ತುಳು ಚಿತ್ರರಂಗದಲ್ಲಿ (Coastalwood) ನಟನಾಗಿ, ನಿರ್ದೇಶಕನಾಗಿ ಹೆಸರು ಮಾಡಿರುವ ದೇವದಾಸ್ ಕಾಪಿಕಾಡ್ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದಾರೆ. ರಾಷ್ಟ್ರಕೂಟ ಪಿಕ್ಚರ್ಸ್ ಲಾಂಛನದಲ್ಲಿ ವಿ ರವಿ ಕುಮಾರ್ ನಿರ್ಮಾಣ ಮಾಡಿರುವ “ಪುರುಷೋತ್ತಮನ ಪ್ರಸಂಗ” ಸಿನಿಮಾವನ್ನು ನಿರ್ದೇಶಕ ದೇವದಾಸ್ ಕಾಪಿಕಾಡ್ ನಿರ್ದೇಶಿಸಿದ್ದಾರೆ. ಭಿನ್ನ ಕತೆ ಹೊಂದಿರುವ ಈ ಸಿನಿಮಾ ಬಿಡುಗಡೆಗೆ ಸಿದ್ದವಾಗಿದೆ. ಫೆಬ್ರವರಿಯಲ್ಲಿ ಸಿನಿಮಾ ಬಿಡುಗಡೆ ಆಗಲಿದೆ.
ನಿರ್ದೇಶಕ ದೇವದಾಸ್ ಕಾಪಿಕಾಡ್ ಮಾತನಾಡಿ, ‘ತುಳು ಭಾಷೆಯಲ್ಲಿ ಒಂಭತ್ತು ಸಿನಿಮಾಗಳನ್ನು ನಿರ್ದೇಶನ ಮಾಡಿರುವ ನನಗೆ ಕನ್ನಡದಲ್ಲಿ ಇದು ಮೊದಲ ಚಿತ್ರ ಕನ್ನಡದಲ್ಲಿ ನನಗೆ ಮೊದಲ ಸಿನಿಮಾ. ಈ ಚಿತ್ರ ನಿರ್ದೇಶಿಸಲು ಅವಕಾಶ ನೀಡಿದ ನಿರ್ಮಾಪಕರಿಗೆ ಧನ್ಯವಾದ. “ಪುರುಷೋತ್ತಮನ ಪ್ರಸಂಗ” ಕೌಟುಂಬಿಕ ಕಥಾಹಂದರ ಹೊಂದಿರುವ ನೈಜಘಟನೆ ಆಧಾರಿತ ಸಿನಿಮಾ. ಪುರುಷೋತ್ತಮ ನ ಪಾತ್ರದಲ್ಲಿ ನಿರ್ಮಾಪಕ ರವಿಕುಮಾರ್ ಅವರ ಪುತ್ರ ಅಜಯ್ ಅಭಿನಯಿಸಿದ್ದಾರೆ. ಈ ಪಾತ್ರಕ್ಕೆ ಹೇಳಿಮಾಡಿಸಿದ ನಟ ಅಜಯ್. ಹೊರದೇಶದಲ್ಲಿ ಸಿನಿಮಾ ಕುರಿತು ಅಧ್ಯಯನ ಮಾಡಿ ಬಂದಿದ್ದಾರೆ. ರಿಷಿಕಾ ನಾಯ್ಕ್ ಈ ಚಿತ್ರದ ನಾಯಕಿ’ ಎಂದರು.
ಇದನ್ನೂ ಓದಿ:ಸ್ಯಾಂಡಲ್ವುಡ್ ಜೊತೆ ನಂಟಿರುವ ಬಾಲಿವುಡ್ನ ಖ್ಯಾತ ನಟಿಯ ಪುತ್ರಿ ಈಕೆ: ಯಾರು ಗುರುತಿಸಬಲ್ಲಿರಾ?
ತುಳು ಸಿನಿಮಾ ರಂಗದ ಜನಪ್ರಿಯ ನಟರಾದ ನವೀನ್ ಡಿ ಪಡೀಲ್, ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರು ಮುಂತಾದ ಕಲಾವಿದರು ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ನಿರ್ದೇಶಕ ದೇವದಾಸ್ ಕಾಪಿಕಾಡ್ ಅವರು ಸಹ ಪ್ರಮುಖ ಪಾತ್ರವೊಂದನ್ನು ನಟಿಸಿದ್ದಾರೆ. ದೇವದಾಸ್ ಕಾಪಿಕಾಡ್ ಪುತ್ರ ಅರ್ಜುನ್ ಈ ಸಿನಿಮಾಕ್ಕೆ ಸಹ ನಿರ್ದೇಶಕನಾಗಿ ದುಡಿಯಲಿದ್ದಾರೆ. ನಕುಲ್ ಅಭಯಂಕರ್ ಅವರ ಸಂಗೀತ ನಿರ್ದೇಶನ ಮಾಡಿದ್ದು ಸಿನಿಮಾದಲ್ಲಿ ನಾಲ್ಕು ಹಾಡುಗಳಿವೆ. ಜಯಂತ ಕಾಯ್ಕಿಣಿ, ದೊಡ್ಡರಂಗೇ ಗೌಡ, ವಿ.ನಾಗೇಂದ್ರ ಪ್ರಸಾದ್ ಹಾಗೂ ನಿರ್ದೇಶಕರು ತಲಾ ಒಂದೊಂದು ಹಾಡುಗಳನ್ನು ಬರೆದಿದ್ದಾರೆ. ಛಾಯಾಗ್ರಾಹಕರಾಗಿ ವಿಷ್ಣು ದುಡಿದಿದ್ದಾರೆ. ಸಿನಿಮಾವನ್ನು ಮಂಗಳೂರು ಹಾಗೂ ದುಬೈನಲ್ಲಿ ಚಿತ್ರೀಕರಣ ಮಾಡಲಾಗಿದೆ. ಫೆಬ್ರವರಿ ಮಧ್ಯ ಭಾಗದಲ್ಲಿ ಸಿನಿಮಾ ಬಿಡುಗಡೆ ಮಾಡಲು ಯೋಜನೆ ಹಾಕಿಕೊಂಡಿದ್ದಾರೆ.
‘ನಾನು ಈ ಹಿಂದೆ “ಕಿಸ್”, ” ಮೆಹಬೂಬ “, “ನಾಟ್ ಔಟ್” ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ನಾಯಕನಾಗಿ ನಟಿಸಿರುವ ಮೊದಲ ಸಿನಿಮಾ ಇದು. ತುಳು ರಂಗಭೂಮಿ ಹಾಗೂ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿರುವ ನಿರ್ದೇಶಕ ದೇವದಾಸ್ ಕಾಪಿಕಾಡ್ ಅವರ ನಿರ್ದೇಶನದಲ್ಲಿ ಚಿತ್ರ ಚೆನ್ನಾಗಿ ಮೂಡಿಬಂದಿದೆ. ನನ್ನ ಪಾತ್ರವೂ ಚೆನ್ನಾಗಿದೆ’ ಎಂದರು ನಾಯಕ ಅಜಯ್.
ನಾಯಕಿ ರಿಷಿಕಾ ನಾಯ್ಕ್ ತಮ್ಮ ಪಾತ್ರದ ಬಗ್ಗೆ ಮಾಹಿತಿ ನೀಡಿದರು. ನಿರ್ಮಾಪಕರಾದ ವಿ.ರವಿಕುಮಾರ್, ಶಂಶುದ್ದೀನ್ ಚಿತ್ರದ ಕುರಿತು ಮಾತನಾಡಿದರು. ಶರ್ಮಿಳಾ ಕಾಪಿಕಾಡ್ ಚಿತ್ರಕ್ಕೆ ಶುಭ ಹಾರೈಸಿದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ