‘ರಿಯಲ್ ಸ್ಟಾರ್’ ಉಪೇಂದ್ರ (Upendra) ಅವರನ್ನು ನಟನಾಗಿ ಇಷ್ಟಪಟ್ಟವರಿಗಿಂತಲೂ ನಿರ್ದೇಶಕನಾಗಿ ಇಷ್ಟಪಟ್ಟವರೇ ಹೆಚ್ಚು ಎಂದರೆ ತಪ್ಪಿಲ್ಲ. ಭಾರತೀಯ ಚಿತ್ರರಂಗದ ಪ್ರತಿಭಾವಂತ ಡೈರೆಕ್ಟರ್ಗಳಲ್ಲಿ ಉಪೇಂದ್ರ ಕೂಡ ಗುರುತಿಸಿಕೊಂಡಿದ್ದಾರೆ. ‘ಓಂ’, ‘ಶ್’, ‘ಎ’, ‘ಸೂಪರ್’ ಮುಂತಾದ ಸಿನಿಮಾಗಳನ್ನು (Upendra Direction Movies) ನೀಡುವ ಮೂಲಕ ಅವರು ಜನಮನ ಗೆದ್ದಿದ್ದಾರೆ. ಆದರೆ ‘ಎ’ ಸಿನಿಮಾದಿಂದ ಉಪೇಂದ್ರ ಹೀರೋ ಆದ ಬಳಿಕ ಅವರು ನಿರ್ದೇಶನ ಮಾಡುವುದು ಕಡಿಮೆ ಆಯಿತು. ಆ ವಿಚಾರದಲ್ಲಿ ಅಭಿಮಾನಿಗಳಿಗೆ ಬೇಸರ ಇದೆ. ಪ್ರಜಾಕೀಯದ ಕಡೆಗೂ ಅವರು ಗಮನ ಹರಿಸಿರುವುದರಿಂದ ಡೈರೆಕ್ಷನ್ (Upendra Direction) ಕಡೆಗೆ ಸಮಯ ನೀಡಲು ಅವರಿಗೆ ಸಾಧ್ಯ ಆಗಿರಲಿಲ್ಲ. ಆದರೆ ತಯಾರಿಯಂತೂ ನಡೆದೇ ಇದೆ. ಈಗ ಉಪೇಂದ್ರ ಅವರು ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಲು ಕಾದಿದ್ದಾರೆ. ಆದರೆ ಒಂದಷ್ಟು ಸಸ್ಪೆನ್ಸ್ ಕಾಯ್ದುಕೊಂಡಿದ್ದಾರೆ. ಹೊಸದೊಂದು ಡೇಟ್ ಅನೌನ್ಸ್ ಮಾಡಿ, ಆ ದಿನಾಂಕಕ್ಕಾಗಿ ಎಲ್ಲರೂ ಕಾಯುವಂತೆ ಮಾಡಿದ್ದಾರೆ ‘ರಿಯಲ್ ಸ್ಟಾರ್’ ಉಪ್ಪಿ.
ಮಾರ್ಚ್ 11ರ ದಿನಾಂಕವನ್ನು ಸೇವ್ ಮಾಡಿಕೊಳ್ಳಿ ಎಂದು ಉಪೇಂದ್ರ ಅವರು ಅಭಿಮಾನಿಗಳಿಗೆ ತಿಳಿಸಿದ್ದಾರೆ. ಈ ಬಗ್ಗೆ ಅವರು ಸೋಶಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಅಂದು ಮಧ್ಯಾಹ್ನ 12.46ಕ್ಕೆ ಅವರಿಂದ ವಿಶೇಷ ಅಪ್ಡೇಟ್ ಸಿಗಲಿದೆ. ಅದು ಅವರ ಡೈರೆಕ್ಷನ್ ಸಿನಿಮಾದ ಬಗ್ಗೆ ಎಂಬುದು ಎಲ್ಲರ ನಿರೀಕ್ಷೆ ಆಗಿದೆ. ಸದ್ಯಕ್ಕಂತೂ ಉಪೇಂದ್ರ ಅವರು ಆ ಬಗ್ಗೆ ಹೆಚ್ಚಿನ ಮಾಹಿತಿ ಬಿಟ್ಟುಕೊಟ್ಟಿಲ್ಲ.
ಇನ್ನು, ಉಪೇಂದ್ರ ನಿರ್ದೇಶನ ಮಾಡಲಿರುವ ಮುಂದಿನ ಸಿನಿಮಾ ಬಗ್ಗೆ ಈಗಾಗಲೇ ಗಾಂಧಿನಗರದಲ್ಲಿ ಗುಸಗುಸು ಕೇಳಿಬರುತ್ತಿದೆ. ಕನ್ನಡ ಚಿತ್ರರಂಗದ ಎರಡು ಖ್ಯಾತ ನಿರ್ಮಾಣ ಸಂಸ್ಥೆಗಳು ಜೊತೆಯಾಗಿ ಈ ಸಿನಿಮಾಗೆ ಬಂಡವಾಳ ಹೂಡಲಿವೆ ಎಂಬ ಮಾಹಿತಿ ಸಿಕ್ಕಿದೆ. ಆದರೆ ಈ ಬಗ್ಗೆ ಇನ್ನಷ್ಟೇ ಅಧಿಕೃತ ಘೋಷಣೆ ಆಗಬೇಕಿದೆ. ಯುವ ಸಂಗೀತ ನಿರ್ದೇಶಕರೊಬ್ಬರು ಸಂಗೀತ ಸಂಯೋಜನೆ ಮಾಡಲಿದ್ದು, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಚಿತ್ರ ಸಿದ್ಧವಾಗಲಿದೆ ಎಂಬ ಗುಸುಗುಸು ಕೂಡ ಕೇಳಿಬಂದಿದೆ. ಆ ಎಲ್ಲ ವಿಚಾರಗಳ ಬಗ್ಗೆ ಉಪೇಂದ್ರ ಅವರು ಮಾ.11ರಂದು ಮಧ್ಯಾಹ್ನ 12.46ಕ್ಕೆ ಮಾಹಿತಿ ಹಂಚಿಕೊಳ್ಳುವ ಸಾಧ್ಯತೆ ಇದೆ. ಆದರೆ ಯಾವುದಕ್ಕೂ ಅಭಿಮಾನಿಗಳು ಕಾದು ನೋಡಬೇಕು. ಸಿನಿಮಾ ಸುದ್ದಿಯನ್ನು ಬದಿಗಿಟ್ಟು ಪ್ರಜಾಕೀಯದ ಬಗ್ಗೆ ಏನಾದರೂ ಹೊಸ ಅಪ್ಡೇಟ್ ನೀಡಬಹುದಾ ಎಂಬ ಅನುಮಾನ ಕೂಡ ಒಂದು ಕಡೆ ಇದೆ.
ಮಾ.11ರಂದು ಡೈರೆಕ್ಷನ್ ಸಿನಿಮಾದ ಬಗ್ಗೆಯೇ ಉಪೇಂದ್ರ ಅವರು ಅನೌನ್ಸ್ ಮಾಡಲಿದ್ದಾರೆ ಎಂದು ಅಭಿಮಾನಿಗಳು ಈಗಾಗಲೇ ಊಹಿಸುತ್ತಿದ್ದಾರೆ. ಆ ಬಗ್ಗೆ ಜನರು ಈಗಾಗಲೇ ಕಮೆಂಟ್ ಮೂಲಕ ತಮ್ಮ ನಿರೀಕ್ಷೆ ಎಷ್ಟಿದೆ ಎಂಬುದನ್ನು ತಿಳಿಸುತ್ತಿದ್ದಾರೆ. ‘ಬಾಸ್ ಈಸ್ ಬ್ಯಾಕ್’ ಎಂದು ಉಪ್ಪಿ ಫ್ಯಾನ್ಸ್ ಸಂಭ್ರಮಿಸುತ್ತಿದ್ದಾರೆ.
ಉಪೇಂದ್ರ ನಿರ್ದೇಶನ ಮಾಡಲಿರುವ ಸಿನಿಮಾದಲ್ಲಿ ಹೊಸ ಕಲಾವಿದರಿಗೂ ಅವಕಾಶ ಸಿಗಲಿದೆ. ಅದಕ್ಕಾಗಿ ಉಪೇಂದ್ರ ಆಡಿಷನ್ ನಡೆಸುತ್ತಿದ್ದು ಆ ಬಗ್ಗೆ ಕೆಲವೇ ದಿನಗಳ ಹಿಂದೆ ಅವರು ಮಾಹಿತಿ ಹಂಚಿಕೊಂಡಿದ್ದರು. ‘ಉಪೇಂದ್ರ ನಿರ್ದೇಶನದ ಚಿತ್ರದಲ್ಲಿ ಅಭಿನಯಿಸಲು ನಟ-ನಟಿಯರು ಬೇಕಾಗಿದ್ದಾರೆ. 14ರಿಂದ 60 ವರ್ಷ ವಯಸ್ಸಿನವರು ಕಲಾವಿದರು ತಾವು ನಟಿಸಿರುವ 2 ನಿಮಿಷದೊಳಗಿನ ವಿಡಿಯೋ ತುಣುಕನ್ನು upendraproductions@gmail.com ಮೇಲ್ ಐಡಿಗೆ ಕಳಿಸಿಕೊಡಿ. ಕೊನೆಯ ದಿನಾಂಕ 10 ಮಾರ್ಚ್ 2022’ ಎಂದು ಉಪೇಂದ್ರ ಪೋಸ್ಟ್ ಮಾಡಿದ್ದರು.
ಇದನ್ನೂ ಓದಿ:
‘ಅಲ್ಲಿ ಬೇರೆಯದೇ ಹೋಮ್ ಮಿನಿಸ್ಟರ್ ಇರ್ತಾರೆ, ಅದೇ ಇದರ ಸಸ್ಪೆನ್ಸ್’: ನಟ ಉಪೇಂದ್ರ
ಏಪ್ರಿಲ್ನಲ್ಲಿ ರಿಲೀಸ್ ಆಗುತ್ತಿದೆ ಉಪೇಂದ್ರ ನಟನೆಯ ‘ಹೋಮ್ ಮಿನಿಸ್ಟರ್’ ಸಿನಿಮಾ
Published On - 9:46 am, Wed, 9 March 22