ಕಡುಕಷ್ಟ ಕಾಲದಲ್ಲಿ ಹಿರಿಯ ಕಲಾವಿದರ ಕೈ ಹಿಡಿದ ಉಪೇಂದ್ರ; ಮನಸಾರೆ ಹರಸಿದ ಜೀವಗಳು

|

Updated on: May 23, 2021 | 1:45 PM

ಎಲ್ಲೆಡೆ ಲಾಕ್​ಡೌನ್​ ಇರುವುದರಿಂದ ಮನೆಯಿಂದ ಹೊರಬಂದು ಅಗತ್ಯ ವಸ್ತುಗಳನ್ನು ಖರೀದಿಸುವುದು ಹಿರಿಯ ನಾಗರಿಕರಿಗೆ ಕಷ್ಟ ಆಗುತ್ತದೆ. ಈ ಸಂದರ್ಭದಲ್ಲಿ ಉಪೇಂದ್ರ ಸಹಾಯ ಮಾಡುತ್ತಿರುವುದರಿಂದ ಅನೇಕ ಕಲಾವಿದರು ನಿಟ್ಟುಸಿರು ಬಿಡುವಂತಾಗಿದೆ.

ಕಡುಕಷ್ಟ ಕಾಲದಲ್ಲಿ ಹಿರಿಯ ಕಲಾವಿದರ ಕೈ ಹಿಡಿದ ಉಪೇಂದ್ರ; ಮನಸಾರೆ ಹರಸಿದ ಜೀವಗಳು
ಸ್ಯಾಂಡಲ್​ವುಡ್​ನ ಹಿರಿಯ ಕಲಾವಿದರಿಗೆ ನೆರವಾದ ಉಪೇಂದ್ರ
Follow us on

ನಟ, ನಿರ್ದೇಶಕ ಉಪೇಂದ್ರ ಅವರು ಲಾಕ್​ಡೌನ್​ ಸಮಯದಲ್ಲಿ ಸಖತ್​ ಆ್ಯಕ್ಟೀವ್​ ಆಗಿದ್ದಾರೆ. ತಮ್ಮ ತಂಡದವರ ಜೊತೆ ಸೇರಿಕೊಂಡು ಸಾವಿರಾರು ಜನರಿಗೆ ಅವರು ನೆರವು ನೀಡುತ್ತಿದ್ದಾರೆ. ಕೊರೊನಾ ವೈರಸ್​ ನಿಯಂತ್ರಿಸಲು ಸರ್ಕಾರ ಲಾಕ್​ಡೌನ್​ ಜಾರಿ ಮಾಡಿರುವುದರಿಂದ ಅನೇಕರಿಗೆ ಕೆಲಸ ಇಲ್ಲದೆ ಜೀವನ ಸಾಗಿಸುವುದು ಕಷ್ಟ ಆಗಿದೆ. ಪ್ರತಿ ದಿನ ಸಿನಿಮಾ ಚಟುವಟಿಕೆಗಳನ್ನೇ ನಂಬಿಕೊಂಡಿದ್ದ ಬಡ ಕಲಾವಿದರು ಸಂಕಷ್ಟದಲ್ಲಿ ಇದ್ದಾರೆ. ಅದರಲ್ಲೂ ಕೆಲವು ಹಿರಿಯ ಕಲಾವಿದರು ಕಣ್ಣೀರಿನಲ್ಲಿ ದಿನ ದೂಡುತ್ತಿದ್ದಾರೆ. ಅಂಥವರ ನೆರವಿಗೆ ರಿಯಲ್​ ಸ್ಟಾರ್​ ಉಪೇಂದ್ರ ಧಾವಿಸಿದ್ದಾರೆ.

ಹಲವು ವರ್ಷಗಳಿಂದ ಸಿನಿಮಾವನ್ನೇ ಜೀವನಾಧಾರವಾಗಿ ನಂಬಿದ್ದ ಹಿರಿಯ ಕಲಾವಿದರಿಗೆ ಇಂದು ಚಿತ್ರರಂಗದಲ್ಲಿ ಸರಿಯಾಗಿ ಅವಕಾಶಗಳು ಸಿಗುತ್ತಿಲ್ಲ. ಲಾಕ್​ಡೌನ್​ ಸಂದರ್ಭದಲ್ಲಿ ಅಂಥವರ ಕಷ್ಟ ಇನ್ನಷ್ಟು ಹೆಚ್ಚಿದೆ. ಅದನ್ನು ಮನಗಂಡಿರುವ ಉಪೇಂದ್ರ ಅವರು ಸ್ಯಾಂಡಲ್​ವುಡ್​ನ ಅನೇಕ ಹಿರಿಯ ನಟ-ನಟಿಯರಿಗೆ ನೆರವು ನೀಡಿದ್ದಾರೆ. ದಿನಸಿ ಸಾಮಗ್ರಿ ಮತ್ತು ಅಗತ್ಯ ವಸ್ತುಗಳಲ್ಲಿ ಅವರವರ ಮನೆಗಳಿಗೆ ಕಳಿಸಿಕೊಟ್ಟಿದ್ದಾರೆ.

ಸದ್ಯ ಎಲ್ಲೆಲ್ಲೂ ಲಾಕ್​ಡೌನ್​ ಇರುವುದರಿಂದ ಮನೆಯಿಂದ ಹೊರಬಂದು ಅಗತ್ಯ ವಸ್ತುಗಳನ್ನು ಖರೀದಿಸುವುದು ಹಿರಿಯ ನಾಗರಿಕರಿಗೆ ಕಷ್ಟ ಆಗುತ್ತದೆ. ಈ ಸಂದರ್ಭದಲ್ಲಿ ಉಪೇಂದ್ರ ಸಹಾಯ ಮಾಡುತ್ತಿರುವುದರಿಂದ ಅನೇಕ ಕಲಾವಿದರು ನಿಟ್ಟುಸಿರು ಬಿಡುವಂತಾಗಿದೆ. ಅವರು ಮಾಡುತ್ತಿರುವ ಕೆಲಸಕ್ಕೆ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಉಪೇಂದ್ರ ಅವರ ಮುಂದಾಳತ್ವಕ್ಕೆ ಸಾಥ್​ ನೀಡಿರುವ ಹಲವಾರು ಜನರು ದೇಣಿಗೆ ನೀಡಿದ್ದಾರೆ. ಆ ಹಣದಿಂದ ಉಪೇಂದ್ರ ಸಾವಿರಾರು ಜನರಿಗೆ ಪ್ರತಿ ದಿನ ಸಹಾಯ ಮಾಡುತ್ತಿದ್ದಾರೆ.

ಮೋಹನ್​​​ ಜುನೇಜಾ, ಶ್ರೀಲಲಿತಾ, ಕಾಮಿನಿಧರನ್​, ಬೆಂಗಳೂರು ನಾಗೇಶ್​, ಎಟಿ ರಘು, ಉಮೇಶ್​ ಮುಂತಾದವರ ಮನೆಗೆ ಉಪೇಂದ್ರ ಅವರು ದಿನಸಿ ಕಿಟ್​ಗಳನ್ನು ಕಳಿಸಿದ್ದಾರೆ. ಅದನ್ನು ಸ್ವೀಕರಿಸಿರುವ ಈ ಹಿರಿಯ ಜೀವಗಳು ಉಪೇಂದ್ರ ಅವರಿಗೆ ಮನಸಾರೆ ಆಶೀರ್ವಾದ ಮಾಡಿವೆ. ‘ಇಷ್ಟು ದಿನ ನಿಮ್ಮ ಕಾರ್ಯವನ್ನು ಟಿವಿಯಲ್ಲಿ ನೋಡುತ್ತಿದ್ದೆವು. ಇಂದು ನಾನು ಪ್ರತ್ಯಕ್ಷವಾಗಿ ನೋಡಿದೆ. ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಧನ್ಯವಾದ ಅರ್ಪಿಸುತ್ತೇನೆ. ನಿಮಗೆ ಒಳ್ಳೆಯದಾಗಲಿ’ ಎಂದು ಹಿರಿಯ ನಟ ಉಮೇಶ್​ ಹೇಳಿದ್ದಾರೆ.

ಲಾಕ್​ಡೌನ್​ ಸಂದರ್ಭದಲ್ಲಿ ರೈತರು ಕೂಡ ಕಷ್ಟದಲ್ಲಿದ್ದಾರೆ. ಹಗಲಿರುಳು ಕಷ್ಟಪಟ್ಟು ಬೆಳೆದ ಬೆಳೆ ಮಾರಾಟ ಆಗದಿದ್ದರೆ ರೈತರ ಶ್ರಮ ವ್ಯರ್ಥವಾಗುತ್ತದೆ. ಹಾಗಾಗಿ ರೈತರಿಂದ ನೇರವಾಗಿ ತರಕಾರಿಗಳನ್ನು ಖರೀದಿಸಿ, ಅದನ್ನು ಅಗತ್ಯ ಇರುವವರಿಗೆ ವಿತರಿಸುವ ಕಾಯಕವನ್ನು ಕೂಡ ಉಪೇಂದ್ರ ಮಾಡುತ್ತಿದ್ದಾರೆ.

ಇದನ್ನೂ ಓದಿ:

‘ನಾನು ಮುಖ್ಯಮಂತ್ರಿ ಆಗ್ಬೇಕು; ನೀವು ನನ್ನ ಗೆಲ್ಲಿಸ್ತೀರಾ?’; ಉಪೇಂದ್ರ ಕೇಳಿದ ಪ್ರಶ್ನೆಗೆ ಜನ ಕೊಟ್ಟ ಉತ್ತರ ಏನು?

ಉಪೇಂದ್ರ ಮಾಡುತ್ತಿರುವ ಪುಣ್ಯದ ಕೆಲಸಕ್ಕೆ ಕೈ ಜೋಡಿಸಿದ ಸಾಧುಕೋಕಿಲ, ಸರೋಜಾದೇವಿ ಮುಂತಾದ ಸೆಲೆಬ್ರಿಟಿಗಳು