ಕನ್ನಡ ಸಿನಿಮಾ ಮಾಡೋಕೆ ಈಗ ಟೈಮ್​ ಇಲ್ಲ; ರಶ್ಮಿಕಾ ಮಂದಣ್ಣ ನೇರ ಉತ್ತರ

ರಶ್ಮಿಕಾ ಮಂದಣ್ಣ ನಟಿಸುತ್ತಿರುವ ಬಹುತೇಕ ಸಿನಿಮಾಗಳು ಪ್ಯಾನ್​ ಇಂಡಿಯಾ ಮಟ್ಟದಲ್ಲಿ ತಯಾರಾಗುತ್ತಿವೆ. ಕನ್ನಡಕ್ಕೂ ಡಬ್​ ಆಗುತ್ತಿವೆ. ಕರುನಾಡಿನಲ್ಲಿ ಇರುವ ಅವರ ಅಭಿಮಾನಿಗಳು ಇಷ್ಟಕ್ಕೇ​ ತೃಪ್ತಿ ಪಟ್ಟುಕೊಳ್ಳಬೇಕಷ್ಟೇ.

ಕನ್ನಡ ಸಿನಿಮಾ ಮಾಡೋಕೆ ಈಗ ಟೈಮ್​ ಇಲ್ಲ; ರಶ್ಮಿಕಾ ಮಂದಣ್ಣ ನೇರ ಉತ್ತರ
ರಶ್ಮಿಕಾ ಮಂದಣ್ಣ

ನಟಿ ರಶ್ಮಿಕಾ ಮಂದಣ್ಣ ವೃತ್ತಿಜೀವನ ಆರಂಭಿಸಿದ್ದು ಕನ್ನಡ ಚಿತ್ರರಂಗದಿಂದ. ಅವರಿಗೆ ಮೊಟ್ಟ ಮೊದಲ ಅವಕಾಶ ಸಿಕ್ಕಿದ್ದು ‘ಕಿರಿಕ್​ ಪಾರ್ಟಿ’ ಚಿತ್ರದಲ್ಲಿ. ಆ ಸಿನಿಮಾದ ಯಶಸ್ಸಿನ ಬಳಿಕ ರಶ್ಮಿಕಾ ರಾತ್ರೋರಾತ್ರಿ ಸ್ಟಾರ್​ ಆಗಿಬಿಟ್ಟರು. ಆದರೆ ಈಗ ಅವರು ಕನ್ನಡ ಸಿನಿಮಾ ಮಾಡಲು ಹಿಂದೆ-ಮುಂದೆ ನೋಡುತ್ತಿದ್ದಾರೆ. ಇತ್ತೀಚೆಗಂತೂ ಅವರು ಯಾವುದೇ ಕನ್ನಡ ಸಿನಿಮಾವನ್ನು ಒಪ್ಪಿಕೊಂಡಿಲ್ಲ. ಯಾಕೆ ಹೀಗೆ ಎಂದು ಕೇಳಿದ ಪ್ರಶ್ನೆಗೆ ಅವರು ನೇರವಾಗಿ ಉತ್ತರ ನೀಡಿದ್ದಾರೆ. ಕನ್ನಡ ಸಿನಿಮಾ ಮಾಡುವಷ್ಟು ಸಮಯ ಅವರ ಬಳಿ ಇಲ್ಲವಂತೆ. ಯಾಕೆಂದರೆ ರಶ್ಮಿಕಾ ಪರಭಾಷೆ ಸಿನಿಮಾಗಳಲ್ಲಿ ವರ್ಷಪೂರ್ತಿ ಬ್ಯುಸಿ ಆಗಿದ್ದಾರೆ.

ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ರಶ್ಮಿಕಾ ಮಂದಣ್ಣ ಈ ಬಗ್ಗೆ ಮಾತನಾಡಿದ್ದಾರೆ. ತೆಲುಗು ಮತ್ತು ಹಿಂದಿ ಸಿನಿಮಾಗಳಿಗಾಗಿ ಡೇಟ್ಸ್​ ಹೊಂದಿಸಲು ಅವರಿಗೆ ತುಂಬ ಕಷ್ಟ ಆಗುತ್ತಿದೆ. ಈ ಪ್ರಾಜೆಕ್ಟ್​ಗಳಿಗಾಗಿಯೇ ಅವರು ಸಾಕಷ್ಟು ಸಮಯ ಮೀಸಲಿಟ್ಟಿದ್ದಾರೆ. ಜೊತೆಗೆ ತಮಿಳು ಸಿನಿಮಾ ಕೂಡ ಮಾಡುತ್ತಿದ್ದಾರೆ. ಇದರ ನಡುವೆ ತಾವು ಕನ್ನಡ ಸಿನಿಮಾವನ್ನೂ ಮಾಡಿದರೆ ವರ್ಷದ 365 ದಿನವೂ ಸಾಕಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.

ರಶ್ಮಿಕಾ ನಟಿಸುತ್ತಿರುವ ಬಹುತೇಕ ಸಿನಿಮಾಗಳು ಪ್ಯಾನ್​ ಇಂಡಿಯಾ ಮಟ್ಟದಲ್ಲಿ ತಯಾರಾಗುತ್ತಿವೆ. ಕನ್ನಡಕ್ಕೂ ಡಬ್​ ಆಗುತ್ತಿವೆ. ಕರುನಾಡಿನಲ್ಲಿ ಇರುವ ಅವರ ಅಭಿಮಾನಿಗಳು ಡಬ್ಬಿಂಗ್​ ವರ್ಷನ್​ ನೋಡಿ ತೃಪ್ತಿಪಟ್ಟುಕೊಳ್ಳಬೇಕಷ್ಟೇ. ಕನ್ನಡವೂ ಸೇರಿದಂತೆ ದಕ್ಷಿಣ ಭಾರತದ ಎಲ್ಲ ಭಾಷೆಗಳಲ್ಲಿ ನಟಿಸುವುದರ ಜೊತೆಗೆ ಹಿಂದಿ ಸಿನಿಮಾವನ್ನೂ ಮಾಡಿದರೆ 565 ದಿನ ಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.

ಸದ್ಯಕ್ಕಂತೂ ರಶ್ಮಿಕಾ ಯಶಸ್ಸಿನ ಉತ್ತುಂಗದಲ್ಲಿದ್ದಾರೆ. ಒಂದೆಡೆ ಅವರಿಗೆ ದೊಡ್ಡ ದೊಡ್ಡ ಸ್ಟಾರ್​ ನಟರ ಜೊತೆ ತೆರೆಹಂಚಿಕೊಳ್ಳುವ ಅವಕಾಶ ಸಿಗುತ್ತಿದೆ. ಇನ್ನೊಂದೆಡೆ ಪ್ರಶಸ್ತಿಗಳು ಕೂಡ ಒಲಿದು ಬರುತ್ತಿವೆ. ಇತ್ತೀಚೆಗೆ ನಡೆದ ಸೈಮಾ ಅವಾರ್ಡ್ಸ್​ ಕಾರ್ಯಕ್ರಮದಲ್ಲಿ ರಶ್ಮಿಕಾ ಎರಡು ಪ್ರಶಸ್ತಿ ಪಡೆದುಕೊಂಡರು. ಕನ್ನಡದ ‘ಯಜಮಾನ’ ಹಾಗೂ ತೆಲುಗಿನ ‘ಡಿಯರ್​ ಕಾಮ್ರೇಡ್​’ ಸಿನಿಮಾದಲ್ಲಿನ ನಟನೆಗೆ ಅವರು ‘ಅತ್ಯುತ್ತಮ ನಟಿ’ ಕ್ರಿಟಿಕ್ಸ್​ ಅವಾರ್ಡ್​ ಪಡೆದುಕೊಂಡರು. ಅವರಿಗೆ ಎಲ್ಲರಿಂದ ಅಭಿನಂದನೆ ಸಲ್ಲಿಕೆ ಆಗುತ್ತಿದೆ. ಇದೇ ಕಾರ್ಯಕ್ರಮದಲ್ಲಿ ರಕ್ಷಿತ್​ ಶೆಟ್ಟಿ ಕೂಡ ಭಾಗವಹಿಸಿದ್ದರು. ‘ಅವನೇ ಶ್ರೀಮನ್ನಾರಾಯಣ’ ಚಿತ್ರದ ನಟನೆಯಾಗಿ ಅವರಿಗೆ ‘ಅತ್ಯುತ್ತಮ ನಟ’ ಕ್ರಿಟಿಕ್ಸ್​ ಅವಾರ್ಡ್​ ಸಿಕ್ಕಿದೆ.

ರಶ್ಮಿಕಾ ನಟಿಸಿರುವ ‘ಪುಷ್ಪ’ ಚಿತ್ರ ಡಿಸೆಂಬರ್​ನಲ್ಲಿ ಬಿಡುಗಡೆ ಆಗಲಿದೆ. ಬಾಲಿವುಡ್​ನಲ್ಲಿ ಅವರು ಸಿದ್ದಾರ್ಥ್​ ಮಲ್ಹೋತ್ರಾ ಜೊತೆ ನಟಿಸಿರುವ ‘ಮಿಷನ್​ ಮಜ್ನು’ ಚಿತ್ರಕ್ಕೆ ಶೂಟಿಂಗ್​ ಮುಗಿದಿದೆ. ‘ಗುಡ್​ಬೈ’ ಸಿನಿಮಾದಲ್ಲಿ ಅಮಿತಾಭ್​ ಬಚ್ಚನ್​ ಜೊತೆ ನಟಿಸುವ ಅವಕಾಶವನ್ನು ರಶ್ಮಿಕಾ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ:

ಮಾಡೋಕೆ ಏನೂ ಕೆಲಸ ಇಲ್ಲದಿದ್ದರೆ ರಶ್ಮಿಕಾ ಮಂದಣ್ಣ ಏನು ಮಾಡ್ತಾರೆ? ಫೋಟೋ ಸಹಿತ ಸಿಕ್ತು ಉತ್ತರ

‘ಕಳೆದ ರಾತ್ರಿ ಸ್ಪೆಷಲ್​ ಆಗಿತ್ತು..’; ಸೈಮಾ ಡಬಲ್​ ಸಂಭ್ರಮದ ಬಗ್ಗೆ ರಶ್ಮಿಕಾ ಮನದ ಮಾತು​

Read Full Article

Click on your DTH Provider to Add TV9 Kannada