ಬದಲಾಗಲ್ಲ ಬಾಲಿವುಡ್, ಮತ್ತೆ ‘ಕಾಂತಾರ’ಕ್ಕೆ ಅವಮಾನ ಮಾಡುವ ಯತ್ನ
Kantara Chapter 1: ಕೆಲ ತಿಂಗಳ ಹಿಂದಷ್ಟೆ ಬಾಲಿವುಡ್ ನಟ ರಣ್ವೀರ್ ಸಿಂಗ್ ವೇದಿಕೆ ಮೇಲೆ ಅಸಹ್ಯಕರವಾಗಿ ದೈವದ ಅನುಕರಣೆ ಮಾಡಿ ನಿಂದನೆಗೆ ಗುರಿಯಾಗಿದ್ದರು ಬಳಿಕ ಕ್ಷಮೆಯನ್ನೂ ಕೇಳಿದರು. ಆದರೆ ಅಷ್ಟಕ್ಕೆ ಬಾಲಿವುಡ್ ಬುದ್ಧಿಕಲಿತಿಲ್ಲ, ಇದೀಗ ಬಾಲಿವುಡ್ನ ಹಾಸ್ಯ ಸಿನಿಮಾ ಒಂದು ದೈವವನ್ನು ಹಾಸ್ಯಕ್ಕೆ ಬಳಸಿಕೊಳ್ಳಲು ಯತ್ನಿಸಿದೆ. ಯಾವುದು ಆ ಸಿನಿಮಾ?

‘ಕಾಂತಾರ’ ಮತ್ತು ‘ಕಾಂತಾರ: ಚಾಪ್ಟರ್ 1’ (Kantara) ಸಿನಿಮಾನಲ್ಲಿ ಕರಾವಳಿಯ ದೈವ ಆರಾಧನೆ ಅದರ ಮಹಿಮೆ ಇನ್ನಿತರೆ ವಿಚಾರಗಳನ್ನು ತೋರಿಸಲಾಗಿದೆ. ಸಿನಿಮಾ ಮಾಡುವಾಗ ತಾವು ದೈವಗಳಿಗೆ ಅಪಚಾರ ಆಗದಂತೆ ಬಲು ನೇಮ-ನಿಷ್ಠೆಯಿಂದ ಸಿನಿಮಾ ಮಾಡಿರುವುದಾಗಿ ರಿಷಬ್ ಶೆಟ್ಟಿ ಹೇಳಿದ್ದರು. ಅಲ್ಲದೆ ಯಾರೂ ಸಹ ದೈವವನ್ನು ಅನುಕರಣೆ ಮಾಡುವುದು ಬೇಡ, ದೈವವನ್ನು ಹಾಸ್ಯಕ್ಕೆ ಬಳಸಿಕೊಳ್ಳುವುದು ಅಕ್ಷಮ್ಯ ಎಂದು ಸಹ ಹೇಳಿದ್ದರು. ಆದರೂ ಸಹ ಕೆಲವರು ಅದನ್ನು ಮಾಡುತ್ತಲೇ ಬಂದಿದ್ದಾರೆ. ಇತ್ತೀಚೆಗಷ್ಟೆ ಬಾಲಿವುಡ್ನ ಸ್ಟಾರ್ ನಟ ರಣ್ವೀರ್ ಸಿಂಗ್, ವೇದಿಕೆ ಮೇಲೆ ಕೆಟ್ಟದಾಗಿ ದೈವನ ಅನುಕರಣೆ ಮಾಡಿ ಕನ್ನಡಿಗರ ಸಿಟ್ಟಿಗೆ ಕಾರಣವಾಗಿದ್ದರು. ಆದರೆ ಇದೀಗ ಮತ್ತೊಂದು ಬಾಲಿವುಡ್ ತಂಡ ಇದೇ ಯತ್ನ ಮಾಡಿದೆ.
ಬಾಲಿವುಡ್ನ ಹಾಸ್ಯ ಪ್ರಧಾನ ಸಿನಿಮಾಗಳಲ್ಲಿ ಅತಿರೇಕಕ್ಕೆ ಹೋಗಿ ಹಾಸ್ಯ ಮಾಡುವುದು ಮಾಮೂಲು, ಬಾಲಿವುಡ್ನಲ್ಲಿ ನಡೆಯುವುದು ಮೈಂಡ್ ಲೆಸ್ ಕಾಮಿಡಿ ಮತ್ತು ಬಾಡಿ ಶೇಮಿಂಗ್ ಕಾಮಿಡಿ. ಗೋಲ್ಮಾಲ್, ವೆಲ್ಹಮ್, ‘ಹೌಸ್ಫಯಲ್’ ಇಂಥಹುಗಳಿಗೆ ಉದಾಹರಣೆ. ಇದೀಗ ಬಾಲಿವುಡ್ನ ಇಂಥಹುದೇ ಒಂದು ಹಾಸ್ಯ ಪ್ರಧಾನ ಸಿನಿಮಾನಲ್ಲಿ ‘ಕಾಂತಾರ’ ಸಿನಿಮಾವನ್ನು ಹಾಸ್ಯಕ್ಕೆ ಬಳಸಿಕೊಳ್ಳಲಾಗಿದೆ.
ಇದನ್ನೂ ಓದಿ:ಆಸ್ಕರ್ ರೇಸ್ನಲ್ಲಿ ಸ್ಥಾನ ಪಡೆದ ‘ಕಾಂತಾರ: ಚಾಪ್ಟರ್ 1’ ಸಿನಿಮಾ
‘ರಾಹು-ಕೇತು’ ಹೆಸರಿನ ಹಿಂದಿ ಹಾಸ್ಯ ಪ್ರಧಾನ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದ್ದು, ಸಿನಿಮಾನಲ್ಲಿ ‘ಕಾಂತಾರ’ ಸಿನಿಮಾದ ಕೂಗು ಮತ್ತು ಸಿನಿಮಾದ ರೆಫೆರೆನ್ಸ್ಗಳನ್ನು ಸಹ ಬಳಸಲಾಗಿತ್ತು. ಆದರೆ ಸೆನ್ಸಾರ್ ಮಂಡಳಿ ಆ ಎರಡಕ್ಕೂ ಕತ್ತರಿ ಹಾಕಿದೆ. ಇಬ್ಬರು ಪೆದ್ದ ಯುವಕರ ಕತೆ ‘ರಾಹು-ಕೇತು’ ಆಗಿದ್ದು, ಸಿನಿಮಾನಲ್ಲಿ ಹಾಸ್ಯಕ್ಕಾಗಿ ‘ಕಾಂತಾರ’ ಸಿನಿಮಾದ ರೆಫೆರನ್ಸ್ ಅನ್ನು ಹಾಗೂ ದೈವದ ಕೂಗನ್ನು ಬಳಸಲಾಗಿತ್ತಂತೆ. ಆದರೆ ಅದರಿಂದ ಭಕ್ತರ ಭಾವನೆಗೆ ಧಕ್ಕೆ ಉಂಟಾಗುತ್ತದೆ ಎಂದು ಆ ದೃಶ್ಯವನ್ನು ತೆಗೆದಿದೆ.
ರಿಷಬ್ ಶೆಟ್ಟಿ, ಹೊಂಬಾಳೆ ಫಿಲಮ್ಸ್ ಮತ್ತು ‘ಕಾಂತಾರ’ ಸಿನಿಮಾ ತಂಡಕ್ಕೆ ಸೇರಿದ ಹಲವರು ಹಲವು ಬಾರಿ ಈ ಬಗ್ಗೆ ಹೇಳಿದ್ದಾರೆ. ದೈವದ ಅನುಕರಣೆ ಮಾಡುವುದು, ದೈವವನ್ನು ಹಾಸ್ಯಕ್ಕೆ ಬಳಸಿಕೊಳ್ಳುವುದು ಬೇಡ ಎಂದು ಆದರೂ ಸಹ ಪದೇ ಪದೇ ಕೆಲವರು ಕಮರ್ಶಿಯಲ್ ಕಾರಣಗಳಿಗೆ, ಹಾಸ್ಯಕ್ಕೆ ದೈವದ ಅನುಕರಣೆ ಮಾಡುತ್ತಲೇ ಇದ್ದಾರೆ. ಇದೀಗ ಸೆನ್ಸಾರ್ ಮಂಡಳಿ ಸಮಯೋಚಿತವಾಗಿ ಬಾಲಿವುಡ್ ಸಿನಿಮಾದಿಂದ ‘ಕಾಂತಾರ’ ಸಿನಿಮಾದ ರೆಫೆರೆನ್ಸ್ ಅನ್ನು ತೆಗೆದು ಹಾಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




