
ಕನ್ನಡ ಸಿನಿಮಾ ಮತ್ತು ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿರುವ ಪ್ರೊಫೆಸರ್ ದೊಡ್ಡರಂಗೇಗೌಡ (Doddarange Gowda) ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ದೊಡ್ಡರಂಗೇಗೌಡ ಅವರಿಗೆ ಐಸಿಯುನಲ್ಲಿ (ICU) ಚಿಕಿತ್ಸೆ ನೀಡಲಾಗುತ್ತಿದೆ. ಸಚಿವ ಶಿವರಾಜ ತಂಗಡಗಿ ಮುಂತಾದವರು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ದೊಡ್ಡರಂಗೇಗೌಡ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಫೋಟೋ ಲಭ್ಯವಾಗಿದೆ. ಅವರು ಬೇಗ ಗುಣಮಖರಾಗಲಿ ಎಂದು ಆಪ್ತರು ಮತ್ತು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.
ಪ್ರೊಫೆಸರ್ ದೊಡ್ಡರಂಗೇಗೌಡ ಅವರಿಗೆ ಈಗ 79 ವರ್ಷ ವಯಸ್ಸು. ಇತ್ತೀಚೆಗೆ ಅವರು ಮಂಡಿ ನೋವಿನಿಂದ ಬಳಲುತ್ತಿದ್ದರು. ಪ್ರಸ್ತುತ ಅವರ ಆರೋಗ್ಯದಲ್ಲಿ ತೀವ್ರ ಏರುಪೇರು ಉಂಟಾಗಿದೆ. ಹೆಲ್ತ್ ಅಪ್ಡೇಟ್ಗಾಗಿ ನಿರೀಕ್ಷಿಸಲಾಗುತ್ತಿದೆ. ಸರ್ಕಾರದಿಂದ ಅವರಿಗೆ ಎಲ್ಲ ರೀತಿಯ ನೆರವು ನೀಡುವುದಾಗಿ ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಅವರು ತಿಳಿಸಿದ್ದಾರೆ.
ದೊಡ್ಡರಂಗೇಗೌಡ ಜನಪ್ರಿಯ ಗೀತೆಗಳು:
ಚಂದನವನದಲ್ಲಿ ಎಂದೂ ಮರೆಯಲಾಗದ ಗೀತೆಗಳಿಗೆ ಪ್ರೊಫೆಸರ್ ದೊಡ್ಡರಂಗೇಗೌಡ ಅವರು ಸಾಹಿತ್ಯ ಬರೆದಿದ್ದಾರೆ. ಅವರು ಬರೆದ ಹಾಡುಗಳು ಎವರ್ಗ್ರೀನ್ ಆಗಿ ಉಳಿದುಕೊಂಡಿವೆ. ‘ಆಲೆಮನೆ’ ಸಿನಿಮಾದ ‘ನಮ್ಮೂರ ಮಂದಾರ ಹೂವೆ..’, ‘ಪರಸಂಗದ ಗೆಂಡೆತಿಮ್ಮ’ ಸಿನಿಮಾದ ‘ನೋಟದಾಗೆ ನಗೆಯ ಮೀಟಿ..’, ‘ತೇರ ಏರಿ ಅಂಬರದಾಗೆ ನೇಸರ ನಗುತಾನೆ..’, ‘ಪಡುವಾರಹಳ್ಳಿ ಪಾಂಡವರು’ ಚಿತ್ರದ ‘ಜನ್ಮ ನೀಡಿದ ಭೂ ತಾಯಿಯ..’ ಸೇರಿದಂತೆ ನೂರಾರು ಸೂಪರ್ ಹಿಟ್ ಹಾಡುಗಳು ಮೂಡಿಬಂದಿದ್ದು ಪ್ರೊಫೆಸರ್ ದೊಡ್ಡರಂಗೇಗೌಡ ಅವರ ಲೇಖನಿಯಿಂದ.
‘ಬೆಳ್ಳಿ ಕಾಲುಂಗುರ’ ಸಿನಿಮಾದ ‘ಕೇಳಿಸದೇ ಕಲ್ಲು ಕಲ್ಲಿನಲಿ..’ ಹಾಡು ಇಂದಿಗೂ ಕೇಳುಗರ ಫೇವರಿಟ್ ಪಟ್ಟಿಯಲ್ಲಿದೆ. ಸಾಂಗ್ಲಿಯಾನ, ಅರುಣರಾಗ, ಅಶ್ವಮೇಧ, ಕಾವ್ಯಾ, ನಮ್ಮೂರ ಮಂದಾರ ಹೂವೆ, ಸ್ಪರ್ಶ, ಜನುಮದ ಜೋಡಿ, ಲಂಕೇಶ್ ಪತ್ರಿಕೆ, ತಂದೆಗೆ ತಕ್ಕ ಮಗ ಸೇರಿದಂತೆ ಹಲವಾರು ಸಿನಿಮಾದ ಹಾಡುಗಳಿಗೆ ದೊಡ್ಡರಂಗೇಗೌಡ ಅವರು ಸಾಹಿತ್ಯ ಬರೆದಿದ್ದಾರೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಮತ್ತೊಮ್ಮೆ ಗೋಕಾಕ್ ಚಳವಳಿ ಆಗಬೇಕಿದೆ: ಪ್ರೊ. ದೊಡ್ಡರಂಗೇಗೌಡ
ಸಿನಿಮಾ ಸಾಹಿತ್ಯ ಮಾತ್ರವಲ್ಲದೇ ಅನೇಕ ಪುಸ್ತಕಗಳನ್ನು ಕೂಡ ದೊಡ್ಡರಂಗೇಗೌಡ ರಚಿಸಿದ್ದಾರೆ. ಅವರ ಸಾಹಿತ್ಯಸೇವೆಗೆ ಅನೇಕ ಪ್ರಶಸ್ತಿಗಳು ಸಿಕ್ಕಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯ ಸಿನಿಮಾ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿ ಸೇರಿದಂತೆ ಅನೇಕ ಪುರಸ್ಕಾರಗಳು ಅವರಿಗೆ ಸಂದಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.