ವಿವಾದಗಳ ಬೆನ್ನಲ್ಲೇ ಸೆನ್ಸಾರ್ ಪಾಸ್ ಆದ ‘ಬಾಸ್’: ಶೀಘ್ರವೇ ರಿಲೀಸ್ ಆಗಲಿದೆ ಸಿನಿಮಾ

ದರ್ಶನ್ ಅವರ ಜೀವನದ ಘಟನೆಗಳಿಗೂ ಬಾಸ್ ಸಿನಿಮಾದ ಕಥೆಗೂ ಸಾಮ್ಯತೆ ಇದೆ ಎಂಬ ಆರೋಪವಿದೆ. ಅದರ ನಡುವೆಯೂ ಈ ಸಿನಿಮಾಗೆ ಸೆನ್ಸಾರ್ ಮಂಡಳಿಯಿಂದ ‘ಯು/ಎ’ ಪ್ರಮಾಣ ಪತ್ರ ನೀಡಲಾಗಿದೆ. ಎಲ್ಲವೂ ಚಿತ್ರತಂಡದ ಪ್ಲ್ಯಾನ್ ಪ್ರಕಾರ ನಡೆದರೆ ಏಪ್ರಿಲ್ ತಿಂಗಳಲ್ಲಿ ‘ಬಾಸ್’ ಸಿನಿಮಾ ಬಿಡುಗಡೆ ಆಗಲಿದೆ.

ವಿವಾದಗಳ ಬೆನ್ನಲ್ಲೇ ಸೆನ್ಸಾರ್ ಪಾಸ್ ಆದ ‘ಬಾಸ್’: ಶೀಘ್ರವೇ ರಿಲೀಸ್ ಆಗಲಿದೆ ಸಿನಿಮಾ
Boss Kannada Movie
Edited By:

Updated on: Mar 24, 2026 | 5:25 PM

ಟೀಸರ್ ಬಿಡುಗಡೆಯಾದ ಕ್ಷಣದಿಂದಲೇ ‘ಬಾಸ್’ (BOSS) ಸಿನಿಮಾ ಭಾರಿ ಸದ್ದು ಮಾಡುತ್ತಿದೆ. ಈ ಸಿನಿಮಾದ ಸುತ್ತ ಹಲವು ವಿವಾದಗಳು ಸೃಷ್ಟಿ ಆಗಿವೆ. ಈ ಸಿನಿಮಾದ ಕಥೆಗೂ, ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೂ ಸಾಮ್ಯತೆ ಇದೆ ಎಂಬುದು ಕೆಲವರ ಅಭಿಪ್ರಾಯ. ಹಾಗಾಗಿ ಈ ಚಿತ್ರಕ್ಕೆ ಸೆನ್ಸಾರ್ ಪ್ರಮಾಣ ಪತ್ರ ನೀಡಬಾರದು ಎಂದು ದರ್ಶನ್ (Darshan) ಪರ ವಕೀಲರು ತಕರಾರು ತೆಗೆದಿದ್ದರು. ಆದರೆ ‘ಬಾಸ್’ ಸಿನಿಮಾ ಅಂತಿಮವಾಗಿ ಸೆನ್ಸಾರ್ ಅಗ್ನಿಪರೀಕ್ಷೆಯಲ್ಲಿ ಗೆದ್ದು ಹೊರಬಂದಿದೆ. ವಿ. ಲವ ನಿರ್ದೇಶನದ ಈ ಚಿತ್ರದಲ್ಲಿ ತನುಷ್ ಶಿವಣ್ಣ (Tanush Shivanna) ಅಭಿನಯಿಸಿದ್ದಾರೆ.

ನಟ ದರ್ಶನ್ ಅವರ ಜೀವನದ ಘಟನೆಗಳಿಗೆ ಸಾಮ್ಯತೆ ಹೊಂದಿದೆ ಎಂಬ ಆರೋಪಗಳ ನಡುವೆಯೂ ಚಿತ್ರತಂಡಕ್ಕೆ ಸೆನ್ಸಾರ್ ಮಂಡಳಿ ಹಸಿರು ನಿಶಾನೆ ತೋರಿಸಿದೆ. ‘ಬಾಸ್’ ಸಿನಿಮಾದ ಟೀಸರ್ ಹೊರಬಿದ್ದಾಗ ಗಾಂಧಿನಗರದಲ್ಲಿ ಸಂಚಲನ ಸೃಷ್ಟಿಯಾಗಿತ್ತು. ಈ ಚಿತ್ರವು ರೇಣುಕಾಸ್ವಾಮಿ ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ಜೈಲು ಸೇರಿರುವ ದರ್ಶನ್ ಅವರ ನಿಜ ಜೀವನದ ಕಥೆಯನ್ನೇ ಆಧರಿಸಿರಬಹುದು ಎನ್ನುವ ಗಂಭೀರ ಆರೋಪ ಕೇಳಿಬಂದಿತ್ತು. ಇದೇ ಕಾರಣಕ್ಕೆ ದರ್ಶನ್ ಅಭಿಮಾನಿಗಳು ಹಾಗೂ ಅವರ ಆಪ್ತ ವಲಯದಿಂದ ಚಿತ್ರಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು.

ವಿವಾದ ಕೇವಲ ಮಾತಿಗೆ ಸೀಮಿತವಾಗದೆ ಕಾನೂನು ಕಟ್ಟೆ ಏರಿತ್ತು. ದರ್ಶನ್ ಪರ ವಕೀಲರು ಚಿತ್ರತಂಡಕ್ಕೆ ಹಾಗೂ ಸೆನ್ಸಾರ್ ಮಂಡಳಿಗೆ ಈ ಮೊದಲೇ ನೋಟಿಸ್ ನೀಡಿದ್ದರು. ಅಷ್ಟೇ ಅಲ್ಲದೆ, ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ ಸಹೋದರ ದಿನಕರ್ ತೂಗುದೀಪ ಅವರು ಖುದ್ದಾಗಿ ಸೆನ್ಸಾರ್ ಮಂಡಳಿಗೆ ಭೇಟಿ ನೀಡಿ, ಚಿತ್ರಕ್ಕೆ ಸೆನ್ಸಾರ್ ಪ್ರಮಾಣಪತ್ರ ನೀಡದಂತೆ ಮನವಿ ಮಾಡಿದ್ದರು ಎಂಬ ವರದಿಗಳು ಹರಿದಾಡಿದ್ದವು.

ಬಾಸ್ ಸಿನಿಮಾ ಟೀಸರ್:

BOSS Teaser 4K | Kannada Movie | Tanush Shivnna | V. Lava | Vanditha Gowda | Payal Chengappa

ಈ ಎಲ್ಲಾ ಸವಾಲುಗಳ ನಡುವೆಯೂ ಸೈಲೆಂಟಾಗಿ ಸೆನ್ಸಾರ್ ಪ್ರಕ್ರಿಯೆ ಮುಗಿಸಿರುವ ‘ಬಾಸ್’ ಚಿತ್ರಕ್ಕೆ ಮಂಡಳಿಯು ‘ಯು/ಎ’ ಪ್ರಮಾಣಪತ್ರ ನೀಡಿದೆ. ಆದರೆ, ವಿವಾದಾತ್ಮಕ ಎನ್ನಬಹುದಾದ ಕೆಲವು ದೃಶ್ಯಗಳಿಗೆ ಹಾಗೂ ಸಂಭಾಷಣೆಗಳಿಗೆ ಮಂಡಳಿಯು ಕತ್ತರಿ ಹಾಕಿದೆ. ಈ ಮೂಲಕ ಕೆಲವೊಂದು ಬದಲಾವಣೆಗಳೊಂದಿಗೆ ಸಿನಿಮಾ ಪ್ರದರ್ಶನಕ್ಕೆ ಅವಕಾಶ ಸಿಕ್ಕಂತಾಗಿದೆ.

ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಕೇಸ್ ಕುರಿತು ‘ಬಾಸ್’ ಸಿನಿಮಾ? ತನುಷ್ ಶಿವಣ್ಣ ಸ್ಪಷ್ಟನೆ

ಸೆನ್ಸಾರ್ ಪರೀಕ್ಷೆಯಲ್ಲಿ ಪಾಸ್ ಆಗಿರುವ ‘ಬಾಸ್’ ಚಿತ್ರತಂಡ ಈಗ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಬರುವ ಏಪ್ರಿಲ್ ತಿಂಗಳಿನಲ್ಲಿ ಸಿನಿಮಾವನ್ನು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆ ಮಾಡಲಾಗುವುದು. ತನುಶ್ ಶಿವಣ್ಣ ಅವರ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಎಷ್ಟರಮಟ್ಟಿಗೆ ಸದ್ದು ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us