ಕನ್ನಡ ಚಿತ್ರರಂಗದ ಮೇರು ನಟ ಡಾ. ವಿಷ್ಣುವರ್ಧನ್ ಅವರ ಸ್ಮಾರಕದ (Vishnuvardhan Memorial) ಉದ್ಘಾಟನೆಗೆ ಸಮಯ ಕೂಡಿಬಂದಿದೆ. ಈ ಸಂಭ್ರಮದ ಕ್ಷಣಕ್ಕಾಗಿ ವಿಷ್ಣು ದಾದಾ ಅಭಿಮಾನಿಗಳು ಮತ್ತು ಅವರ ಕುಟುಂಬದವರು ಹಲವು ವರ್ಷಗಳಿಂದಲೂ ಕಾದಿದ್ದರು. ಈಗ ವಿಷ್ಣುವರ್ಧನ್ ಅಳಿಯ ಅನಿರುದ್ಧ್ ಅವರು ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ. ಜನವರಿ 29ರಂದು ಮೈಸೂರಿನಲ್ಲಿ ಸಾಹಸ ಸಿಂಹ ವಿಷ್ಣುವರ್ಧನ್ (Dr Vishnuvardhan) ಅವರ ಸ್ಮಾರಕ ಉದ್ಘಾಟನೆ ಆಗಲಿದೆ ಎಂಬ ವಿಚಾರವನ್ನು ಅವರು ಬಹಿರಂಗಪಡಿಸಿದ್ದಾರೆ. ‘ಸಾಹಸ ಸಿಂಹ’ನ ಸ್ಮಾರಕದ ಉದ್ಘಾಟನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಜರಿ ಹಾಕಲಿದ್ದಾರೆ. ಈ ವಿಷಯ ಕೇಳಿ ವಿಷ್ಣುವರ್ಧನ್ ಫ್ಯಾನ್ಸ್ ಖುಷಿ ಆಗಿದ್ದಾರೆ. ಉದ್ಘಾಟನಾ ಸಮಾರಂಭದಲ್ಲಿ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು ಪಾಲ್ಗೊಳ್ಳಬೇಕು ಎಂದು ಅನಿರುದ್ಧ್ (Anirudh Jatkar) ಕೇಳಿಕೊಂಡಿದ್ದಾರೆ.
ಮೈಸೂರಿನ ಎಚ್.ಡಿ. ಕೋಟೆ ರಸ್ತೆಯ ಅಲ್ಲಾಳು ಗ್ರಾಮದಲ್ಲಿ ಜನವರಿ 29ರಂದು ಬೆಳಗ್ಗೆ 11 ಗಂಟೆಗೆ ವಿಷ್ಣುವರ್ಧನ್ ಸ್ಮಾರಕದ ಉದ್ಘಾಟನಾ ಸಮಾರಂಭ ನಡೆಯಲಿದೆ. ಈ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಲು ಅಪಾರ ಸಂಖ್ಯೆಯ ಅಭಿಮಾನಿಗಳು ಕಾದಿದ್ದಾರೆ. ಸಮಾರಂಭಕ್ಕೆ ಬರಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಒಪ್ಪಿಕೊಳ್ಳುತ್ತಿದ್ದಂತೆಯೇ ನಟ ಅನಿರುದ್ಧ್ ಅವರು ಈ ಗುಡ್ ನ್ಯೂಸ್ ನೀಡಿದ್ದಾರೆ.
‘ಎಲ್ಲರಿಗೂ ನಮಸ್ಕಾರ.. ಮೈಸೂರಿನಲ್ಲಿ ಪೂರ್ಣಗೊಂಡಿರುವ ವಿಷ್ಣುವರ್ಧನ್ ಅವರ ಸ್ಮಾರಕದ ಉದ್ಘಾಟನೆಗೆ ಬರಲು ಮಾನ್ಯ ಮುಖ್ಯಮಂತ್ರಿಗಳು ಒಪ್ಪಿಕೊಂಡಿದ್ದಾರೆ. ತಾವೆಲ್ಲರೂ ಇಷ್ಟು ವರ್ಷ ಕಾದಿದ್ದೀರಿ. ಇಂದು ಈ ಸಂತೋಷದ ಸುದ್ದಿಯನ್ನು ಎಲ್ಲರೂ ಕೇಳುತ್ತಿದ್ದೀರಿ. ನೀವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ವಿಷ್ಣುವರ್ಧನ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಅಂತ ನಿಮ್ಮಲ್ಲಿ ಕೇಳಿಕೊಳ್ಳುತ್ತೇನೆ’ ಎಂದು ಅನಿರುದ್ಧ್ ಅವರು ಸೋಶಿಯಲ್ ಮೀಡಿಯಾದಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:56 pm, Thu, 12 January 23