ವಿಶ್ವಾದ್ಯಂತ ಹವಾ ಸೃಷ್ಟಿಸಲು ‘ಟಾಕ್ಸಿಕ್’ ಇಂಗ್ಲಿಷ್ ಟ್ರೇಲರ್ ರಿಲೀಸ್: ವಿದೇಶದಲ್ಲೂ ಯಶ್ ಕ್ರೇಜ್
Toxic English Trailer: ಕನ್ನಡದ ‘ಟಾಕ್ಸಿಕ್’ ಸಿನಿಮಾ ಭಾರತದಲ್ಲಿ ಮಾತ್ರವಲ್ಲದೇ ವಿದೇಶದಲ್ಲೂ ಭರ್ಜರಿಯಾಗಿ ಬಿಡುಗಡೆ ಆಗಲಿದೆ. ಈ ಸಿನಿಮಾದ ಇಂಗ್ಲಿಷ್ ಟ್ರೇಲರ್ ಈಗ ಬಿಡುಗಡೆ ಆಗಿದ್ದು, ಜಾಗತಿಕ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಆಗಸ್ಟ್ 26ರಂದು ಈ ಸಿನಿಮಾ ವಿಶ್ವಾದ್ಯಂತ ರಿಲೀಸ್ ಆಗಲಿದೆ. ಈ ಟ್ರೇಲರ್ ಮೂಲಕ ಸಿನಿಮಾದ ಮೇಲಿನ ನಿರೀಕ್ಷೆ ಡಬಲ್ ಆಗಿದೆ.

ರಾಕಿಂಗ್ ಸ್ಟಾರ್ ಯಶ್ (Yash) ಅಭಿನಯದ, ಗೀತು ಮೋಹನ್ ದಾಸ್ ನಿರ್ದೇಶನದ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್’ (Toxic: A Fairy Tale for Grown-Ups) ಸಿನಿಮಾದ ಇಂಗ್ಲಿಷ್ ಟ್ರೇಲರ್ ಬಿಡುಗಡೆಯಾಗಿದೆ. ಆಗಸ್ಟ್ 8ರಂದೇ ಕನ್ನಡ ಹಾಗೂ ಭಾರತದ ಇತರೆ ಭಾಷೆಗಳ ಟ್ರೇಲರ್ ಬಿಡುಗಡೆಯಾಗಿ ಭಾರಿ ಸಂಚಲನ ಸೃಷ್ಟಿಸಿತ್ತು. ಇದೀಗ ಜಾಗತಿಕ ಪ್ರೇಕ್ಷಕರನ್ನು ತಲುಪುವ ಉದ್ದೇಶದಿಂದ ಆಗಸ್ಟ್ 19ರಂದು ಬಿಡುಗಡೆಯಾಗಿರುವ ಇಂಗ್ಲಿಷ್ ಟ್ರೇಲರ್ (Toxic English Trailer), ಯಶ್ ಅವರ ರಗಡ್ ಅವತಾರ ಮತ್ತು ಚಿತ್ರದ ಕರಾಳ ಜಗತ್ತಿನ ಕಥೆಯನ್ನು ಮತ್ತಷ್ಟು ವಿಸ್ತಾರವಾಗಿ ಪರಿಚಯಿಸಿದೆ.
ಇಂಗ್ಲಿಷ್ ಪ್ರೇಕ್ಷಕರಿಗೆ ಈ ಟ್ರೇಲರ್ ಮೂಲಕ ‘ಟಾಕ್ಸಿಕ್’ ಜಗತ್ತಿನ ಬಗ್ಗೆ ಪರಿಚಯ ಮಾಡಿಕೊಡಲಾಗಿದೆ. ಈ ಟ್ರೇಲರ್‌ನಲ್ಲಿ ಯಶ್ ಅವರ ಹಲವು ಲುಕ್ ಅನಾವರಣ ಆಗಿದೆ. ಗ್ಯಾಂಗ್‌ಸ್ಟರ್ ಪಾತ್ರದಲ್ಲಿ ಅವರು ಮಿಂಚಿದ್ದಾರೆ. ಕ್ರಿಮಿನಲ್ ಸಾಮ್ರಾಜ್ಯದ ಅಧಿಕಾರಕ್ಕಾಗಿ ನಡೆಯುವ ದಂಗೆ, ರಕ್ತಸಿಕ್ತ ಗ್ಯಾಂಗ್‌ವಾರ್ ಹಾಗೂ ಸೇಡಿನ ಕಥೆ ಚಿತ್ರದಲ್ಲಿದೆ. ಇದರ ಜೊತೆಗೆ ಕಥೆಯಲ್ಲಿ ಹಲವು ಮಹಿಳಾ ಪಾತ್ರಗಳ ಪ್ರವೇಶವಾಗಲಿದ್ದು, ಪ್ರತಿಯೊಂದು ಪಾತ್ರಕ್ಕೂ ತನ್ನದೇ ಆದ ಪ್ರಾಮುಖ್ಯತೆ ಇದೆ ಎಂಬ ಸುಳಿವು ಸಿಕ್ಕಿದೆ.
‘ಟಾಕ್ಸಿಕ್’ ಇಂಗ್ಲಿಷ್ ಟ್ರೇಲರ್:
ಟ್ರೇಲರ್‌ನ ಪ್ರಮುಖ ಆಕರ್ಷಣೆ ಎಂದರೆ ಯಶ್ ಅವರ ದ್ವಿಪಾತ್ರದ ಗೆಟಪ್. ಅವರು ಈ ಸಿನಿಮಾದಲ್ಲಿ ತಂದೆ ಮತ್ತು ಮಗನಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ನಡೆಯುತ್ತಿದೆ. ಯಶ್ ಅವರು ಬೇರೆ ಬೇರೆ ಗೆಟಪ್ನಲ್ಲಿ ಕಾಣಿಸಿಕೊಂಡಿರುವುದರ ಹಿಂದಿನ ಕಥೆ ಏನಿರಬಹುದು ಎಂದು ಪ್ರೇಕ್ಷಕರು ಈಗಾಗಲೇ ಊಹಿಸಲು ಆರಂಭಿಸಿದ್ದಾರೆ.
ಭಾರತದಲ್ಲಿ ‘ಟಾಕ್ಸಿಕ್’ ಸಿನಿಮಾ ಮೇಲೆ ಅಭಿಮಾನಿಗಳು ಬೆಟ್ಟದಷ್ಟು ನಿರೀಕ್ಷೆ ಹೊಂದಿದ್ದಾರೆ. ದೇಶಿಯ ಮಾರುಕಟ್ಟೆಯಲ್ಲಿ ಈ ಚಿತ್ರಕ್ಕೆ ಮೊದಲ ದಿನ ಅತಿ ದೊಡ್ಡ ಓಪನಿಂಗ್ ಸಿಗಲಿದೆ ಎಂಬುದರಲ್ಲಿ ಅನುಮಾನವೇ ಇಲ್ಲ. ಅದರ ಜೊತೆಗೆ ಜಾಗತಿಕ ಮಾರುಕಟ್ಟೆ ಮೇಲೆ ‘ಟಾಕ್ಸಿಕ್’ ತಂಡ ಕಣ್ಣಿಟ್ಟಿದೆ. ಹಾಗಾಗಿ ವಿಶ್ವಾದ್ಯಂತ ಇರುವ ಪ್ರೇಕ್ಷಕರನ್ನು ಸೆಳೆಯಲು ಈ ಇಂಗ್ಲಿಷ್ ಟ್ರೇಲರ್ ಬಿಡುಗಡೆ ಮಾಡಲಾಗಿದೆ.
ಇದನ್ನೂ ಓದಿ: ‘ರಾಮಾಯಣ’ ಚಿತ್ರದ 4 ಸಾವಿರ ಕೋಟಿ ರೂ. ಬಜೆಟ್ ರಹಸ್ಯ ಬಿಚ್ಚಿಟ್ಟ ಯಶ್: ಇದು ಹಾಲಿವುಡ್ ಲೆಕ್ಕಾಚಾರ
ಈ ಸಿನಿಮಾದಲ್ಲಿ ಯಶ್ ಜೊತೆ ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ, ರುಕ್ಮಿಣಿ ವಸಂತ್ ಅವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ‘ಕೆವಿಎನ್ ಪ್ರೊಡಕ್ಷನ್ಸ್’ ಹಾಗೂ ‘ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್’ ಜಂಟಿಯಾಗಿ ನಿರ್ಮಿಸಿರುವ ಈ ಬಿಗ್ ಬಜೆಟ್ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ ಆಗಸ್ಟ್ 26ರಂದು ವಿಶ್ವಾದ್ಯಂತ ಅದ್ದೂರಿಯಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




