2022 ಪೂರ್ಣಗೊಳ್ಳುತ್ತಾ ಬಂದಿದೆ. ಈ ವರ್ಷದ ಕೊನೆಯ ತಿಂಗಳಾದ ಡಿಸೆಂಬರ್ ಬಂದಿದೆ. 11 ತಿಂಗಳಲ್ಲಿ ಅನೇಕ ಕನ್ನಡದ ಚಿತ್ರಗಳು (Kannada Films) ಗೆದ್ದಿವೆ. ಬಾಲಿವುಡ್ (Bollywood) ಈ ವರ್ಷ ಕಹಿ ಉಂಡಿದ್ದೇ ಹೆಚ್ಚು. ಕೊನೆಯ ತಿಂಗಳಲ್ಲಿ ಅನೇಕ ಚಿತ್ರಗಳು ತಮ್ಮ ಅದೃಷ್ಟಪರೀಕ್ಷೆಗೆ ಮುಂದಾಗಿವೆ. ಈ ವಾರ ಕನ್ನಡ ಹಾಗೂ ಪರಭಾಷೆಗಳಲ್ಲಿ ಅನೇಕ ಚಿತ್ರಗಳು ರಿಲೀಸ್ ಆಗುತ್ತಿವೆ. ಕಳೆದ ವಾರ ತೆರೆಗೆ ಬಂದ ಆಶಿಕಾ ರಂಗನಾಥ್ ಹಾಗೂ ಇಶಾನ್ ನಟನೆಯ ‘ರೇಮೊ’, ಗಣೇಶ್ ಅಭಿನಯದ ‘ತ್ರಿಬಲ್ ರೈಡಿಂಗ್’, ಈ ಮೊದಲು ರಿಲೀಸ್ ಆದ ಹಿಂದಿಯ ‘ದೃಶ್ಯ 2’ ಚಿತ್ರಗಳಿಗೆ ಮೆಚ್ಚುಗೆ ಬಂದಿವೆ. ಈ ಚಿತ್ರಗಳ ಜತೆ ಹೊಸ ಸಿನಿಮಾಗಳು ಸೆಣೆಸಬೇಕಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.
ತಿಮ್ಮಯ್ಯ & ತಿಮ್ಮಯ್ಯ
ಅನಂತ್ ನಾಗ್ ಹಾಗೂ ದಿಗಂತ್ ಒಟ್ಟಾಗಿ ನಟಿಸಿದ ಸಿನಿಮಾ ‘ತಿಮ್ಮಯ್ಯ & ತಿಮ್ಮಯ್ಯ’. ಈ ಚಿತ್ರದ ಬಗ್ಗೆ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿದೆ. ಶುಭ್ರಾ ಅಯ್ಯಪ್ಪ, ಐಂದ್ರಿತಾ ರೇ ಮೊದಲಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಅನೂಪ್ ಸೀಳಿನ್ ಸಂಗೀತ ಸಂಯೋಜನೆ ಚಿತ್ರಕ್ಕೆ ಇದೆ. ಅನಂತ್ ನಾಗ್ ತಾತನ ಪಾತ್ರ ಮಾಡಿದರೆ, ದಿಗಂತ್ ಮೊಮ್ಮಗನಾಗಿ ಕಾಣಿಸಿಕೊಂಡಿದ್ದಾರೆ. ಸಂಜಯ್ ಶರ್ಮಾ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಈ ಮೊದಲು ‘ಪಂಚರಂಗಿ, ‘ಗಾಳಿಪಟ’, ‘ಗಾಳಿಪಟ 2’ ಚಿತ್ರಗಳಲ್ಲಿ ಅನಂತ್ ನಾಗ್ ಹಾಗೂ ದಿಗಂತ್ ಒಟ್ಟಾಗಿ ನಟಿಸಿದ್ದರು.
ಧರಣಿ ಮಂಡಲ ಮಧ್ಯದೊಳಗೆ
‘ಗುಳ್ಟು’ ಚಿತ್ರದ ಮೂಲಕ ದೊಡ್ಡ ಮಟ್ಟದ ಖ್ಯಾತಿ ಪಡೆದುಕೊಂಡವರು ನವೀನ್ ಶಂಕರ್. ಅವರ ನಟನೆಯ ‘ಧರಣಿ ಮಂಡಲ ಮಧ್ಯದೊಳಗೆ’ ಸಿನಿಮಾ ಈ ವಾರ ರಿಲೀಸ್ ಆಗುತ್ತಿದೆ. ಐಶಾನಿ ಶೆಟ್ಟಿ, ಯಶ್ ಶೆಟ್ಟಿ, ಜಯಶ್ರೀ ಆರಾಧ್ಯ ಮೊದಲಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಶ್ರೀಧರ್ ಶಣ್ಮುಖ ಅವರು ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.
ವಾಸಂತಿ ನಲಿದಾಗ
ವಂಶಿ ರವೀಂದ್ರ ನಿರ್ದೇಶನದ, ಭಾವನಾ ಶ್ರೀನಿವಾಸ್, ಜೀವಿತಾ ವಸಿಷ್ಠ, ಸಾಯಿ ಕುಮಾರ್, ಸುಧಾರಾಣಿ ಮೊದಲಾದವರ ನಟನೆಯ ‘ವಾಸಂತಿ ನಲಿದಾಗ’ ಸಿನಿಮಾ ಈ ವಾರ ತೆರೆಗೆ ಬರುತ್ತಿದೆ. ಈ ಚಿತ್ರ ಯಾವ ರೀತಿಯಲ್ಲಿ ಮೋಡಿ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಹಿಟ್ 2
ತೆಲುಗಿನಲ್ಲಿ ಅಡಿವಿ ಶೇಷ್ ನಟನೆಯ ‘ಹಿಟ್ 2’ ಚಿತ್ರ ತೆರೆಗೆ ಬರುತ್ತಿದೆ. ಶೈಲೇಶ್ ಕೋಲನು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಆ್ಯಕ್ಷನ್ ಥ್ರಿಲ್ಲರ್ ಶೈಲಿಯಲ್ಲಿ ಈ ಸಿನಿಮಾ ಮೂಡಿ ಬಂದಿದೆ. ‘ಎವರು’, ‘ಮೇಜರ್’ ಅಂತಹ ಹಿಟ್ ಚಿತ್ರಗಳನ್ನು ಅವರು ನೀಡಿದ್ದಾರೆ.
ಆ್ಯನ್ ಆ್ಯಕ್ಷನ್ ಹೀರೋ
ಭಿನ್ನ ಚಿತ್ರಗಳ ಮೂಲಕ ಬಾಲಿವುಡ್ನಲ್ಲಿ ಗಮನ ಸೆಳೆದvರು ಆಯುಷ್ಮಾನ್ ಖುರಾನಾ. ಅವರು ಈಗ ‘ಆ್ಯನ್ ಆ್ಯಕ್ಷನ್ ಹೀರೋ’ ಚಿತ್ರದ ಮೂಲಕ ಪ್ರೇಕ್ಷಕರ ಎದುರು ಬರುತ್ತಿದ್ದಾರೆ. ಈ ಸಿನಿಮಾ ಟ್ರೇಲರ್ ಮೂಲಕ ಸಾಕಷ್ಟು ಗಮನ ಸೆಳೆದಿದೆ. ಈ ಚಿತ್ರದಲ್ಲಿ ಸೂಪರ್ ಸ್ಟಾರ್ ಆಗಿ ಕಾಣಿಸಿಕೊಂಡಿದ್ದಾರೆ ಆಯುಷ್ಮಾನ್.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:50 pm, Thu, 1 December 22