ನನ್ನ ಜೀವನದ ಸತ್ಯ ಗೊತ್ತಿಲ್ಲದೆ ದೂಷಿಸಿದರು: ಪವಿತ್ರಾ ಗೌಡ ಭಾವುಕ
Pavithra Gowda: ಖ್ಯಾತ ವಿಮರ್ಶಕಿ, ಲೇಖಕಿ ಎಂಎಸ್ ಆಶಾದೇವಿ ಅವರು ಅಖಿಲ ಕರ್ನಾಟಕ ಲೇಖಕಿಯರ ಸಮ್ಮೇಳನದಲ್ಲಿ ಪವಿತ್ರಾ ಗೌಡ ಬಗ್ಗೆ ಆಡಿರುವ ಮಾತುಗಳ ವಿಡಿಯೋವನ್ನು ಪವಿತ್ರಾ ಗೌಡ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಆಶಾದೇವಿ ಅವರಿಗೆ ಧನ್ಯವಾದ ಹೇಳಿದ್ದಾರೆ. ಜೊತೆಗೆ ನನ್ನ ಜೀವನದ ಕಹಿ ಸತ್ಯ ನನಗೆ ಬಿಟ್ಟು ಯಾರಿಗೂ ಗೊತ್ತಿಲ್ಲ ಎಂದಿದ್ದಾರೆ.

ರೇಣುಕಾ ಸ್ವಾಮಿ (Renuka Swamy) ಪ್ರಕರಣದ ಬಳಿಕ ಪವಿತ್ರಾ ಗೌಡ ಜೀವನ ಬುಡಮೇಲಾಗಿದೆ. ಕೊಲೆ ಪ್ರಕರಣಕ್ಕೆ ಮುಂಚೆ ರಾಣಿಯಂತೆ ಮೆರೆದಿದ್ದ ಪವಿತ್ರಾ ಗೌಡ, ಈಗ ಎಲ್ಲರ ಪಾಲಿಗೆ ವಿಲನ್ ಆಗಿಬಿಟ್ಟಿದ್ದಾರೆ. ಮನೆ ಒಡಕಿ ಪಟ್ಟ ಕೊಟ್ಟವರೆಷ್ಟೊ? ಕೆಲ ಮಾಧ್ಯಮಗಳಂತೂ ಪವಿತ್ರಾ ಅವರನ್ನು ‘ಅಪವಿತ್ರ’ ಎಂದು ಕರೆದು ತನ್ನ ಅಸೂಕ್ಷ್ಮತೆಯನ್ನು ಸಾರಿತ್ತು. ಕೆಲ ಪುರುಷರು ತಮ್ಮ ‘ಗಂಡಸ್ತನ’ ಪ್ರದರ್ಶಿಸಲು ಹೋಗಿ, ಅಪರಾಧ ಎಸಗಿ, ಅದರ ಹೊಣೆಯನ್ನು ಪವಿತ್ರಾ ಹೆಗಲಿಗೆ ವರ್ಗಾಯಿಸಲಾಗಿತ್ತು. ಘಟನೆ ಆದಾಗಿನಿಂದಲೂ ಬಹುತೇಕ ಈಗಿನ ವರೆಗೂ ಪವಿತ್ರಾ ಮೌನವಾಗಿಯೇ ಇದ್ದಾರೆ. ಆದರೆ ಇದೀಗ ಪವಿತ್ರಾ, ಇನ್ಸ್ಟಾಗ್ರಾಂ ಸ್ಟೋರಿಯೊಂದನ್ನು ಹಂಚಿಕೊಂಡಿದ್ದು ಸಣ್ಣ ಭರವಸೆ ದೊರೆತಿದೆ ಎಂದಿದ್ದಾರೆ. ಅದಕ್ಕೆ ಕಾರಣ ಖ್ಯಾತ ವಿಮರ್ಶಕಿ ಎಂಎಸ್ ಆಶಾದೇವಿ.
ಅಖಿಲ ಕರ್ನಾಟಕ ಲೇಖಕಿಯರ ಸಮ್ಮೇಳನದಲ್ಲಿ ಖ್ಯಾತ ವಿಮರ್ಶಕರಿ ಎಂಎಸ್ ಆಶಾದೇವಿ ಅವರು ಮಾಡಿರುವ ಭಾಷಣದ ತುಣುಕೊಂದನ್ನು ಇನ್ಸ್ಟಾಗ್ರಾಂನಲ್ಲಿ ಪವಿತ್ರಾ ಗೌಡ ಹಂಚಿಕೊಂಡಿದ್ದಾರೆ. 8ನೇ ಅಖಿಲ ಕರ್ನಾಟಕ ಲೇಖಕಿಯರ ಸಮ್ಮೇಳನದಲ್ಲಿ ಮಾತನಾಡಿದ್ದ ಆಶಾದೇವಿ ಅವರು, ಮಹಿಳೆಯರನ್ನು ಸಮಾಜ ಎಷ್ಟು ಲಘುವಾಗಿ ಪರಿಗಣಿಸಿದೆ, ಮಹಿಳೆಯರನ್ನು ಅದೆಷ್ಟು ಸುಲಭವಾಗಿ ನಿಂದಿಸಲಾಗುತ್ತದೆ ಎಂದು ಹೇಳುತ್ತಾ, ಪವಿತ್ರಾ ಗೌಡ ಅವರ ಪ್ರಕರಣವನ್ನು ಉದಾಹರಣೆಯಾಗಿ ಬಳಸಿ, ‘ಯಾರದ್ದೇ ಖಾಸಗಿ ವಿಷಯ ಆಗಿರಲಿ, ನಟಿಯಾಗಿರಲಿ ಆಕೆ ಯಾರನ್ನೋ ಮದುವೆ ಮಾಡಿಕೊಳ್ಳುತ್ತಾನೆ, ಅದು ನಮಗೆ ಸಂಬಂಧಿಸಿದ ವಿಷಯ ಅಲ್ಲ. ನಾವು ಮೂಗು ತೂರಿಸಬೇಕಾದ ವಿಷಯ ಅಲ್ಲ. ಒಬ್ಬ ಪವಿತ್ರಾ ಅನ್ನುವ ಹೆಣ್ಣು ಮಗಳ ವಿಷಯದಲ್ಲಿ ‘ಅಪವಿತ್ರ’, ‘ಅಪವಿತ್ರ’ ಎಂದು ಬಳಸುವುದಿದೆಯಲ್ಲ, ಇದು ಒಬ್ಬ ಮಹಿಳೆಯ ಬಗ್ಗೆ ಬಳಸುವ ಪದವಾ? ಆಕೆ ಅಪವಿತ್ರಾ ಎನ್ನಲು ಮಾಧ್ಯಮಕ್ಕೆ ಯಾವ ಹಕ್ಕಿದೆ?’ ಎಂದು ಪ್ರಶ್ನೆ ಮಾಡಿದ್ದರು.
View this post on Instagram
ಅದೇ ವಿಡಿಯೋ ತುಣುಕನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಪವಿತ್ರಾ ಗೌಡ, ‘ನನ್ನ ಜೀವನದ ಸತ್ಯಕಥೆ ಗೊತ್ತಿಲ್ಲದ ಬಹಳ ಜನ ನನ್ನನು ವಿನಾಕಾರಣ ದೂಷಿಸಿದರು ಇಂತಹ ಸಮಾಜದಲ್ಲಿ ನಿಮ್ಮ ಈ ಮಾತುಗಳು ನನ್ನಲ್ಲಿ ಒಂದು ಸಣ್ಣ ಬರವಸೆ ಚಿಗುರಿಸಿದೆ. ನನ್ನ ಕಡೆಯಿಂದ ಅನಂತ ಧನ್ಯವಾದಗಳು. ನನ್ನ ಜೀವನದ ಸತ್ಯಾಸತ್ಯತೆಗಳನ್ನು ಅರೆತುಕೊಳ್ಳದೆ ನನ್ನ ಬಗ್ಗೆ ಇಷ್ಟು ಕೆಟ್ಟದಾಗಿ ಮಾತನಾಡುವ ಇಂತಹ ಸಮಾಜದಲ್ಲಿ ನಿಮ್ಮಂಥವರು ಇರುವುದು ಬಹಳ ವಿಶೇಷ’ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ:‘ಮೌನ ಹಾಗೂ ನಗು’; ಉತ್ತರಿಸಲು ಹೊಸ ತಂತ್ರ ಕಂಡುಕೊಂಡ ಪವಿತ್ರಾ ಗೌಡ
‘ನಮ್ಮ ಸಮಾಜ ಮತ್ತು ಮಾಧ್ಯಮಗಳು ಹೆಣ್ಣಿನ ಬಗ್ಗೆ ಕನಿಷ್ಟ ಆಕೆ ಕಷ್ಟದಲ್ಲಿರುವಾಗ ಆದರೂ ಗೌರವದಿಂದ ನಡೆದುಕೊಳ್ಳಲಿ ಎಂಬುದು ನನ್ನ ಆಶಯ. ಕೇವಲ ನಾನು ಮತ್ತು ನನ್ನ ಹತ್ತಿರದವರಿಗೆ ಮಾತ್ರ ನನ್ನ ಜೀವನದ ನಿಜವಾದ ಕಷ್ಟಗಳು ಗೊತ್ತು. ನೀವು ನನ್ನ ಬಗ್ಗೆ ಆಡಿರುವ ಈ ಮಾತುಗಳಿಗೆ ನಾನು ಆಭಾರಿ ಆಗಿದ್ದೇನೆ’ ಎಂದಿದ್ದಾರೆ ಪವಿತ್ರಾ ಗೌಡ.
ದರ್ಶನ್ ಗೆಳತಿಯಾಗಿದ್ದ ಪವಿತ್ರಾ ಗೌಡ, ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಮೊದಲ ಆರೋಪಿ ಆಗಿದ್ದಾರೆ. ಕೊಲೆ ಪ್ರಕರಣದಲ್ಲಿ ಜೈಲು ಸೇರಿ ಇದೀಗ ಜಾಮೀನಿನ ಮೇಲೆ ಹೊರಗೆ ಬಂದಿದ್ದಾರೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ಗೆ ಸಿಕ್ಕ ಅಲ್ಪ-ಸ್ವಲ್ಪ ಸಹಾನುಭೂತಿ ಪವಿತ್ರಾ ಗೌಡಗೆ ಸಿಕ್ಕಿಲ್ಲ. ಪವಿತ್ರಾರನ್ನು ದರ್ಶನ್ ಜೀವನದ ವಿಲನ್ ಎಂಬಂತೆ ಬಿಂಬಿಸುವ ಪ್ರಯತ್ನವನ್ನು ಅವರ ಅಭಿಮಾನಿಗಳು ಮಾಡುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




