‘ಡೈನಾಮಿಕ್ ಪ್ರಿನ್ಸ್’ ಪ್ರಜ್ವಲ್ ದೇವರಾಜ್ (Prajwal Devaraj) ಅವರು ಸಖತ್ ಮಾಸ್ ಅವತಾರದಲ್ಲಿ ಅಬ್ಬರಿಸಲು ಸಜ್ಜಾಗಿದ್ದಾರೆ. ಅವರು ಅಭಿನಯಿಸಿರುವ ಹೊಸ ಸಿನಿಮಾ ‘ವೀರಂ’ (Veeram Movie) ಶೀಘ್ರದಲ್ಲೇ ಬಿಡುಗಡೆ ಆಗಲಿದೆ. ಈ ಚಿತ್ರದ ಟ್ರೇಲರ್ ರಿಲೀಸ್ ಮಾಡಲಾಗಿದ್ದು, ಸಿನಿಪ್ರಿಯರ ವಲಯದಲ್ಲಿ ಭಾರಿ ಹೈಪ್ ಸೃಷ್ಟಿ ಮಾಡಿದೆ. ಇಂದು (ಮಾರ್ಚ್ 23) ಬೆಂಗಳೂರಿನಲ್ಲಿ ಅದ್ದೂರಿಯಾಗಿ ಟ್ರೇಲರ್ ಲಾಂಚ್ ಆಗಿದೆ. ಈ ಟ್ರೇಲರ್ನಲ್ಲಿ ಪ್ರಜ್ವಲ್ ದೇವರಾಜ್ ಅವರು ಖಡಕ್ ಆಗಿ ಡೈಲಾಗ್ ಹೊಡೆದಿದ್ದಾರೆ. ಅವರ ಆರ್ಭಟ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ. ಏಪ್ರಿಲ್ 7ರಂದು ಬಿಡುಗಡೆ ಆಗಲಿರುವ ಈ ಚಿತ್ರಕ್ಕೆ ಕುಮಾರ್ ರಾಜ್ ನಿರ್ದೇಶನ ಮಾಡಿದ್ದಾರೆ. ಶಶಿಧರ್ ಕೆಎಂ ಅವರು ನಿರ್ಮಾಣ ಮಾಡಿದ್ದಾರೆ. ಮಾಸ್ ಪ್ರೇಕ್ಷಕರು ‘ವೀರಂ’ ಟ್ರೇಲರ್ (Veeram Trailer) ನೋಡಿ ಇಷ್ಟಪಟ್ಟಿದ್ದಾರೆ. ಕಮೆಂಟ್ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ.
‘ವೀರಂ’ ಶೀರ್ಷಿಕೆಯೇ ಫೋರ್ಸ್ಫುಲ್ ಆಗಿದೆ. ಅದಕ್ಕೆ ತಕ್ಕಂತೆಯೇ ಮೇಕಿಂಗ್ ಕೂಡ ಇದೆ. ಮೈ ನವಿರೇಳಿಸುವಂತಹ ಫೈಟಿಂಗ್, ದೊಡ್ಡದಾದ ಪಾತ್ರವರ್ಗ, ಪಂಚಿಂಗ್ ಡೈಲಾಗ್ಗಳು.. ಹೀಗೆ ಅನೇಕ ಅಂಶಗಳು ಈ ಸಿನಿಮಾದ ಹೈಲೈಟ್. ‘ಸಿಕ್ಕ ಸಿಕ್ಕವರಿಗೆಲ್ಲ ಅಣ್ಣ, ಬಾಸು ಅಂತ ಬಕೆಟ್ ಹಿಡಿದು ಬೆಳೆದಿರುವ ನಿನ್ ಬ್ಲಡ್ಗೆ ಇಷ್ಟು ಕೊಬ್ಬು ಇದೆ ಅಂತಂದ್ರೆ.. ಡೈನಾಮಿಕ್ ಬ್ಲಡ್ ಖದರ್ ಸ್ವಲ್ಪ ಜಾಸ್ತಿಯೇ ಇರುತ್ತೆ’ ಅಂತ ಪ್ರಜ್ವಲ್ ದೇವರಾಜ್ ಅವರು ಖಡಕ್ ಆಗಿ ಡೈಲಾಗ್ ಹೊಡೆದಿದ್ದಾರೆ. ಈ ಎಲ್ಲ ಕಾರಣಗಳಿಂದ ‘ವೀರಂ’ ಟ್ರೇಲರ್ ಗಮನ ಸೆಳೆಯುತ್ತಿದೆ.
ಇದನ್ನೂ ಓದಿ: Mafia: ಮಾಸ್ ಲುಕ್ನಲ್ಲಿ ಪ್ರಜ್ವಲ್ ದೇವರಾಜ್ ಮಿಂಚು; ‘ಮಾಫಿಯಾ’ದ ಟೀಸರ್ ಇಲ್ಲಿದೆ
ಪ್ರಜ್ವಲ್ ದೇವರಾಜ್ ಅವರು ಈವರೆಗೂ ಲವರ್ ಬಾಯ್ ಲುಕ್ನಲ್ಲಿ ಕಾಣಿಸಿಕೊಂಡಿದ್ದು ಹೆಚ್ಚು. ಪೊಲೀಸ್ ಪಾತ್ರ ಮಾಡಿ ರಂಜಿಸಿದ್ದೂ ಉಂಟು. ಆದರೆ ‘ವೀರಂ’ ಸಿನಿಮಾದಲ್ಲಿ ಅವರ ಗೆಟಪ್ ಸಂಪೂರ್ಣ ಬದಲಾಗಿದೆ. ಸಿಕ್ಕಾಪಟ್ಟೆ ಮಾಸ್ ಅವತಾರದಲ್ಲಿ ಅವರು ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಭರ್ಜರಿ ಆ್ಯಕ್ಷನ್ ದೃಶ್ಯಗಳ ಮೂಲಕ ಮನರಂಜನೆ ನೀಡಲಿದ್ದಾರೆ.
ಈ ಸಿನಿಮಾದಲ್ಲಿ ವಿಷ್ಣುವರ್ಧನ್ ಅಭಿಮಾನಿಯಾಗಿ ಪ್ರಜ್ವಲ್ ದೇವರಾಜ್ ಕಾಣಿಸಿಕೊಳ್ಳಲಿದ್ದಾರೆ. ಹೀರೋ ಕೈ ಮೇಲೆ ಇರುವ ವಿಷ್ಣು ದಾದಾ ಟ್ಯಾಟೂ ಸಖತ್ ಹೈಲೈಟ್ ಆಗಿದೆ. ಪ್ರಜ್ವಲ್ ದೇವರಾಜ್ ಜೊತೆ ಶ್ರುತಿ, ಶ್ರೀನಗರ ಕಿಟ್ಟಿ, ಶಿಷ್ಯ ದೀಪಕ್, ರಚಿತಾ ರಾಮ್ ಮುಂತಾದವರು ನಟಿಸಿದ್ದಾರೆ. ಲವಿತ್ ಛಾಯಾಗ್ರಹಣ, ಅನೂಪ್ ಸಿಳೀನ್ ಸಂಗೀತ ನಿರ್ದೇಶನ, ರವಿಚಂದ್ರನ್ ಸಂಕಲನ, ಡಿಫರೆಂಡ್ ಡ್ಯಾನಿ ಸಾಹಸ ನಿರ್ದೇಶನ ‘ವೀರಂ’ ಚಿತ್ರಕ್ಕಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:20 pm, Thu, 23 March 23