
‘ಚಾಲೆಂಜಿಂಗ್ ಸ್ಟಾರ್’ ದರ್ಶನ್ (Darshan) ಅವರು ಅಭಿನಯಿಸಿರುವ ‘ದಿ ಡೆವಿಲ್’ ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಡಿಸೆಂಬರ್ 11ರಂದು ಈ ಸಿನಿಮಾ ರಿಲೀಸ್ ಆಗಲಿದೆ. ಈಗ ದರ್ಶನ್ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾರೆ. ಅವರು ಹೊರಗೆ ಬಂದ ನಂತರವೇ ಸುದ್ದಿಗೋಷ್ಠಿ ಮಾಡೋಣ ಎಂಬುದು ನಿರ್ದೇಶಕ ಪ್ರಕಾಶ್ ವೀರ್ ಅವರ ಪ್ಲ್ಯಾನ್ ಆಗಿತ್ತು. ಆದರೆ ಇಷ್ಟು ದಿನಗಳು ಕಾದರೂ ಕೂಡ ದರ್ಶನ್ ಅವರು ಜೈಲಿನಿಂದ ಹೊರಗೆ ಬರಲೇ ಇಲ್ಲ. ಹಾಗಾಗಿ ದರ್ಶನ್ ಅವರ ಅನುಪಸ್ಥಿತಿಯಲ್ಲೇ ‘ದಿ ಡೆವಿಲ್’ (The Devil) ಸಿನಿಮಾ ತಂಡ ಸುದ್ದಿಗೋಷ್ಠಿ ಮಾಡಿದೆ. ಈ ವೇಳೆ ಪ್ರಕಾಶ್ ವೀರ್ ಅವರು ಮಾತನಾಡಿದರು.
‘ಎಲ್ಲರಿಗೂ ಕ್ಷಮೆ ಕೇಳುತ್ತೇನೆ. ಇಷ್ಟು ದಿನ ಕಾದು ನಾವು ಇಂದು ಪ್ರೆಸ್ ಮೀಟ್ ಮಾಡುತ್ತಿದ್ದೇವೆ. ಅದಕ್ಕಾಗಿ ಕ್ಷಮೆ ಇರಲಿ. ಅದಕ್ಕೆ ಕಾರಣ ಇಷ್ಟೇ.. ಈ ಹಿಂದೆ ನಾವು ಒಂದು ಸುದ್ದಿಗೋಷ್ಠಿ ಮಾಡಬೇಕು ಎಂದಾಗ ತುಂಬಾ ಗೊಂದಲಗಳು ಇದ್ದವು. ಆ ಬಳಿಕ ದರ್ಶನ್ ಬರುತ್ತಾರೆ, ಅವರು ನಮ್ಮ ಜೊತೆ ಇರುತ್ತಾರೆ ಎಂಬ ಒಂದೇ ಒಂದು ಆಸೆ ಇಟ್ಟುಕೊಂಡು ನಾನು ಇಷ್ಟು ದಿನ ಸುದ್ದಿಗೋಷ್ಠಿಯನ್ನು ಮುಂದಕ್ಕೆ ತಳ್ಳಿದೆ. ದುರಾದೃಷ್ಟವಶಾತ್ ಇಂದು ಕೂಡ ದರ್ಶನ್ ನಮ್ಮ ಜೊತೆ ಇಲ್ಲ’ ಎಂದು ಪ್ರಕಾಶ್ ವೀರ್ ಅವರು ಸುದ್ದಿಗೋಷ್ಠಿ ಆರಂಭಿಸಿದರು.
‘ದರ್ಶನ್ ನನ್ನ ಜೊತೆ ಇದ್ದರೆ ಒಂದು ಆನೆ ಬಲ. ಏನೋ ಒಂದು ಸಪೋರ್ಟ್ ಸಿಸ್ಟಮ್. ಅದನ್ನು ನಾನು ಖಂಡಿತವಾಗಿಯೂ ಮಿಸ್ ಮಾಡಿಕೊಳ್ಳುತ್ತೇನೆ. 2018ರಲ್ಲೇ ನಾನು ಮತ್ತು ದರ್ಶನ್ ಅವರು ಈ ಸಿನಿಮಾ ಬಗ್ಗೆ ಚರ್ಚೆ ಮಾಡಿದ್ದೆವು. ಅವರು ಯಾವಾಗಲೂ ನನಗೆ ಫೋರ್ಸ್ ಮಾಡಲ್ಲ. ಸಮಯ ತೆಗೆದುಕೊಂಡು ಸ್ಕ್ರೀನ್ ಪ್ಲೇ ಮಾಡಿಕೊಂಡು ಬಂದ ನಂತರ ಶೂಟಿಂಗ್ ಮಾಡೋಣ ಎಂದಿದ್ದರು. ಆ ಮೇಲೆ ಕೊವಿಡ್ ಬಂತು, ನಮ್ಮ ತಂದೆ ತೀರಿಕೊಂಡರು’ ಎಂದಿದ್ದಾರೆ ಪ್ರಕಾಶ್ ವೀರ್.
‘ಕಾಟೇರ ಮುಗಿಸಿದ ನಂತರ ದಿ ಡೆವಿಲ್ ಮಾಡೋಣ ಅಂತ ನಿರ್ಧರಿಸಿದೆವು. ಇಂದು ನಿಮ್ಮ ಮುಂದೆ ಕುಳಿತಿದ್ದೇವೆ. ಡಿಸೆಂಬರ್ 11ರಂದು ಸಿನಿಮಾ ಬಿಡುಗಡೆ ಆಗಲಿದೆ. ದರ್ಶನ್ ಇಲ್ಲ ಎಂಬುದು ನಮಗೆ ತುಂಬಾ ದೊಡ್ಡ ನಷ್ಟ. ಅದನ್ನು ನಾವು ತುಂಬೋಕೆ ಆಗಲ್ಲ. ಅವರು ಇಲ್ಲ ಎಂಬ ನೋವು ತುಂಬಾ ಇದೆ. ಅವರು ನನಗೆ ಸ್ನೇಹಿತನಾಗಿ ಕೂಡ ದೊಡ್ಡ ಬಲ. ಅವರ ಕುಟುಂಬದವರು ಸದಾ ನಮ್ಮ ಜೊತೆ ನಿಂತಿದ್ದಾರೆ. ಅವರ ಅಭಿಮಾನಿಗಳು ಕೂಡ ಚೆನ್ನಾಗಿ ಪ್ರಚಾರ ಮಾಡುತ್ತಿದ್ದಾರೆ. ಅವರಿಗೆ ಧನ್ಯವಾದಗಳು’ ಎಂದು ಪ್ರಕಾಶ್ ವೀರ್ ಅವರು ಹೇಳಿದ್ದಾರೆ.
ಇದನ್ನೂ ಓದಿ: ದರ್ಶನ್ ಫಾರ್ಮ್ಹೌಸ್ ಎದುರು ಮುಗಿಲೆತ್ತರದ ‘ದಿ ಡೆವಿಲ್’ ಪೋಸ್ಟರ್
‘ಡೆವಿಲ್ ಎಂಬ ಟೈಟಲ್ ಬಹಳ ಸೂಕ್ತವಾಗಿದೆ. ಟೈಟಲ್ಗಾಗಿ ಕಥೆ ಮಾಡಿಲ್ಲ. ಕಥೆಗಾಗಿ ಆ ಟೈಟಲ್ ಇಟ್ಟಿದ್ದೇವೆ. ದರ್ಶನ್ ಅವರು ವೃತ್ತಿಪರ ನಟ. ಶೂಟಿಂಗ್ ವೇಳೆ ಬೇರೆ ಯಾವುದೇ ಚರ್ಚೆ ನಡೆಯಲ್ಲ. ಜೈಲಿನಿಂದ ಹೊರಬಂದು ಶೂಟಿಂಗ್ ಮಾಡಿದಾಗಲೂ ಕೂಡ ಯಾವುದೇ ವ್ಯತ್ಯಾಸ ಇರಲಿಲ್ಲ’ ಎಂದಿದ್ದಾರೆ ನಿರ್ದೇಶಕ ಪ್ರಕಾಶ್ ವೀರ್. ಈ ಸಿನಿಮಾದಲ್ಲಿ ಶರ್ಮಿಳಾ ಮಾಂಡ್ರೆ, ರಚನಾ ರೈ, ಗಿಲ್ಲಿ ನಟ, ಅಚ್ಯುತ್ ಕುಮಾರ್ ಮುಂತಾದ ಕಲಾವಿದರು ನಟಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.