ಹೀಗೆ ಬದುಕಬೇಕು ಎಂಬ ಮಾದರಿಯನ್ನು ಹಾಕಿಕೊಟ್ಟಿದ್ದಾರೆ ಲೀಲಾವತಿ: ಉಮಾಶ್ರೀ
Leelavathi: ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ನಿಧನ ಹೊಂದಿದ್ದಾರೆ. ನಟಿ ಉಮಾಶ್ರೀ ಅವರು ಲೀಲಾವತಿಯವರ ಜೀವನ, ಸಾಧನೆ ಬಗ್ಗೆ ಮಾತನಾಡಿದ್ದು ಹೀಗೆ...
ಕನ್ನಡ ಚಿತ್ರರಂಗದ (Sandalwood) ಹಿರಿಯ ನಟಿ ಲೀಲಾವತಿ (Leelavathi) ನಿಧನ ಹೊಂದಿದ್ದಾರೆ. ನೆಲಮಂಗಲದ ಸೋಲದೇವನಹಳ್ಳಿಯಲ್ಲಿ ಪುತ್ರ ವಿನೋದ್ ರಾಜ್ ಜೊತೆ ನೆಲೆಸಿದ್ದ ಲೀಲಾವತಿ ಅವರು ಇಂದು ಸಂಜೆ ಕೊನೆ ಉಸಿರೆಳೆದರು. ಲೀಲಾವತಿ ಅವರ ಆರೋಗ್ಯದಲ್ಲಿ ವ್ಯತ್ಯಯ ಆಗುತ್ತಿದ್ದಂತೆ ಅವರನ್ನು ನೆಲಮಂಗಲದ ಖಾಸಗಿ ಆಸ್ಪತ್ರೆಗೆ ಕರೆತರಲಾಯ್ತಾದರೂ ಆಸ್ಪತ್ರೆಯಲ್ಲಿ ಅವರು ಕೊನೆ ಉಸಿರೆಳೆದರು. ಲೀಲಾವತಿ ಅವರ ನಿಧನಕ್ಕೆ ಚಿತ್ರರಂಗದವರು, ರಾಜಕೀಯ ರಂಗದವರು ಕಂಬನಿ ಮಿಡಿಯುತ್ತಿದ್ದಾರೆ.
ಟಿವಿ9 ಜೊತೆ ಮಾತನಾಡಿದ ನಟಿ ಉಮಾಶ್ರೀ, ‘‘ಲೀಲಾವತಿ ಅವರು ಕೇವಲ ನಟಿಯಲ್ಲ, ಅವರು ದಂತಕತೆ. ನಟಿಯಾಗಿ ಮಾತ್ರವೇ ಅಲ್ಲದೆ, ತಮ್ಮ ಮಾನವೀಯ ಗುಣಗಳಿಂದ, ಸಾಮಾಜಿಕ ದೃಷ್ಟಿಕೋನದಿಂದಲೂ ಗುರುತಿಸಿಕೊಂಡವರು. ಒಬ್ಬ ನಟಿ ಹೇಗೆ ಬದುಕಬೇಕು ಎಂದು ತೋರಿಸಿಕೊಟ್ಟವರು. ಹಲವಾರು ಮಂದಿಗೆ ಮಾದರಿಯಾಗಿ ಬದುಕಿದವರು ಲೀಲಾವತಿ’’ ಎಂದಿದ್ದಾರೆ.
‘‘ನಟಿಯಾಗಿ ತಾನು ದುಡಿದಿದ್ದನ್ನು ಸಮಾಜಕ್ಕೆ ಅರ್ಪಿಸಿದವರು ಲೀಲಾವತಿ. ದುಡಿದಿದ್ದೆಲ್ಲವನ್ನೂ ಮಗನಿಗಾಗಿ ನೀಡದೆ ಸಮಾಜಕ್ಕೆ ಪಾಲು ನೀಡಿದ ಮಹಾನ್ ಮಹಿಳೆ ಲೀಲಾವತಿ. ನಟಿಯಾಗಿ ಮೆರೆದರೂ ರೈತ ಮಹಿಳೆಯಾಗಿ ಜೀವನ ನಡೆಸಿದರು. ತಮ್ಮ ತೋಟದಲ್ಲಿ ತಾನೇ ಗುದ್ದಲಿ, ಸಲಿಕೆ ಹಿಡಿದು ಕೆಲಸ ಮಾಡುತ್ತಿದ್ದರು. ಅವರನ್ನು ಹತ್ತಿರದಿಂದ ನೋಡಿದವರು ಮಾತ್ರವೇ ಇದನ್ನೆಲ್ಲ ಬಲ್ಲರು. ಅವರ ಪರಿಸರ ಪ್ರೀತಿ ಅಪಾರ. ಮದ್ರಾಸ್ನಲ್ಲಿದ್ದಾಗಲೂ ಅವರು ಫಾರಂ ಹೌಸ್ ಹೊಂದಿದ್ದರು. ಘಟ್ಟ ಪ್ರದೇಶದವರಾಗಿದ್ದ ಲೀಲಾವತಿಯವರಿಗೆ ಸಹಜವಾಗಿಯೇ ಕಾಡು, ಗಿಡ-ಮರಗಳ ಬಗ್ಗೆ ಪ್ರೀತಿಯಿತ್ತು, ಹಾಗಾಗಿ ಅವರು ರೈತ ಜೀವನ ಆರಿಸಿಕೊಂಡರು’’ ಎಂದಿದ್ದಾರೆ ಉಮಾಶ್ರೀ.
‘‘ಕನ್ನಡ ಚಿತ್ರರಂಗಕ್ಕೆ ಲೀಲಾವತಿ ಅವರು ಕೊಟ್ಟಿರುವ ಕೊಡುಗೆ ಅಪಾರವಾದುದು. ಮಾತ್ರವಲ್ಲದೆ ಬದುಕಿನ ಮಾದರಿಯನ್ನು ನೀಡಿದ್ದಾರೆ. ರಂಗಭೂಮಿ ಮೂಲಕ ನಟನೆಗೆ ಆಗಮಿಸಿ, ನಾಯಕಿ, ಪೋಷಕ ಕಲಾವಿದೆ ಎಲ್ಲ ಬಗೆಯ ಪಾತ್ರಗಳನ್ನೂ ನಿರ್ವಹಿಸಿದರು. ಡಾ ರಾಜ್ಕುಮಾರ್ ಅವರೊಟ್ಟಿಗೆ ಲೀಲಾವತಿ ಅವರು ಮಾಡಿದ ಚಿತ್ರಗಳು ಒಂದೊಂದು ಒಂದೊಂದು ಮುತ್ತುಗಳು. ಅವರೀಗ ಅಗಲಿದ್ದಾರೆ, ಅಪಾರವಾಗಿ ಹಚ್ಚಿಕೊಂಡಿದ್ದ ಮುದ್ದಿನ ಮಗನನ್ನು ಬಿಟ್ಟು ಹೋಗಿದ್ದಾರೆ. ವಿನೋದ್ ರಾಜ್ ಸ್ಥಿತಿಯನ್ನು ನೆನಪಿಸಿಕೊಂಡರೆ ಮನಸ್ಸು ಭಾರವಾಗುತ್ತದೆ. ದೇವರು ದುಃಖವನ್ನು ಭರಿಸುವ ಶಕ್ತಿ ವಿನೋದ್ಗೆ ನೀಡಲಿ’’ ಎಂದರು ಉಮಾಶ್ರೀ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ