Valentine’s Day: ಚಂದನವನದ ಪ್ರೇಮಗೀತೆಗಳ ಪರಂಪರೆಯನ್ನು ಯಶಸ್ವಿಯಾಗಿ ಮುಂದುವರೆಸುತ್ತಿವೆ ಈ ಹಾಡುಗಳು
Kannada Romantic Songs: ಇಂದು ಪ್ರೇಮಿಗಳ ದಿನ. ಕನ್ನಡ ಚಿತ್ರಗೀತೆಗಳಲ್ಲಿ ಪ್ರೇಮಗೀತೆಗಳಿಗೆ ವಿಶೇಷ ಸ್ಥಾನವಿದೆ. ಸ್ಯಾಂಡಲ್ವುಡ್ನಲ್ಲಿ ಪ್ರಸ್ತುತ ವಿಶೇಷ ಪ್ರಯೋಗಗಳು ನಡೆಯುತ್ತಿದ್ದು, ಗುನುಗುವಂತಹ ಇತ್ತೀಚಿನ ಕೆಲವು ಗೀತೆಗಳು ಇಲ್ಲಿವೆ.

ಪ್ರೇಮಿಗಳ ಜೀವನದಲ್ಲಿ ರೊಮ್ಯಾಂಟಿಕ್ ಗೀತೆಗಳ (Romantic Songs) ಪಾಲು ಬಲುದೊಡ್ಡದು. ಯಾರನ್ನೋ ನೋಡಿದಾಗ ಕಿವಿಯಲ್ಲಿ ತನ್ನಿಂತಾನೆ ಹಾಡೊಂದು ಅನುರಣಿಸಲು ಆರಂಭವಾಗುತ್ತದೆ. ಆ ಹಾಡು ಇವರಿಗಾಗಿಯೇ ಬರೆದಂತಿದೆ ಎನ್ನಿಸುತ್ತದೆ. ಹಾಡಿಗೂ ನಿಜ ಜೀವನಕ್ಕೂ ಎಷ್ಟೊಂದು ಸಾಮ್ಯತೆ ಇದೆಯಲ್ಲಾ ಅನಿಸುತ್ತದೆ.. ಪ್ರೇಮದಲ್ಲಿ ಏನುಂಟು..? ಏನಿಲ್ಲ..? ಇದಕ್ಕೆ ಪ್ರೇಮಿಗಳೇ ಉತ್ತರಿಬೇಕು. ಒಟ್ಟಿನಲ್ಲಿ ಬಂಧವನ್ನು ಗಟ್ಟಿಗೊಳಿಸಲು, ಭಾವನೆಗಳನ್ನು ವ್ಯಕ್ತಪಡಿಸಲು ಪ್ರೇಮಿಗೀತೆಗಳ ಕೊಡುಗೆ ಅಪಾರ. ಕನ್ನಡದಲ್ಲಿ ಪ್ರೇಮ ಗೀತೆಗಳಿಗಂತೂ ಬರವಿಲ್ಲ. ಹಳೆಯ ಕಾಲದ ಗೀತೆಗಳನ್ನೂ ನಾವು ಗುನುಗುತ್ತೇವೆ. ಹೊಸ ಗೀತೆಗಳನ್ನೂ ಹಾಡಿಕೊಳ್ಳುತ್ತಾ ಮೈಮರೆಯುತ್ತೇವೆ. ಇದಕ್ಕೆ ಮುಖ್ಯ ಕಾರಣ, ಹಾಡುಗಳು ನಮಗೆ ನೀಡುವ ಆಹ್ಲಾದ ಭಾವ. ಪ್ರೇಮಗೀತೆಗಳು ಒಮ್ಮೆ ಮನಸ್ಸಿನಲ್ಲಿ ಕುಳಿತುಬಿಟ್ಟರೆ ಅವುಗಳಿಗೆ ಆಯಸ್ಸು ಮುಗಿಯುವ ಪ್ರಶ್ನೆಯೇ ಇಲ್ಲ. ಇದು ಟ್ರೆಂಡ್ ಎಲ್ಲವನ್ನೂ ಮೀರಿದ್ದು. ಕನ್ನಡ ಪ್ರೇಮಗೀತೆಗಳ ಭವ್ಯ ಪರಂಪರೆಯನ್ನು ಈಗಿನ ಗೀತೆಗಳು ಮುಂದುವರೆಸುತ್ತಿವೆ. ಪ್ರೇಮಿಗಳ ದಿನದ (Valentine’s Day) ನೆಪದಲ್ಲಿ ಕನ್ನಡದಲ್ಲಿ ಇತ್ತೀಚೆಗೆ ಬಿಡುಗಡೆಯಾದ ಮತ್ತೆ ಮತ್ತೆ ಗುನುಗುವಂತಹ ಕೆಲವು ಗೀತೆಗಳ ಪಟ್ಟಿ ಇಲ್ಲಿದೆ.
1. ಪ್ರೇಮಕ್ಕೆ ಕಣ್ಣಿಲ್ಲ/ ಸಖತ್: ಸಿಂಪಲ್ ಸುನಿ ನಿರ್ದೇಶನದ ಜೂಡಾ ಸ್ಯಾಂಡಿ ಸಂಗೀತ ನೀಡಿರುವ ‘ಸಖತ್’ ಚಿತ್ರದ ಹಾಡುಗಳು ಜನರನ್ನು ಮೋಡಿ ಮಾಡಿವೆ. ಅದರಲ್ಲೂ ಜಯಂತ್ ಕಾಯ್ಕಿಣಿ ಸಾಹಿತ್ಯ ರಚಿಸಿರುವ ‘ಪ್ರೇಮಕ್ಕೆ ಕಣ್ಣಿಲ್ಲ’ ಗೀತೆ ಬಹಳಷ್ಟು ಕಾಲ ಜನರ ಬಾಯಲ್ಲಿ ಗುನುಗಬಹುದಾದಂತಹ ಗೀತೆ ಎಂದರೆ ತಪ್ಪಿಲ್ಲ. ಪಂಚಮ್ ಜೀವ ಹಾಗೂ ಶ್ರೇಯಾ ಅಯ್ಯರ್ ಈ ಗೀತೆಯನ್ನು ಹಾಡಿದ್ದಾರೆ. ಹಾಡಿಗೆ ಗಣೇಶ್ ಹಾಗೂ ನಿಶ್ವಿಕಾ ನಾಯ್ಡು ಜೀವ ತುಂಬಿದ್ದಾರೆ.
2. ಮಳೆಯೇ ಮಳೆಯೇ/ ಸಲಗ: ದುನಿಯಾ ವಿಜಯ್ ನಿರ್ದೇಶಿಸಿ, ನಟಿಸಿರುವ ‘ಸಲಗ’ ಚಿತ್ರದ ‘ಮಳೆಯೇ ಮಳೆಯೇ’ ಪ್ರೇಮಿಗಳ ಮನಗೆದ್ದಿರುವ ಹಾಡು. ನಾಗಾರ್ಜುನ್ ಶರ್ಮಾ ಸಾಹಿತ್ಯ ರಚಿಸಿ, ಚರಣ್ ರಾಜ್ ಸಂಗೀತ ನೀಡಿರುವ ಈ ಗೀತೆಗೆ ದನಿಯಾಗಿರುವವರು ಸಂಜಿತ್ ಹೆಗ್ಡೆ, ಐಶ್ವರ್ಯಾ ರಂಗರಾಜನ್.
3. ತಾರೀಫು ಮಾಡಲು/ ಮುಗಿಲ್ಪೇಟೆ: ಶ್ರೀಧರ್ ವಿ ಸಂಭ್ರಮ್ ಸಂಗೀತ ನೀಡಿರುವ, ನಕುಲ್ ಅಭ್ಯಂಕರ್ ಹಾಗೂ ಶ್ವೇತಾ ದೇವನಹಳ್ಳಿ ಹಾಡಿರುವ ‘ತಾರೀಫು ಮಾಡಲು’ ಗೀತೆ ಮತ್ತೆ ಮತ್ತೆ ಗುನುಗುವಂತಿದೆ. ಹಾಡಿಗೆ ಭರತ್ ಎಸ್ ನಾವುಂದ ಹಾಗೂ ಶ್ರಿಧರ್ ವಿ ಸಂಭ್ರಮ್ ಸಾಹಿತ್ಯ ರಚಿಸಿದ್ದಾರೆ. ಮನುರಂಜನ್ ರವಿಚಂದ್ರನ್ ಅಭಿನಯದ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿರುವವರು ಭರತ್ ನಾವುಂದ.
4. ನೀನಾದೆ ನಾ/ ಯುವರತ್ನ: ಪುನೀತ್ ರಾಜ್ಕುಮಾರ್ ಅಭಿನಯದ ‘ಯುವರತ್ನ’ದ ‘ನೀನಾದೆ ನಾ’ ಹಾಡು ಮತ್ತೆ ಮತ್ತೆ ಗುನುಗಬಹುದಾದ ಗೀತೆ. ಸಂತೋಷ್ ಆನಂದ್ರಾಮ್ ಚಿತ್ರ ನಿರ್ದೇಶಿಸಿದ್ದು, ಈ ಹಾಡಿಗೆ ಸಾಹಿತ್ಯ ಬರೆದವರು ಗೌಸ್ ಪೀರ್. ತಮನ್ ಎಸ್ ಸಂಗೀತ ನೀಡಿದ್ದು, ಶ್ರೇಯಾ ಘೋಷಾಲ್, ಅರ್ಮಾನ್ ಮಲಿಕ್, ಮನನ್ ಎಸ್ ಹಾಡಿದ್ದಾರೆ.
5. ಆಗಾಗ ನೆನಪಾಗುತಾಳೆ/ ಬಡವ ರಾಸ್ಕಲ್: ಪ್ರೇಮದಲ್ಲಿ ವಿರಹ, ಬೇರೆಯಾಗುವುದು ಇವೆಲ್ಲಾ ಇದ್ದಿದ್ದೇ. ಇಂತಹ ಒಂದು ಸನ್ನಿವೇಶವನ್ನು ‘ಬಡವ ರಾಸ್ಕಲ್’ ಚಿತ್ರದ ‘ಆಗಾಗ ನೆನಪಾಗುತಾಳೆ’ ಹಾಡು ಸಮರ್ಥವಾಗಿ ಕಟ್ಟಿಕೊಟ್ಟಿದೆ. ನಾಯಕ ನಟ ಧನಂಜಯ್ ಸ್ವತಃ ಈ ಗೀತೆಗೆ ಸಾಹಿತ್ಯ ಬರೆದಿದ್ದು, ವಾಸುಕಿ ವೈಭವ್ ಸಂಗೀತ ನೀಡಿ ಹಾಡಿದ್ದಾರೆ.
ಈ ಮೇಲಿನ ಗೀತೆಗಳೆಲ್ಲವೂ ತೀರಾ ಇತ್ತೀಚೆಗೆ ಕೇಳುಗರ ಮನಗೆದ್ದ ಗೀತೆಗಳಷ್ಟೇ. ಕನ್ನಡ ಚಿತ್ರಗಳ ಪಟ್ಟಿ ತೆಗೆದು ಪುಟಗಳನ್ನು ಹಿಂದೆ ತಿರುಗಿಸಿದರೆ ಇಂತಹ ಅಸಂಖ್ಯ ಹಾಡುಗಳು ಕಾಣಿಸುತ್ತವೆ. ಪ್ರೇಮ ಗೀತೆಗಳಲ್ಲೇ ಹೊಸ ಹೊಸ ಪ್ರಯೋಗಗಳೂ ನಡೆಯುತ್ತಿವೆ. ರೊಮ್ಯಾಂಟಿಕ್ ಗೀತೆಗಳನ್ನು ಗುನುಗುವುದಕ್ಕೆ ಪ್ರೇಮಿಯಾಗಿರಬೇಕೆಂದೇನೂ ಇಲ್ಲ, ಚಿತ್ರ ಪ್ರೇಮಿಯಾಗಿದ್ದರೆ ಸಾಕು! ಈಗ ಹೇಳಿ, ನಿಮ್ಮಿಷ್ಟದ ಇತ್ತೀಚಿನ ಕನ್ನಡ ರೊಮ್ಯಾಂಟಿಕ್ ಗೀತೆಗಳು ಯಾವುವು?
ಇದನ್ನೂ ಓದಿ: