ಮಡೆನೂರು ಮನುಗೆ ಬಿಗ್ ರಿಲೀಫ್; ಕನ್ನಡ ಚಿತ್ರರಂಗದಲ್ಲಿ ಹೇರಿದ್ದ ಬ್ಯಾನ್ ತೆರವು

ದರ್ಶನ್, ಧ್ರುವ ಸರ್ಜಾ, ಶಿವರಾಜ್​ಕುಮಾರ್ ಬಗ್ಗೆ ಮಡೆನೂರು ಮನು ಅವಹೇಳನಕಾರಿಯಾಗಿ ಮಾತನಾಡಿದ ವಿಡಿಯೋ ವೈರಲ್ ಆಗಿತ್ತು. ಆ ಬಳಿಕ ಅವರನ್ನು ಚಿತ್ರರಂಗದಿಂದ ಬ್ಯಾನ್ ಮಾಡಬೇಕು ಎಂದು ಅಭಿಮಾನಿಗಳಿಂದ ಒತ್ತಾಯ ಕೇಳಿಬಂದಿತ್ತು. ಆದರೆ ಈಗ ಮನು ಅವರಿಗೆ ರಿಲೀಫ್ ಸಿಕ್ಕಿದೆ. ಅವರ ಕ್ಷಮಾಪಣೆ ಪತ್ರವನ್ನು ಉಮೇಶ್ ಬಣಕಾರ್ ಸ್ವೀಕರಿಸಿದ್ದಾರೆ.

ಮಡೆನೂರು ಮನುಗೆ ಬಿಗ್ ರಿಲೀಫ್; ಕನ್ನಡ ಚಿತ್ರರಂಗದಲ್ಲಿ ಹೇರಿದ್ದ ಬ್ಯಾನ್ ತೆರವು
Madenur Manu, Shivanna, Darshan, Dhruva Sarja

Updated on: Jun 30, 2025 | 3:39 PM

ಕಿರುತೆರೆಯ ‘ಕಾಮಿಡಿ ಕಿಲಾಡಿಗಳು’ ಶೋ ಮೂಲಕ ಗುರುತಿಸಿಕೊಂಡಿದ್ದ ನಟ ಮಡೆನೂರು ಮನು (Madenur Manu) ಅವರು ಇತ್ತೀಚೆಗೆ ಸಾಕಷ್ಟು ವಿವಾದ ಮಾಡಿಕೊಂಡರು. ಅವರ ಮೇಲೆ ಸ್ನೇಹಿತೆಯೇ ಅತ್ಯಾಚಾರ ಆರೋಪ ಹೊರಿಸಿದರು. ಬಳಿಕ ಮನು ಅವರದ್ದು ಎನ್ನಲಾದ ಆಡಿಯೋ ವೈರಲ್ ಆಯಿತು. ಆ ಆಡಿಯೋದಲ್ಲಿ ಶಿವರಾಜ್​ಕುಮಾರ್ (Shivarajkumar), ಧ್ರುವ ಸರ್ಜಾ, ದರ್ಶನ್ ಬಗ್ಗೆ ಕೆಟ್ಟದಾಗಿ ಮಾತನಾಡಲಾಗಿತ್ತು. ಆ ಹಿನ್ನೆಲೆಯಲ್ಲಿ ಮನು ಅವರನ್ನು ಚಿತ್ರರಂಗದಿಂದ ಬ್ಯಾನ್ ಮಾಡಲಾಗಿತ್ತು. ಆದರೆ ಈಗ ಮನುಗೆ ಬಿಗ್ ರಿಲೀಫ್ ಸಿಕ್ಕಿದೆ. ಅವರ ಮೇಲೆ ಹೇರಿದ್ದ ನಿಷೇಧವನ್ನು ತೆರೆವುಗೊಳಿಸಲು ತೀರ್ಮಾನಿಸಲಾಗಿದೆ.

ದರ್ಶನ್, ಶಿವಣ್ಣ, ಧ್ರುವ ಸರ್ಜಾ ಬಗ್ಗೆ ಮಡೆನೂರು ಮನು ಆಕ್ಷೇಪಾರ್ಹ ರೀತಿಯಲ್ಲಿ ಮಾತನಾಡಿದ್ದರು. ಅದರಿಂದಾಗಿ ಅಭಿಮಾನಿಗಳು ಗರಂ ಆಗಿದ್ದರು. ಆಡಿಯೋ ವೈರಲ್ ಆದ ಬೆನ್ನಲೇ 100ಕ್ಕೂ ಅಧಿಕ ಕೇಸ್​ಗಳು ಮನು ಮೇಲೆ ದಾಖಲಿಸಲಾಗಿತ್ತು. ಚಿತ್ರರಂಗದಿಂದ ಮನು ಅವರನ್ನು ಬ್ಯಾನ್ ಮಾಡಬೇಕು ಎಂದು ಶಿವರಾಜ್​ಕುಮಾರ್, ದರ್ಶನ್ ಹಾಗೂ ಧ್ರುವ ಸರ್ಜಾ ಅವರ ಅಭಿಮಾನಿಗಳು ಒತ್ತಾಯಿಸಿದ್ದರು.

ಈ ಮೂವರೂ ಸ್ಟಾರ್ ಕಲಾವಿದರ ಬಳಿ ಕ್ಷಮೆ ಕೇಳಲು ಮಡೆನೂರು ಮನು ಮುಂದಾದರು. ಕ್ಷಮೆ ಕೇಳಲು ಶಿವರಾಜ್​ಕುಮಾರ್ ಮನೆ ಮುಂದೆ ಅವರು ಕಾದಿದ್ದರು. ಆದರೆ ಶಿವಣ್ಣನನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ. ಇದೀಗ ನಿರ್ಮಾಪಕ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಅವರನ್ನು ಮನು ಭೇಟಿ ಆಗಿದ್ದಾರೆ. ಮೂವರೂ ನಟರಿಗೆ ಕ್ಷಮೆ ಕೋರಿ ಮನು ಪತ್ರ ಬರೆದಿದ್ದಾರೆ.

ಇದನ್ನೂ ಓದಿ
ಎರಡು ಬಾರಿ ಪ್ರೆಗ್ನೆಂಟ್ ಆಗಿದ್ದೆ; ‘ಕಾಮಿಡಿ ಕಿಲಾಡಿ’ ಕಲಾವಿದರ ಜಗಳ ಬೀದಿಗೆ
ಕನ್ನಡ ಕಿರುತೆರೆ ನಟಿಯ ಮೇಲೆ ಅತ್ಯಾಚಾರ; ನಟ ಮಡೆನೂರು ಮನು ವಿರುದ್ಧ FIR
ಮೇ 23ಕ್ಕೆ ಕುಲದಲ್ಲಿ ಕೀಳ್ಯಾವುದೋ ರಿಲೀಸ್; ಕಾಮಿಡಿ ಕಿಲಾಡಿ ನಟನ ಹೊಸ ಜರ್ನಿ
‘ಕುಲದಲ್ಲಿ ಕೀಳ್ಯಾವುದೋ’ ಟೈಟಲ್ ಸಿಕ್ಕಿದ್ದು ಅಣ್ಣಾವ್ರ ಆಶೀರ್ವಾದ: ಮಡೆನೂರು

ಮಡೆನೂರು ಮನು ಕ್ಷಮೆ ಕೇಳಿ ಪತ್ರ ಬರೆದಿರುವ ಹಿನ್ನೆಲೆಯಲ್ಲಿ ಅವರಿಗೆ ಒಂದು ಅವಕಾಶ ನೀಡುವುದಾಗಿ ಉಮೇಶ್ ಬಣಕಾರ್ ಹೇಳಿದ್ದಾರೆ. ‘ಮನು ವಿವಾದ ಕೋರ್ಟ್​ ಮೆಟ್ಟಿಲೇರಿತ್ತು. ಪ್ರಾಯಶ್ಚಿತ್ತ, ಪಾಪಪ್ರಜ್ಞೆ ಅವರಿಗೆ ಕಾಡಿದೆ. ಈ ಕ್ಷಮಾಪಣೆಯ ಕಾಗದ ನೀಡಿದ್ದಾರೆ. ಬಹಿರಂಗವಾಗಿ ಅವರು ಕ್ಷಮೆ ಕೇಳಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಅವಕಾಶ ಮಾಡಿಕೊಡಿ ಅಂತ ಅವರು ಮನವಿ ಮಾಡಿದ್ದಾರೆ. ಅದನ್ನು ಪುರಸ್ಕರಿಸುತ್ತೇವೆ’ ಎಂದು ಉಮೇಶ್ ಬಣಕಾರ್ ಹೇಳಿದ್ದಾರೆ.

ಇದನ್ನೂ ಓದಿ: ಕ್ಷಮೆ ಕೇಳಲು ಶಿವರಾಜ್​ಕುಮಾರ್ ಮನೆ ಎದುರು ಕಾಯುತ್ತಿರುವ ಮಡೆನೂರು ಮನು

‘ಮುಂದೆ ಈ ರೀತಿ ವಿವಾದ ಆಗದಂತೆ ನೋಡಿಕೊಳ್ಳಿ. ಹಿರಿಯರು ಚಿತ್ರರಂಗವನ್ನು ಕಟ್ಟಿ ಬೆಳೆಸಲು ಸಾಕಷ್ಟು ಕೊಡುಗೆ ನೀಡಿದ್ದಾರೆ. ನೀವು ಇನ್ನೂ ಉದಯೋನ್ಮುಖರು. ನಿಮಗೆ ಒಂದು ಭವಿಷ್ಯ ಇದೆ. ಮತ್ತೆ ತಪ್ಪು ನಡೆದರೆ ಯಾರೂ ನಿಮ್ಮನ್ನು ಕ್ಷಮಿಸಲ್ಲ’ ಎಂದು ಮಡೆನೂರು ಮನುಗೆ ಉಮೇಶ್ ಬಣಕಾರ್ ಅವರು ಬುದ್ಧಿ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.