ಬೆಂಗಳೂರಿನ ದುಬಾರಿ ಏರಿಯಾದಲ್ಲಿ ಹೊಸ ಮನೆ ಖರೀದಿಸಿದ ಉಪೇಂದ್ರ

|

Updated on: Apr 19, 2023 | 6:23 PM

Upendra New House: ನಟ ಉಪೇಂದ್ರ ಬೆಂಗಳೂರಿನ ದುಬಾರಿ ಏರಿಯಾದಲ್ಲಿ ಹೊಸದೊಂದು ಮನೆ ಖರೀದಿಸಿದ್ದಾರೆ. ಇತ್ತೀಚೆಗೆ ಸರಳವಾಗಿ ಗೃಹ ಪ್ರವೇಶವನ್ನೂ ಮಾಡಿ ಮುಗಿಸಿದ್ದಾರೆ.

ಬೆಂಗಳೂರಿನ ದುಬಾರಿ ಏರಿಯಾದಲ್ಲಿ ಹೊಸ ಮನೆ ಖರೀದಿಸಿದ ಉಪೇಂದ್ರ
ಉಪೇಂದ್ರ ಹೊಸ ಮನೆ
Follow us on

ಕಬ್ಜ (Kabzaa) ಸಿನಿಮಾದ ಗೆಲುವಿನ ಖುಷಿಯಲ್ಲಿರುವ ನಟ ಉಪೇಂದ್ರ (Upendra) ಇತ್ತೀಚೆಗೆ ಹೊಸ ಮನೆಯೊಂದನ್ನು ಖರೀದಿಸಿದ್ದಾರೆ. ಅದೂ ಬೆಂಗಳೂರಿನ ದುಬಾರಿ ಏರಿಯಾನಲ್ಲಿ. ಉಪೇಂದ್ರ ಹಲವು ವರ್ಷಗಳಿಂದ ಕತ್ತರಗುಪ್ಪೆಯ ಮನೆಯಲ್ಲಿ ವಾಸವಿದ್ದಾರೆ. ಚಿತ್ರರಂಗದಲ್ಲಿ ನಟನಾಗಿ ಬೆಳೆಯುತ್ತಿರುವ ಹೊತ್ತಿನಲ್ಲಿ ಇಷ್ಟಪಟ್ಟು ಕತ್ರಗುಪ್ಪೆಯಲ್ಲಿ ಮನೆ ಕಟ್ಟಿಸಿದ್ದರು ಉಪೇಂದ್ರ. ಈಗ ಬೆಂಗಳೂರಿನಲ್ಲಿಯೇ ಇನ್ನೊಂದು ಐಶಾರಾಮಿ ಮನೆ ಖರೀದಿ ಮಾಡಿದ್ದಾರೆ.

ಹಲವು ಸಿನಿಮಾ ತಾರೆಯರು, ರಾಜಕಾರಣಿಗಳು, ಉದ್ಯಮಿಗಳು ವಾಸವಿರುವ ಬೆಂಗಳೂರಿನ ರಿಚ್ ಪೀಪಲ್ ಏರಿಯಾ ಎಂದೇ ಹೆಸರಾಗಿರುವ ಸದಾಶಿವ ನಗರದಲ್ಲಿ ಉಪೇಂದ್ರ ಹೊಸ ಮನೆಯೊಂದನ್ನು ಖರೀದಿ ಮಾಡಿದ್ದು ಇತ್ತೀಚೆಗಷ್ಟೆ ಸರಳವಾಗಿ ಪೂಜಾ ಮಾಡಿ ಗೃಹ ಪ್ರವೇಶವನ್ನೂ ನೆರವೇರಿಸಿದ್ದಾರೆ.

ಹಲವು ದಿನಗಳಿಂದಲೂ ಹೊಸ ಮನೆ ಖರೀದಿ ಮಾಡಬೇಕೆಂಬ ಯೋಚನೆಯಲ್ಲಿದ್ದ ಉಪೇಂದ್ರ ಅವರಿಗೆ ಸದಾಶಿವ ನಗರದಲ್ಲಿ ಮನೆಯೊಂದು ಮಾರಾಟಕ್ಕಿರುವ ವಿಷಯ ತಿಳಿಯುತ್ತಿದ್ದಂತೆ ಪತ್ನಿ ಪ್ರಿಯಾಂಕಾ ಉಪೇಂದ್ರ ಅವರೊಟ್ಟಿಗೆ ತೆರಳಿ ಮನೆ ನೋಡಿ ಮೆಚ್ಚಿ ಕಾಮನ್ ಗೆಳೆಯನೊಬ್ಬನ ಸಹಾಯದೊಟ್ಟಿಗೆ ವ್ಯವಹಾರ ಮುಗಿಸಿ ಮನೆ ಖರೀದಿಸಿದ್ದಾರೆ ನಟ ಉಪೇಂದ್ರ.

ಕಳೆದ ಶನಿವಾರ ಒಳ್ಳೆಯ ದಿನವಾಗಿದ್ದ ಕಾರಣ ಸರಳವಾಗಿ ಪೂಜಾ ಮಾಡಿ ಹೊಸ ಮನೆಯ ಗೃಹಪ್ರವೇಶವನ್ನೂ ಮಾಡಿದ್ದಾರೆ. ಗೃಹ ಪ್ರವೇಶಕ್ಕೆ ಉಪೇಂದ್ರ ಅವರ ಕುಟುಂಬ ಸದಸ್ಯರು ಗುರುಕಿರಣ್, ಮುರಳಿ ಹಾಗೂ ಇನ್ನಿತರೆ ಅತ್ಯಾಪ್ತ ಗೆಳೆಯರು ಮಾತ್ರವೇ ಹಾಜರಿದ್ದರು. ಉಪೇಂದ್ರ ಹಾಗೂ ಪ್ರಿಯಾಂಕಾ ಒಟ್ಟಿಗೆ ಪೂಜಾ ಮಾಡಿ ಹೊಸ ಮನೆಗೆ ಪ್ರವೇಶಿಸಿದ್ದಾರೆ.

ಗೃಹ ಪ್ರವೇಶ ಆಗಿದೆಯಾದರೂ ಮನೆ ಇನ್ನೂ ಪೂರ್ಣವಾಗಿಲ್ಲ. ಮನೆಯನ್ನು ತಮ್ಮ ಅಗತ್ಯಕ್ಕೆ ತಕ್ಕಂತೆ ತುಸು ಬದಲಾವಣೆಗಳನ್ನು ಉಪೇಂದ್ರ ದಂಪತಿ ಮಾಡಿಸುತ್ತಿದ್ದು, ಹೊಸದಾಗಿ ಬಣ್ಣ ಮಾಡಿಸುತ್ತಿದ್ದಾರೆ. ಆ ಕೆಲಸಗಳು ಇನ್ನೂ ಬಾಕಿ ಇವೆ. ಹಾಗಿದ್ದರೂ ದಿನ ಒಳ್ಳೆಯದಿತ್ತೆಂಬ ಕಾರಣಕ್ಕೆ ಗೃಹ ಪ್ರವೇಶವನ್ನು ಸರಳವಾಗಿ ಮಾಡಿ ಮುಗಿಸಿದ್ದಾರೆ ಉಪೇಂದ್ರ. ಆದರೆ ಕುಟುಂಬವು ಈ ಮನೆಗೆ ಶಿಫ್ಟ್ ಆಗಲು ಇನ್ನಷ್ಟು ಸಮಯ ಹಿಡಿಯಲಿದೆ.

ಇನ್ನು ಉಪೇಂದ್ರ ಅವರ ಕತ್ರಗುಪ್ಪೆ ಮನೆ ಏನಾಗಲಿದೆ ಎಂಬ ಕುತೂಹಲ ಹಲವರಲ್ಲಿದೆ. ಕೆಲವರ ಪ್ರಕಾರ ಅದನ್ನು ಪ್ರಜಾಕೀಯ ಕಚೇರಿ ಮಾಡುತ್ತಾರೆ ಎನ್ನಲಾಗುತ್ತಿದೆ. ಆದರೆ ಉಪೇಂದ್ರರ ಆಪ್ತ ಗೆಳೆಯ ಮುರಳಿ ಮೋಹನ್, ಮಾಧ್ಯಮಗಳಿಗೆ ನೀಡಿರುವ ಮಾಹಿತಿಯಂತೆ ಆ ಮನೆಯನ್ನು ಕಚೇರಿಯನ್ನಾಗಿ ಬದಲಾಯಿಸುವುದಿಲ್ಲ ಅದನ್ನು ಹಾಗೆಯೇ ಉಳಿಸಿಕೊಳ್ಳುತ್ತಾರಂತೆ ಉಪೇಂದ್ರ.

ಉಪೇಂದ್ರ ಪ್ರಸ್ತುತ ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ರಾಜಕೀಯದಲ್ಲಿಯೂ ಸಖತ್ ಬ್ಯುಸಿಯಾಗಿದ್ದಾರೆ. ಉಪೇಂದ್ರ ನಟಿಸಿದ್ದ ಕಬ್ಜ ಸಿನಿಮಾ ಇತ್ತೀಚೆಗಷ್ಟೆ ಸೂಪರ್ ಹಿಟ್ ಆಗಿದೆ. ಕಬ್ಜ 2 ಸಿನಿಮಾದಲ್ಲಿಯೂ ಉಪೇಂದ್ರ ಇರಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ