
ಯಶ್ ನಟನೆಯ ‘ಟಾಕ್ಸಿಕ್’ ಟೀಸರ್ (Toxic Teaser) ಸೃಷ್ಟಿಸಿದ ಹಲ್ಚಲ್ ಅಷ್ಟಿಷ್ಟಲ್ಲ. ಈ ಸಿನಿಮಾದ ಟೀಸರ್ ನೋಡಿದ ಅನೇಕರು ನಾನಾ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದರು. ಈ ಟೀಸರ್ನಲ್ಲಿದ್ದ ಬೋಲ್ಡ್ ದೃಶ್ಯಗಳ ಬಗ್ಗೆ ಕೆಲವರು ಅಪಸ್ವರ ತೆಗೆದಿದ್ದರು. ಈ ಸಂಬಂಧ ಸಾಮಾಜಿಕ ಕಾರ್ಯಕರ್ತರು ಹಾಗೂ ಮಹಿಳಾ ಕಮಿಷನ್ ಸೆನ್ಸಾರ್ ಮಂಡಳಿಗೆ ದೂರು ನೀಡಿತ್ತು. ಈ ಬಗ್ಗೆ ಕ್ರಮ ಕೈಗೊಳ್ಳಲು ಒತ್ತಾಯಿಸಲಾಗಿತ್ತು. ಆದರೆ, ಅದಕ್ಕೂ ನಮಗೂ ಸಂಬಂಧ ಇಲ್ಲ ಎಂದು ಸೆನ್ಸಾರ್ ಮಂಡಳಿ ಸ್ಪಷ್ಟವಾಗಿ ಹೇಳಿದೆ.
ಎನ್ಡಿಟಿವಿ ಮಾಡಿದ ವರದಿ ಪ್ರಕಾರ, ಸೆನ್ಸಾರ್ ಮಂಡಳಿ ಈ ವಿಷಯದಲ್ಲಿ ಮಧ್ಯ ಬರಲು ಸಾಧ್ಯವಿಲ್ಲ ಎಂದು ಹೇಳಿದೆಯಂತೆ. ಏಕೆಂದರೆ ‘ಟಾಕ್ಸಿಕ್’ ಟೀಸರ್ ಯೂಟ್ಯೂಬ್ ಸೇರಿದಂತೆ ಇತರೆ ಸೋಶಿಯಲ್ ಮೀಡಿಯಾಗಳಲ್ಲಿ ಮಾತ್ರ ರಿಲೀಸ್ ಆಗಿದೆ. ಸೆನ್ಸಾರ್ ಮಂಡಳಿ ಥಿಯೇಟರ್ಗಳಲ್ಲಿ ರಿಲೀಸ್ ಆಗುವ ಸಿನಿಮಾ, ಟ್ರೇಲರ್ ಹಾಗೂ ಜಾಹೀರಾತುಗಳಿಗೆ ಮಾತ್ರ ಪ್ರಮಾಣಪತ್ರ ನೀಡುತ್ತವೆ. ಯೂಟ್ಯೂಬ್ನಲ್ಲಿ ರಿಲೀಸ್ ಆಗುವ ವಿಷಯಗಳಿಗೆ ಅವರು ಮೂಗುತೂರಿಸಲು ಸಾಧ್ಯವಿಲ್ಲ.
‘ಟಾಕ್ಸಿಕ್ ಚಿತ್ರದ ಟೀಸರ್ ರಿಲೀಸ್ ಆಗಿದ್ದು ಯೂಟ್ಯೂಬ್ನಲ್ಲಿ. ಇದರಲ್ಲಿ ನಾವು ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ. ಸದ್ಯದ ಮಟ್ಟಿಗೆ ಟಾಕ್ಸಿಕ್ಗೆ ಸಂಬಂಧಿಸಿದಂತೆ ಸೆನ್ಸಾರ್ ಮಾಡಲು ಯಾವುದೇ ಅರ್ಜಿ ಬಂದಿಲ್ಲ. ನಾವು ಈ ಚಿತ್ರದ ಯಾವುದೇ ಕಂಟೆಂಟ್ನ ಸೆನ್ಸಾರ್ ಮಾಡಿಲ್ಲ’ ಎಂದು ಸ್ಪಷ್ಟಮಾತುಗಳಲ್ಲಿ ಹೇಳಿದೆ. ಸೆನ್ಸಾರ್ ಮಂಡಳಿ ಕಾರ್ಯವೈಖರಿ ಗೊತ್ತಿದ್ದರೆ ಈ ರೀತಿಯ ದೂರು ಸೆನ್ಸಾರ್ ಮಂಡಳಿಗೆ ದಾಖಲಾಗುತ್ತಿರಲಿಲ್ಲವೇನೋ.
ಇದನ್ನೂ ಓದಿ: ‘ಟಾಕ್ಸಿಕ್’ ಟೀಸರ್ನಲ್ಲಿ ತಪ್ಪು: ವೀಕ್ಷಕರ ದಾರಿ ತಪ್ಪಿಸಲಾಗಿದೆಯೇ?
ಈ ಮೊದಲು ಕೂಡ ಯೂಟ್ಯೂಬ್ನಲ್ಲಿ ರಿಲೀಸ್ ಆದ ಅನೇಕ ಬೋಲ್ಡ್ ಕಂಟೆಂಟ್‌ಗಳ ಬಗ್ಗೆ ಪ್ರಶ್ನೆ ಎದುರಾಗಿತ್ತು. ಆದರೆ, ಈ ವಿಷಯದಲ್ಲಿ ಹಸ್ತಕ್ಷೇಪ ಸಾಧ್ಯವಿಲ್ಲ ಎಂದು ಸೆನ್ಸಾರ್ ಮಂಡಳಿ ನೇರವಾಗಿ ಹೇಳಿತ್ತು. ಒಂದೊಮ್ಮೆ ಇದೇ ರೀತಿಯ ಬೋಲ್ಡ್ ಕಂಟೆಂಟ್ಗಳು ಸಿನಿಮಾ ಸೆನ್ಸಾರ್ ಮಾಡುವಾಗ ಕಂಡರೆ ಸೆನ್ಸಾರ್ ಮಂಡಳಿ ಅದನ್ನು ಪ್ರಶ್ನೆ ಮಾಡಬಹುದು. ಎ ಸರ್ಟಿಫಿಕೇಟ್ ನೀಡಬಹುದು. ಈಗ ಟೀಸರ್ ಯೂಟ್ಯೂಬ್ನಲ್ಲಿ ಮಾತ್ರ ರಿಲೀಸ್ ಆಗಿರುವುದರಿಂದ ಚಿತ್ರಕ್ಕೆ ಯಾವುದೇ ಸಮಸ್ಯೆ ಇಲ್ಲ. ಈಗ ಸೆನ್ಸಾರ್ ಮಂಡಳಿಯ ಹೇಳಿಕೆಯು ‘ಟಾಕ್ಸಿಕ್’ ತಂಡಕ್ಕೆ ದೊಡ್ಡ ರಿಲೀಫ್ ನೀಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:27 am, Wed, 14 January 26