ಸಾಹಸಸಿಂಹ ಡಾಕ್ಟರ್ ವಿಷ್ಣುವರ್ಧನ್ (Vishnuvardhan) ಅವರು ನಮ್ಮನ್ನು ಅಗಲಿ 14 ವರ್ಷಗಳು ಕಳೆದಿವೆ. ಅವರ 14ನೇ ವರ್ಷದ ಪುಣ್ಯ ತಿಥಿಯನ್ನು ಇಂದು (ಡಿಸೆಂಬರ್ 30) ನೆರವೇರಿಸಲಾಗಿದೆ. ವಿಷ್ಣುವರ್ಧನ್ ಅವರ ಅಂತ್ಯಕ್ರಿಯೆ ನಡೆದ ಅಭಿಮಾನ್ ಸ್ಟುಡಿಯೋದಲ್ಲಿ ಫ್ಯಾನ್ಸ್ ಪೂಜೆ ನೆರವೇರಿಸಿದ್ದಾರೆ. ಪುಣ್ಯ ಸ್ಮರಣೆ ಅಂಗವಾಗಿ ರಕ್ತದಾನ, ನೇತ್ರದಾನ, ಅನ್ನದಾನದಂಥ ಸಾಮಾಜಿಕ ಕೆಲಸಗಳನ್ನು ಮಾಡಲಾಗುತ್ತಿದೆ. ಪೂಜೆ ಮತ್ತು ದೀಪೋತ್ಸವದಂತಹ ಕಾರ್ಯಗಳು ನಡೆಯಲಿವೆ.
ಅಭಿಮಾನಿಗಳು ಬಂದು ವಿಷ್ಣುವರ್ಧನ್ ಸಮಾಧಿ ಬಳಿ ಪೂಜೆ ಸಲ್ಲಿಕೆ ಮಾಡಿದ್ದಾರೆ. ಪುಣ್ಯ ಸಮಾಧಿಗಾಗಿ ಅಭಿಮಾನಿಗಳು ಹೋರಾಟ ಮಾಡುತ್ತಿದ್ದಾರೆ. ಹೀಗಾಗಿ, ಸಮಾಧಿ ಬಳಿ ಯಾವುದೇ ಸಮಸ್ಯೆ ಆಗಬಾರದು ಎಂದು ಪೊಲೀಸ್ ಬಿಗಿ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ. ಒಂದು ಕೆಎಸ್ಆರ್ಪಿ ತುಕಡಿ ಸ್ಥಳದಲ್ಲಿದೆ. ಅಭಿಮಾನಿಗಳು ಗಲಾಟೆ ಹಾಗು ಪ್ರತಿಭಟನೆ ಮಾಡಬಾರದು ಎನ್ನುವ ಕಾರಣಕ್ಕೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.
ವಿಷ್ಣುವರ್ಧನ್ ಅಂತ್ಯಕ್ರಿತೆ ಮಾಡಿದ್ದ ಶ್ರೀಧರ್ ಅವರು ಮಾತನಾಡಿದ್ದಾರೆ. ‘ಸಮಾಧಿ ಇಲ್ಲೇ ಆಗಬೇಕು ಎಂದು ಕೋರ್ಟ್ನಲ್ಲಿ ಕೇಸ್ ನಡೆಯುತ್ತಿದೆ. ಅವರು ಹತ್ತು ಗುಂಟೆ ಜಾಗ ಕೊಡಬೇಕು. ಅಣ್ಣನ ಅಂತ್ಯಸಂಸ್ಕಾರ ಇಲ್ಲೇ ಆಗಿರೋದು. ಹೀಗಾಗಿ ಅವರು ಇಲ್ಲೇ ಇರಬೇಕು. ಎಲ್ಲಾ ಅಭಿಮಾನಿಗಳು ಇದಕ್ಕಾಗಿ ಒಟ್ಟಾಗಿ ಕೆಲಸ ಮಾಡಬೇಕು’ ಎಂದು ಶ್ರೀಧರ್ ಕರೆ ನೀಡಿದ್ದಾರೆ. ವಿಷ್ಣು ಅಭಿಮಾನಿ ವೀರಕಪುತ್ರ ಶ್ರೀನಿವಾಸ್ ಅವರಿಂದ ಸಮಾಧಿಗೆ ಪೂಜೆ ಸಲ್ಲಿಸಲಾಗಿದೆ.
ಇದನ್ನೂ ಓದಿ: ಡಾ. ವಿಷ್ಣುವರ್ಧನ್ ಪುಣ್ಯಭೂಮಿ ಉಳಿವಿಗಾಗಿ ಫ್ರೀಡಂ ಪಾರ್ಕ್ನಲ್ಲಿ ಅಭಿಮಾನಿಗಳ ಪ್ರತಿಭಟನೆ
ಇತ್ತೀಚೆಗೆ ವಿಷ್ಣುವರ್ಧನ್ ಅಭಿಮಾನಿ ಸಂಘದವರು ಕರ್ನಾಟಕ ಫಿಲ್ಮ್ ಚೇಂಬರ್ ಎದುರು ಪ್ರತಿಭಟನೆ ನಡೆಸಿದ್ದರು. ವಿಷ್ಣುವರ್ಧನ್ ವಿಚಾರದಲ್ಲಿ ಚಲನಚಿತ್ರ ಮಂಡಳಿ ನಿರ್ಲಕ್ಷ್ಯ ತೋರುತ್ತಿದೆ ಎಂದು ಅಭಿಮಾನಿಗಳು ಆರೋಪಿಸಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:31 am, Sat, 30 December 23