‘ಬ್ಲ್ಯಾಕ್ ಶೀಪ್’ ಸಿನಿಮಾದಲ್ಲಿ ಸಿಬಿಐ ಆಫೀಸರ್ ಕಹಾನಿ; ಸದ್ಯದಲ್ಲೇ ರಿಲೀಸ್
ಸಸ್ಪೆನ್ಸ್, ಕ್ರೈಮ್, ಥ್ರಿಲ್ಲರ್ ಶೈಲಿಯಲ್ಲಿ ‘ಬ್ಲ್ಯಾಕ್ ಶೀಪ್’ ಸಿನಿಮಾ ಸಿದ್ಧವಾಗಿದೆ. ಈ ಚಿತ್ರಕ್ಕೆ ಜೀವನ್ ಹಳ್ಳಿಕಾರ್ ಆ್ಯಕ್ಷನ್-ಕಟ್ ಹೇಳಿದ್ದಾರೆ. ವಿಶಾಲ್ ಕಿರಣ್ ಅವರು ಈ ಚಿತ್ರದಲ್ಲಿ ಹೀರೋ ಆಗಿ ನಟಿಸಿದ್ದಾರೆ. ಇದು ಅವರ ಮೊದಲ ಸಿನಿಮಾ. ಸಿಬಿಐ ಆಫೀಸರ್ ಪಾತ್ರ ಮಾಡಿದ್ದಾರೆ. ಅಶ್ವಿನಿ ಗುರುಚರಣ್ ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ.

ಕನ್ನಡದ ‘ಬ್ಲ್ಯಾಕ್ ಶೀಪ್’ (Black Sheep) ಸಿನಿಮಾ ಸದ್ಯದಲ್ಲೇ ಬಿಡುಗಡೆ ಆಗಲಿದೆ. ಈಗ ಈ ಚಿತ್ರದ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಸಿನಿಮಾದ ಟೀಸರ್, ಟ್ರೇಲರ್, ಹಾಡುಗಳನ್ನು ಬಿಡುಗಡೆ ಮಾಡಲಾಗಿದೆ. ಡ್ಯಾನ್ಸರ್, ಕೊರಿಯೋಗ್ರಾಫರ್ ಆಗಿರುವ ಜೀವನ್ ಹಳ್ಳಿಕಾರ್ (Jeevan Hallikar) ಅವರು ‘ಬ್ಲ್ಯಾಕ್ ಶೀಪ್’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಡೈರೆಕ್ಷನ್ ಜೊತೆಗೆ ನೃತ್ಯ ನಿರ್ದೇಶನವನ್ನೂ ಅವರೇ ಮಾಡಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಸುದ್ದಿಗೋಷ್ಠಿ ನಡೆಯಿತು. ಇದರಲ್ಲಿ ಚಿತ್ರತಂಡದವರು ಭಾಗಿಯಾಗಿ ಕೆಲವು ಮಾಹಿತಿ ಹಂಚಿಕೊಂಡರು.
‘ಗ್ಲಿಟ್ಟರರ್ರ‍್ಸ್ ಸ್ಟಾರ್ ಹೌಸ್ ಪ್ರೊಡಕ್ಷನ್ಸ್’ ಸಂಸ್ಥೆಯ ಮೂಲಕ ಅಶ್ವಿನಿ ಗುರುಚರಣ್ ಅವರು ‘ಬ್ಲ್ಯಾಕ್ ಶೀಪ್’ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಜೊತೆಗೆ ಅವರೇ ಈ ಚಿತ್ರಕ್ಕೆ ಕಾಸ್ಟ್ಯೂಮ್ ಡಿಸೈನರ್ ಆಗಿ ಕೆಲಸ ಮಾಡಿದ್ದಾರೆ. ಮಂಜುನಾಥ್ ಪಿ. ರಾವ್ ಅವರು ಸಹ-ನಿರ್ಮಾಪಕರಾಗಿದ್ದಾರೆ. ನಿರ್ದೇಶಕ ಜೀವನ್ ಹಳ್ಳಿಕಾರ್ ಅವರು ಉಪೇಂದ್ರ ಅಭಿಮಾನಿ. ಹಾಗಾಗಿ ‘ಉಪೇಂದ್ರ’ ಸಿನಿಮಾದ ಟೈಟಲ್ನಿಂದ ಸ್ಫೂರ್ತಿಗೊಂಡು ‘ಬ್ಲ್ಯಾಕ್ ಶೀಪ್’ ಶೀರ್ಷಿಕೆ ವಿನ್ಯಾಸ ಮಾಡಲಾಗಿದೆ.
ಈವರೆಗೂ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದ ಜೀವನ್ ಹಳ್ಳಿಕಾರ್ ಅವರು ಇದೇ ಮೊದಲ ಬಾರಿಗೆ ಸ್ವತಂತ್ರ ನಿರ್ದೇಶಕನಾಗಿದ್ದಾರೆ. 69 ದಿನಗಳ ಕಾಲ ಬೆಂಗಳೂರು, ಮುಂಬೈ ಹಾಗೂ ಮಂಗಳೂರಿನಲ್ಲಿ ಈ ಸಿನಿಮಾದ ಶೂಟಿಂಗ್ ಮಾಡಲಾಗಿದೆ. ಮಾಫಿಯಾ ಕಹಾನಿ ಈ ಸಿನಿಮಾದಲ್ಲಿ ಇದೆ. ಈ ಕಥೆಯಲ್ಲಿ ಹೀರೋ ಸಿಬಿಐ ಆಫೀಸರ್ ಆಗಿರುತ್ತಾನೆ ಎಂದು ನಿರ್ದೇಶಕರು ಮಾಹಿತಿ ನೀಡಿದರು.
ಫಿಟ್ನೆಸ್ ಟ್ರೇನರ್, ಮಾಡೆಲ್ ಆಗಿರುವ ವಿಶಾಲ್ ಕಿರಣ್ ಅವರು ‘ಬ್ಲ್ಯಾಕ್ ಶೀಪ್’ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಆ್ಯಕ್ಷನ್ ದೃಶ್ಯಗಳು ಹೈಲೈಟ್ ಆಗಿವೆ ಎಂದು ಅವರು ಹೇಳಿದ್ದಾರೆ. ಇದು ಹೀರೋ ಆಗಿ ಅವರಿಗೆ ಮೊದಲ ಸಿನಿಮಾ. ಸಾಕಷ್ಟು ತರಬೇತಿ ಪಡೆದು ಅವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಶಿವಾಂಗಿ ದಾವೆ ಅವರು ನಾಯಕಿಯಾಗಿ ಅಭಿನಯಿಸಿದ್ದಾರೆ.
ಇದನ್ನೂ ಓದಿ: ‘ಅಖಂಡ 2’ ಟೀಸರ್: ಊಹಿಸಿದ್ದಕ್ಕಿಂತಲೂ ಹೆಚ್ಚಾಯಿತು ಬಾಲಯ್ಯ ಮಾಸ್ ಅವತಾರ
‘ಬ್ಲ್ಯಾಕ್ ಶೀಪ್’ ಸಿನಿಮಾಗೆ ದೇವು ಅವರು ಛಾಯಾಗ್ರಹಣ ಮಾಡಿದ್ದಾರೆ. ಸಿದ್ದಾರ್ಥ್ ಕಾಮತ್ ಅವರು ಸಂಗೀತ ನೀಡಿದ್ದಾರೆ. ಎಸ್. ಆಕಾಶ್ ಮಹೇಂದ್ರಕರ್ ಅವರು ಸಂಕಲನ ಮಾಡಿದ್ದಾರೆ. ಅವತಾರ್ ಆದಿತ್ಯ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ವಿಲನ್ ಆಗಿ ಪ್ರಶಾಂತ್ ವಿ. ಹರಿ ಅವರು ನಟಿಸಿದ್ದಾರೆ. ಸಿದ್ಲುಂಗು ಶ್ರೀಧರ್, ನಿಶಾ ಹೆಗಡೆ, ಕೃಷ್ಣ ಹೆಬ್ಬಾಳೆ, ಪುನೀತ್, ಸುಂದರ್ ವೀಣಾ, ದೀಪಿಕಾ ಅಡ್ತಲೆ ಮುಂತಾದ ಕಲಾವಿದರು ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.