಾಲಕ್ಕೂ (Monsoon) ಕಾವ್ಯಲೋಕಕ್ಕೂ ಹತ್ತಿರದ ನಂಟು. ಎಷ್ಟೋ ಮಂದಿಗೆ ಮಳೆಯೇ ಸ್ಫೂರ್ತಿ. ಹೊರಗಡೆ ಚಿಟಪಟ ಮಳೆ (Rain) ಸುರಿಯುತ್ತಿರುವಾಗ ಕವಿಯ ಹೃದಯ ಬಹುಬೇಗ ಸ್ಪಂದಿಸಲು ಶುರುಮಾಡುತ್ತದೆ. ಭುವಿಗೆ ಇಳಿಯುವ ಮೊದಲ ಮಳೆಯಲ್ಲಿ ಏನೋ ಒಂದು ಬಗೆಯ ಮಾಂತ್ರಿಕ ಶಕ್ತಿಯೂ ಇದೆ. ಇನ್ನು, ಪ್ರೇಮಿಗಳಿಗಂತೂ ಮಳೆಯ ಮೋಹ ಜಾಸ್ತಿ ಎನ್ನಬೇಕು. ಸಣ್ಣ ಚಳಿಯೊಂದಿಗೆ ಸೋನೆ ಸುರಿಯುವಾಗ ಜೋಡಿ ಹೃದಯಗಳು ಕೈ ಕೈ ಹಿಡಿದು ನಡೆದರೆ ಸ್ವರ್ಗವೇ ಭುವಿಗೆ ಇಳಿದಂತೆ ಅನಿಸದೇ ಇರದು. ಆ ಕಾರಣಕ್ಕೋ ಏನೋ ಸಿನಿಮಾ ಹಾಡುಗಳಲ್ಲೂ (Kannada Movie Songs) ಕೂಡ ಮಳೆಗಾಲದ ವರ್ಣನೆ ರಾರಾಜಿಸಿದೆ. ಮಳೆರಾಯನನ್ನು ಬಗೆಬಗೆಯಲ್ಲಿ ಗುಣಗಾನ ಮಾಡುವ ಗೀತೆಗಳು ಕನ್ನಡ ಸಿನಿಮಾಗಳಲ್ಲಿ ಇವೆ. ಪ್ರತಿ ಬಾರಿ ಮಳೆ ಬಂದಾಗಲೂ ಇಂಥ ಹಾಡುಗಳು ನೆನಪಾಗುತ್ತವೆ. ಈ ಗೀತೆಗಳೆಲ್ಲ ಒಂದಕ್ಕಿಂತ ಒಂದು ಸೂಪರ್ ಆಗಿವೆ..
ಸ್ವಾತಿ ಮುತ್ತಿನ ಮಳೆಹನಿಯೇ..
1990ರಲ್ಲಿ ಬಿಡುಗಡೆಯಾದ ‘ಬಣ್ಣದ ಗೆಜ್ಜೆ’ ಚಿತ್ರದ ಹಾಡು ಇದು. ರವಿಚಂದ್ರನ್ ಮತ್ತು ಅಮಲಾ ಪೌಲ್ ಅವರು ಮಳೆಯಲ್ಲಿ ಹೆಜ್ಜೆ ಹಾಕಿದ ಪರಿ ನೋಡಿದರೆ ಪ್ರಣಯ ಪಕ್ಷಿಗಳ ಮನಸ್ಸು ಅರಳುತ್ತದೆ. ಹಂಸಲೇಖ ಸಂಗೀತ ನೀಡಿದ ಈ ಗೀತೆಗೆ ಧ್ವನಿ ನೀಡಿದ್ದು ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಎಸ್. ಜಾನಕಿ.
ಮುತ್ತು ಮುತ್ತು ನೀರ ಹನಿಯಾ..
‘ನಮ್ಮೂರ ಮಂದಾರ ಹೂವೇ’ ಸಿನಿಮಾದ ಹಾಡುಗಳಿಗೆ ಮನಸೋಲದವರೇ ಇಲ್ಲ. ಅದರಲ್ಲೂ ‘ಮುತ್ತು ಮುತ್ತು ನೀರ ಹನಿಯಾ..’ ಹಾಡು ಎಲ್ಲರ ಫೇವರಿಟ್. ಜೋರಾಗಿ ಸುರಿಯುವ ಮಳೆಯಲ್ಲಿ ಶಿವರಾಜ್ಕುಮಾರ್, ಪ್ರೇಮಾ, ರಮೇಶ್ ಅರವಿಂದ್ ನರ್ತಿಸಿದ ಈ ಹಾಡಿಗೆ ಸಂಗೀತ ನೀಡಿದ್ದು ಇಳಯರಾಜ. ಕೆ. ಕಲ್ಯಾಣ್ ಬರೆದ ಸಾಲುಗಳಿಗೆ ಜೀವ ತುಂಬಿದ್ದು ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಚಿತ್ರಾ.
ಬಂದ ಬಂದ ಮೇಘರಾಜ..
‘ಸಿಪಾಯಿ’ ಸಿನಿಮಾದ ಈ ಹಾಡನ್ನು ಕೇಳುತ್ತಿದ್ದರೆ ಮಳೆಗಾಲದ ಚೆಲುವು ಇನ್ನಷ್ಟು ಹೆಚ್ಚಿದಂತೆ ಭಾಸವಾಗುತ್ತದೆ. ಈ ಹಾಡಿನಲ್ಲಿ ನರ್ತಿಸಿದ ನಟಿ ಸೌಂದರ್ಯ ಅವರನ್ನು ಪ್ರೇಕ್ಷಕರು ಎಂದಿಗೂ ಮರೆಯಲು ಸಾಧ್ಯವಿಲ್ಲ. ಭೌತಿಕವಾಗಿ ಅವರು ಇಲ್ಲದಿದ್ದರೂ ಪ್ರತಿ ಮಳೆಗಾಲದಲ್ಲಿ ಈ ಗೀತೆಯ ಮೂಲಕ ಅವರು ನಮ್ಮ ಮನಸ್ಸನ್ನು ಆವರಿಸಿಕೊಳ್ಳುತ್ತಾರೆ.
ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ..
ಕನ್ನಡ ಚಿತ್ರರಂಗದಲ್ಲಿ ಹೊಸ ಟ್ರೆಂಡ್ ಸೆಟ್ ಮಾಡಿದ ‘ಮುಂಗಾರು ಮಳೆ’ ಚಿತ್ರದಲ್ಲಿ ಮಳೆ ಕೂಡ ಒಂದು ಪಾತ್ರವಾಗಿ ಸೆಳೆಯುತ್ತದೆ. ಮೊದಲ ಬಾರಿಗೆ ನಾಯಕಿಯನ್ನು ನೋಡಿ ನಾಯಕನಿಗೆ ಲವ್ ಆದಾಗ ಮಳೆ ಸುರಿಯುತ್ತದೆ. ‘ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ..’ ಎನ್ನುತ್ತ ಆತ ಮಳೆಯ ಗುಣಗಾನ ಮಾಡುತ್ತಾನೆ. ಈ ಪಾತ್ರದಲ್ಲಿ ಗಣೇಶ್ ಅಭಿನಯಕ್ಕೆ ಅಭಿಮಾನಿಗಳು ಫಿದಾ ಆದರು.
ಮಳೆ ಮಳೆ ಮಳೆ ಮಳೆ.. ಒಲವಿನ ಸುರಿಮಳೆ..
‘ಮಣ್ಣಿನ ದೋಣಿ’ ಸಿನಿಮಾದ ‘ಮಳೆ ಮಳೆ ಮಳೆ ಮಳೆ ಒಲವಿನ ಸುರಿಮಳೆ..’ ಗೀತೆಯನ್ನು ನೋಡಿದರೆ ಪ್ರೇಮಿಗಳು ಬೇರೊಂದು ಲೋಕಕ್ಕೆ ಹೋಗುತ್ತಾರೆ. ಅಷ್ಟು ರೊಮ್ಯಾಂಟಿಕ್ ಆಗಿ ಚಿತ್ರಣಗೊಂಡ ಈ ಹಾಡಿನಲ್ಲಿ ಹೆಜ್ಜೆ ಹಾಕಿರುವುದು ಅಂಬರೀಷ್ ಮತ್ತು ವನಿತಾ ವಾಸು. ಹಂಸಲೇಖ ಅವರ ಸಾಹಿತ್ಯ ಮತ್ತು ಸಂಗೀತದಲ್ಲಿ ಹೊರಬಂದ ಈ ಹಾಡು ಎವರ್ಗ್ರೀನ್ ಆಗಿದೆ.
ಬಾ ಮಳೆಯೇ ಬಾ..
ಬಿ.ಆರ್. ಲಕ್ಷಣ್ ರಾವ್ ಬರೆದ ಈ ಭಾವಗೀತೆಯನ್ನು ರಮೇಶ್ ಅರವಿಂದ್ ನಟನೆಯ ‘ಆಕ್ಸಿಡೆಂಟ್’ ಸಿನಿಮಾದಲ್ಲಿ ಬಳಸಿಕೊಳ್ಳಲಾಗಿದೆ. ಸೋನು ನಿಗಮ್ ಧ್ವನಿಯಲ್ಲಿ ಮೂಡಿಬಂದ ಈ ಹಾಡು ಸಂಗೀತಪ್ರಿಯರ ಫೇವರಿಟ್ ಪಟ್ಟಿಯಲ್ಲಿದೆ.