
ನಟಿ ರಚಿತಾ ರಾಮ್ (Rachita Ram) ಅವರ ವಿರುದ್ಧ ಚಿತ್ರತಂಡಗಳು ತಿರುಗಿ ಬಿದ್ದಿವೆ. ಇತ್ತೀಚೆಗೆ ‘ಸಂಜು ವೆಡ್ಸ್ ಗೀತಾ 2’ (Sanju Weds Geetha 2) ಸಿನಿಮಾ ತಂಡದವರು ನಟಿಯ ವಿರುದ್ಧ ಆರೋಪ ಮಾಡಿದ್ದರು. ರಚಿತಾ ರಾಮ್ ಅವರು ಸಿನಿಮಾದ ಪ್ರಚಾರಕ್ಕೆ ಬಾರದೇ ಅಸಹಕಾರ ತೋರುತ್ತಿದ್ದಾರೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಲಾಗಿತ್ತು. ಅಲ್ಲದೇ, ಅವರ ವಿರುದ್ಧ ಇನ್ನೊಂದು ದೂರು ಬಂದಿರುವ ಬಗ್ಗೆ ಈಗ ಮಾಹಿತಿ ಸಿಕ್ಕಿದೆ. ‘ಉಪ್ಪಿ ರುಪ್ಪಿ’ (Uppi Ruppi) ಸಿನಿಮಾದ ನಿರ್ಮಾಪಕರು ಕೂಡ ರಚಿತಾ ರಾಮ್ ವಿರುದ್ಧ ದೂರು ನೀಡಿದ್ದಾರೆ. ಚಿತ್ರೀಕರಣಕ್ಕೆ ಬಾರದೇ, ಅಡ್ವಾನ್ಸ್ ಹಣವನ್ನೂ ವಾಪಸ್ ನೀಡದೇ ಸತಾಯಿಸಿದ ಆರೋಪ ರಚಿತಾ ರಾಮ್ ಮೇಲಿದೆ.
8 ವರ್ಷಗಳ ಹಿಂದೆ ಉಪೇಂದ್ರ ಮತ್ತು ರಚಿತಾ ರಾಮ್ ಅಭಿನಯದಲ್ಲಿ ‘ಉಪ್ಪಿ ರುಪ್ಪಿ’ ಸಿನಿಮಾ ಸಿದ್ಧವಾಗಬೇಕಿತ್ತು. ವಿಜಯಲಕ್ಷ್ಮಿ ಅರಸ್ ನಿರ್ಮಾಣದ ಆ ಸಿನಿಮಾಗೆ ಕೆ. ಮಾದೇಶ್ ನಿರ್ದೇಶನ ಮಾಡುತ್ತಿದ್ದರು. ಆ ಚಿತ್ರದಲ್ಲಿ ನಟಿಸಲು ರಚಿತಾ ರಾಮ್ ಒಪ್ಪಿಕೊಂಡಿದ್ದರು. 23 ಲಕ್ಷ ರೂಪಾಯಿ ಸಂಭಾವನೆಗೆ ಕಮಿಟ್ ಆಗಿದ್ದ ರಚಿತಾ ಅವರು ಮುಂಗಡವಾಗಿ 13 ಲಕ್ಷ ರೂಪಾಯಿ ಪಡೆದುಕೊಂಡಿದ್ದರು.
2017ರಲ್ಲಿ ಬ್ಯಾಂಕಾಕ್ನಲ್ಲಿ ಶೂಟಿಂಗ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿತ್ತು. ಅಲ್ಲಿಗೆ ಬರುವುದಾಗಿ ರಚಿತಾ ರಾಮ್ ಒಪ್ಪಿಕೊಂಡಿದ್ದರು. ನಟಿಗಾಗಿ ವಿಮಾನದ ಟಿಕೆಟ್ ಬುಕ್ ಮಾಡಲಾಗಿತ್ತು. ಆದರೆ ಈಗ ಬರ್ತೀನಿ ಆಗ ಬರ್ತೀನಿ ಅಂತ 15 ದಿನಗಳ ಕಾಲ ರಚಿತಾ ರಾಮ್ ಆಟ ಆಡಿಸಿದರು. ನಿರ್ಮಾಪಕಿ ವಿಜಯಲಕ್ಷ್ಮಿ ಅರಸ್ ಅವರು ರಚಿತಾಗಾಗಿ ಎರಡು ವಾರಗಳ ಕಾಲ ಪ್ರತಿ ದಿನ ಟಿಕೆಟ್ ಬುಕ್ ಮಾಡಿ ಕಾದಿದ್ದರು.
ಕಡೆಗೂ ರಚಿತಾ ರಾಮ್ ಬರಲೇ ಇಲ್ಲ. ಬೇರೆ ಆಯ್ಕೆ ಇಲ್ಲದೇ, ಕೇವಲ ಹೀರೋ ದೃಶ್ಯಗಳ ಚಿತ್ರೀಕರಣವನ್ನು ಮಾಡಿಕೊಂಡು ಚಿತ್ರತಂಡ ವಾಪಸ್ ಆಗಿತ್ತು. ರಚಿತಾ ಕಾರಣದಿಂದ ನಿರ್ಮಾಪಕಿ ವಿಜಯಲಕ್ಷ್ಮಿ ಅರಸ್ ಅವರು ಒಂದೂವರೆ ಕೋಟಿ ರೂಪಾಯಿ ಕಳೆದುಕೊಂಡರು. ಮೈಸೂರಿನಲ್ಲಿ ನಡೆದ ಚಿತ್ರೀಕರಣಕ್ಕೆ ರಚಿತಾ ರಾಮ್ ಒಂದು ದಿನ ಮಾತ್ರ ಬಂದಿದ್ದರು.
ಇದನ್ನೂ ಓದಿ: ನಟಿ ರಚಿತಾ ರಾಮ್ ವಿರುದ್ಧ ಕ್ರಮ ಕೈಗೊಳ್ಳುತ್ತಾ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ?
ರಚಿತಾ ಕಾರಣದಿಂದ ‘ಉಪ್ಪಿ ರುಪ್ಪಿ’ ಅರ್ಧಕ್ಕೆ ನಿಂತು ಹೋಯಿತು. ಶೇ.35ರಷ್ಟು ಸಿನಿಮಾ ಮಾತ್ರ ಸಿದ್ಧವಾಯಿತು. ಉಳಿದ ಕೆಲಸವೂ ಆಗಲಿಲ್ಲ, ನಿರ್ಮಾಪಕರಿಗೆ ಹಣವೂ ಸಿಗಲಿಲ್ಲ. ಅಂದಿನಿಂದ ನಿರ್ಮಾಪಕರ ಸಂಪರ್ಕಕ್ಕೆ ಸಿಗದೇ ರಚಿತಾ ರಾಮ್ ಸತಾಯಿಸುತ್ತಿದ್ದಾರೆ. ಕೊನೆಯದಾಗಿ ಫಿಲ್ಮ್ ಚೇಂಬರ್ಗೆ ನಿರ್ಮಾಪಕಿ ದೂರು ನೀಡಿದ್ದಾರೆ. 2 ತಿಂಗಳ ಹಿಂದೆಯೇ ದೂರು ದಾಖಲಾಗಿದೆ. ಈಗಲಾದರೂ ರಚಿತಾ ಹಣ ವಾಪಸ್ ನೀಡುತ್ತಾರಾ ಎಂಬುದನ್ನು ಕಾದು ನೋಡಬೇಕು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.