ಶುರುವಾಯ್ತು ‘ವೇಷಗಳು’ ಸಿನಿಮಾ ಶೂಟಿಂಗ್: ನಾಟಕದ ಬೃಹತ್ ಸೆಟ್ ನಿರ್ಮಾಣ
ಸಾಹಿತ್ಯ ಕೃತಿ ಆಧರಿಸಿದ ‘ವೇಷಗಳು’ ಸಿನಿಮಾ ಸೆಟ್ಟೇರಿದೆ. ಇತ್ತೀಚೆಗೆ ಮುಹೂರ್ತ ಸಮಾರಂಭ ನಡೆಯಿತು. ಭರತ್ ಬೋಪಣ್ಣ, ಅಂಕಿತಾ ಅಮರ್, ಶ್ರೀನಗರ ಕಿಟ್ಟಿ ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಕೌಶಿಕ್ ಹರ್ಷ ಅವರು ಈ ಸಿನಿಮಾಗೆ ಸಂಗೀತ ನಿರ್ದೇಶನ ಮಾಡುತ್ತಿದ್ದು, ಚಿತ್ರದಲ್ಲಿ 12 ಹಾಡುಗಳು ಇರಲಿವೆ.

ಭರತ್ ಬೋಪಣ್ಣ, ಶ್ರೀನಗರ ಕಿಟ್ಟಿ (Srinagara Kitty), ಅಂಕಿತಾ ಅಮರ್, ತಬಲಾನಾಣಿ, ಶರತ್ ಲೋಹಿತಾಶ್ವ ಮುಂತಾದವರು ನಟಿಸಿರುವ ‘ವೇಷಗಳು’ ಸಿನಿಮಾದ ಚಿತ್ರೀಕರಣ ಆರಂಭ ಆಗಿದೆ. ರವಿ ಬೆಳಗೆರೆ ಬರೆದ ‘ವೇಷಗಳು’ ಎಂಬ ಸಣ್ಣ ಕಥೆ ಆಧರಿಸಿ ಈ ಸಿನಿಮಾ ತಯಾರಾಗುತ್ತಿದೆ. ಇತ್ತೀಚೆಗೆ ಈ ಸಿನಿಮಾಗೆ ಮುಹೂರ್ತ ಸಮಾರಂಭ ಮಾಡಲಾಯಿತು. ಮೈಸೂರು ರಸ್ತೆಯ ಕೆಂಗೇರಿ ಸಮೀಪದ ಜೆ.ಕೆ. ಗ್ರ್ಯಾಂಡ್ ಅರೇನಾ ಆವರಣದಲ್ಲಿ ಸಿನಿಮಾಗಾಗಿ ಬೃಹತ್ ಡ್ರಾಮಾ ಸ್ಟೇಜ್ ಸೆಟ್ ನಿರ್ಮಾಣ ಮಾಡಲಾಗಿದೆ. ಮುಹೂರ್ತ ದೃಶ್ಯಕ್ಕೆ ಡಿವೈಎಸ್ಪಿ ರಾಜೇಶ್ ಕ್ಲ್ಯಾಪ್ ಮಾಡಿದರು. ‘ಗ್ರೀನ್ ಟ್ರೀ ಸ್ಟುಡಿಯೋಸ್’ ಮೂಲಕ ಕಿಶನ್ ರಾವ್ ದಳವಿ ಅವರು ‘ವೇಷಗಳು’ (Veshagalu) ಸಿನಿಮಾಗೆ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.
ಶಾಕುಂತಲಾ ದುಷ್ಯಂತ ಮಹಾರಾಜನ ನಾಟಕವೇ ‘ವೇಷಗಳು’ ಸಿನಿಮಾದ ಪ್ರಥಮ ದೃಶ್ಯ. ವೃತ್ತಿಯಲ್ಲಿ ಶಿಕ್ಷಕಿ ಆಗಿರುವ ಸೌಜನ್ಯ ಅವರು ಸಂಭಾಷಣೆ ಬರೆದಿದ್ದಾರೆ. ಈ ಸಿನಿಮಾದಲ್ಲಿ ರಂಗಭೂಮಿ ಕಲಾವಿದರ ಜೊತೆಗೆ ಜೋಗತಿಯರ ಜೀವನ ಶೈಲಿಯ ಬಗ್ಗೆಯೂ ಹೇಳಲಾಗುತ್ತಿದೆ. ಶ್ರೀನಗರ ಕಿಟ್ಟಿ ಅವರು ಬಸಪ್ಪ ಮತ್ತು ಬಸಮ್ಮ ಜೋಗತಿಯಾಗಿ 2 ಗೆಟಪ್ನಲ್ಲಿ ನಟಿಸುತ್ತಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ನಿರ್ದೇಶಕ ಕಿಶನ್ ರಾವ್ ಮಾತನಾಡಿದರು. ‘ಬಹುತೇಕ ರಂಗಸಜ್ಜಿಕೆಯೊಳಗೇ ನಡೆಯುವ ನಾಟಕದ ಹಿನ್ನೆಲೆಯಲ್ಲಿ ಸಾಗುವ ಪ್ರೇಮಕಥೆಯಿದು. ಮಾಲೂರು ವಿಜಯ್ ಅವರು ಅದ್ಭುತವಾದ ಡ್ರಾಮಾ ಸೆಟ್ ಹಾಕಿಕೊಟ್ಟಿದ್ದಾರೆ. ಮನೋಹರ ಜೋಷಿ ಅವರು ಛಾಯಾಗ್ರಾಹಕರಾಗಿ ಸಿಕ್ಕಮೇಲೆ ಬೇರೆಯದೇ ಎನರ್ಜಿ ಬಂತು. ಕವಿರಾಜ್, ನಾಗೇಂದ್ರ ಪ್ರಸಾದ್, ವಿ. ಮನೋಹರ್, ಕಲ್ಯಾಣ್ ಸಾಹಿತ್ಯ ಬರೆಯುತ್ತಿದ್ದಾರೆ. ಸಿನಿಮಾದಲ್ಲಿ 40ರಿಂದ 50 ಭಾಗ ನಾಟಕದ ದೃಶ್ಯಗಳು ಬರುತ್ತದೆ. ಈ ಸಿನಿಮಾದ ಕಥೆ ಬಳ್ಳಾರಿಯಿಂದ ಶುರುವಾಗಿ ಉತ್ತರ ಕರ್ನಾಟಕ, ಮೈಸೂರು, ಬೆಂಗಳೂರು, ಮಧ್ಯಪ್ರದೇಶದ ತನಕ ಸಾಗುತ್ತದೆ’ ಎಂದು ಅವರು ಹೇಳಿದ್ದಾರೆ.
ನಟ ಶ್ರೀನಗರ ಕಿಟ್ಟಿ ಅವರು ಮಾತನಾಡಿ, ‘ಕಿಶೋರ್ ಈ ಕಥೆಯನ್ನು ಸಿನಿಮಾ ಮಾಡುತ್ತೇನೆ ಎಂದಾಗ ನನ್ನ ಹೆಂಡತಿ ಒಪ್ಪಿದಳು. ರಂಗಭೂಮಿಯ ಒಳಹರಿವುಗಳು ಹೇಗಿರುತ್ತದೆ. ಅಲೆಮಾರಿ ತಂಡಗಳು ಯಾವ ರೀತಿ ಇರುತ್ತವೆ ಎಂಬುದನ್ನೆಲ್ಲ ನಮ್ಮ ಸಿನಿಮಾದಲ್ಲಿ ತೋರಿಸಲಿದ್ದೇವೆ. ನನ್ನ ಪಾತ್ರ ಬಸಪ್ಪ ಮತ್ತು ಬಸಮ್ಮ ಎಂಬ 2 ಶೇಡ್ಗಳಲ್ಲಿ ಬರುತ್ತದೆ’ ಎಂದು ಹೇಳಿದರು.
ಇದನ್ನೂ ಓದಿ: ಜೋಗತಿ ಪಾತ್ರದಲ್ಲಿ ಶ್ರೀನಗರ ಕಿಟ್ಟಿ; ‘ವೇಷಗಳು’ ಸಿನಿಮಾದ ಟೀಸರ್ ಬಿಡುಗಡೆ
ಶರತ್ ಲೋಹಿತಾಶ್ವ ಅವರು ಈ ಸಿನಿಮಾದಲ್ಲಿ ಸಿಂಹಣ್ಣ ಎಂಬ ಪವರ್ ಫುಲ್ ಪಾತ್ರ ಮಾಡುತ್ತಿದ್ದಾರೆ. ನಾಟಕ ತಂಡದಲ್ಲಿ ಹಾರ್ಮೋನಿಯಂ ನುಡಿಸುವ ಪಾತ್ರವನ್ನು ತಬಲಾನಾಣಿ ಮಾತನಾಡುತ್ತಿದ್ದಾರೆ. ‘ಇವರೆಲ್ಲರ ಜತೆ ನಾನೂ ಒಂದು ಪಾತ್ರ ಮಾಡುತ್ತಿದ್ದೇನೆ ಎನ್ನುವುದೇ ಹೆಮ್ಮೆಯ ವಿಷಯ’ ಎಂದು ನಾಣಿ ಹೇಳಿದರು. ಅಲಮೇಲು ಎಂಬ ಪಾತ್ರದಲ್ಲಿ ಅಂಕಿತಾ ಅಮರ್ ನಟಿಸುತ್ತಿದ್ದಾರೆ. ಚಿನ್ನಲ್ಲ ಎಂಬ ಮುಗ್ಧ ಹುಡುಗನ ಪಾತ್ರದಲ್ಲಿ ಭರತ್ ಬೋಪಣ್ಣ ಕಾಣಿಸಿಕೊಳ್ಳಲಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




