25 ವರ್ಷದ ಬಳಿಕ ಮತ್ತೆ ಬರುತ್ತಿದ್ದೆ ಯಜಮಾನ್ರ ‘ಯಜಮಾನ’
Yajamana Kannada movie: ‘ಯಜಮಾನ’ ಕನ್ನಡ ಸಿನಿಮಾ 25 ವರ್ಷಗಳ ಹಿಂದೆ ಬಿಡುಗಡೆ ಆಗಿ ಬ್ಲಾಕ್ ಬಸ್ಟರ್ ಸಿನಿಮಾ ಎನಿಸಿಕೊಂಡಿತ್ತು. ಆಗಿನ ಕಾಲಕ್ಕೆ ಆ ಸಿನಿಮಾ 35 ಕೋಟಿಗೂ ಹೆಚ್ಚು ಮೊತ್ತ ಗಳಿಕೆ ಮಾಡಿತ್ತು. ಸಿನಿಮಾ ಬಿಡುಗಡೆ ಆಗಿ 25 ವರ್ಷಗಳಾದ ನೆನಪಲ್ಲಿ ಸಿನಿಮಾವನ್ನು ಮರು ಬಿಡುಗಡೆ ಮಾಡಲಾಗುತ್ತಿದೆ.

ವಿಷ್ಣುವರ್ಧನ್ (Vishnuvardhan), ತಮ್ಮ ವೃತ್ತಿ ಜೀವನದಲ್ಲಿ ಹಲವಾರು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿದ್ದಾರೆ. ಅವರ ನಟನೆಯ ಹಲವು ಸಿನಿಮಾಗಳು ವರ್ಷಾನುಗಟ್ಟಲೆ ಸತತವಾಗಿ ಓಡಿದ್ದು ಇದೆ. ಅವುಗಳಲ್ಲಿ ಒಂದು ‘ಯಜಮಾನ’. ವಿಷ್ಣುವರ್ಧನ್ ಅವರು ದ್ವಿಪಾತ್ರದಲ್ಲಿ ನಟಿಸಿದ್ದ ‘ಯಜಮಾನ’ ಸಿನಿಮಾ ಸರಿಯಾಗಿ 25 ವರ್ಷಗಳ ಹಿಂದೆ 2000 ನೇ ಇಸವಿಯಲ್ಲಿ ಬಿಡುಗಡೆ ಆಗಿತ್ತು. ಇದೀಗ ಈ ಸಿನಿಮಾ 25 ವರ್ಷ ಪೂರೈಸಿದ ಸವಿನೆನಪಿಗೆ ‘ಯಜಮಾನ’ ಸಿನಿಮಾವನ್ನು ಮರು ಬಿಡುಗಡೆ ಮಾಡಲಾಗುತ್ತಿದೆ. ಇದೇ ನವೆಂಬರ್ 7 ರಂದು ರಾಜ್ಯದ ಕೆಲವು ಮುಖ್ಯ ಚಿತ್ರಮಂದಿರಗಳಲ್ಲಿ ‘ಯಜಮಾನ’ ಸಿನಿಮಾ ಮರು ಬಿಡುಗಡೆ ಆಗಲಿದೆ.
ಆಧುನಿಕ ತಂತ್ರಜ್ಞಾನಗಳನ್ನು ಬಳಸಿ ಸಿನಿಮಾದ ಆಡಿಯೋ ಗುಣಮಟ್ಟ, ದೃಶ್ಯದ ಗುಣಮಟ್ಟವನ್ನು ಹೆಚ್ಚಿಸಲಾಗಿದೆ. ಮುನಿಸ್ವಾಮಿ ಎಸ್ ಡಿ ಈ ಚಿತ್ರವನ್ನು ಮರು ಬಿಡುಗಡೆ ಮಾಡುತ್ತಿದ್ದಾರೆ. ಚಿತ್ರದ ರಜತೋತ್ಸವವನ್ನು ಸಂಭ್ರಮಿಸಲು ಕಲಾವಿದರ ಸಂಘದಲ್ಲಿ ಸಮಾರಂಭ ಆಯೋಜಿಸಲಾಗಿತ್ತು. ಚಿತ್ರದ ನಿರ್ಮಾಪಕರು, ಕಲಾವಿದರು ಹಾಗೂ ತಂತ್ರಜ್ಞರು ಸಮಾರಂಭದಲ್ಲಿ ಭಾಗಿಯಾಗಿದ್ದರು. “ಯಜಮಾನ” ಚಿತ್ರದ ಕುರಿತು ಮಾತನಾಡಿದರು.
ಸಿನಿಮಾ ಕುರಿತು ಮಾತನಾಡಿದ ನಿರ್ಮಾಪಕ ರೆಹಮಾನ್, ‘ಈ ಚಿತ್ರ ಆಗಲು ಪ್ರಮುಖ ಕಾರಣ ಗುರು ಸಮಾನರಾದ ವಿಷ್ಣುವರ್ಧನ್ ಹಾಗೂ ಕೆ.ವಿ.ನಾಗೇಶ್ ಕುಮಾರ್ ಅವರು. 130ಕ್ಕೂ ಹೆಚ್ಚು ಕಡೆ ಶತದಿನೋತ್ಸವ, 40ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಇಪ್ಪತ್ತೈದು ವಾರ ಹಾಗೂ 4 ಕಡೆಗಳಲ್ಲಿ 1 ವರ್ಷ ಈ ಸಿನಿಮಾ ಓಡಿದೆ. 25 ವರ್ಷಗಳ ಹಿಂದೆಯೇ 35 ಕೋಟಿ ಕಲೆಕ್ಷನ್ ಮಾಡಿ ದಾಖಲೆ ಬರೆದ ಚಿತ್ರವಿದು. ವಿಷ್ಣುವರ್ಧನ್, ಪ್ರೇಮ, ಶಶಿಕುಮಾರ್, ಅಭಿಜಿತ್, ರಮೇಶ್ ಭಟ್, ಟೆನ್ನಿಸ್ ಕೃಷ್ಣ ಹೀಗೆ ಅನೇಕ ಕಲಾವಿದರ ಅದ್ದೂರಿ ತಾರಾಬಳಗವಿರುವ ಈ ಚಿತ್ರವನ್ನು ಈಗ ಮುನಿಸ್ವಾಮಿ ಅವರು ಮರು ಬಿಡುಗಡೆ ಮಾಡುತ್ತಿದ್ದಾರೆ. ಹಿಂದೆ ನೀವು ನೀಡಿದ ಗೆಲುವಿಗಿಂತ ದೊಡ್ದ ಗೆಲುವನ್ನು ಈಗ ನೀಡಿ ಎಂದು ಮನವಿ ಮಾಡಿದರು.
ಇದನ್ನೂ ಓದಿ:ವಿಷ್ಣುವರ್ಧನ್ ಜನ್ಮದಿನವನ್ನು ‘ಯಜಮಾನರ ಅಮೃತ ಮಹೋತ್ಸವ’ ಆಗಿ ಆಚರಣೆ; ಹೀಗಿದೆ ಕಾರ್ಯಕ್ರಮದ ರೂಪುರೇಷೆ
“ಯಜಮಾನ” ಚಿತ್ರವನ್ನು ಡಿಐ ಬಳಸಿ 4k ಡಿಜೆಟಲ್ ಪ್ರೊಜೆಕ್ಷನ್ ಗೆ ತಯಾರು ಮಾಡಲಾಗಿದೆ. ಇಂದಿನ ಆಧುನಿಕ ತಂತ್ರಜ್ಞಾನಗಳನ್ನೊಳಗೊಂಡಿರುವ ಚಿತ್ರಮಂದಿರಗಳಲ್ಲಿ ವೀಕ್ಷಿಸಬಹುದು. ಇನ್ನು, ಮೋನೊ ಟ್ರ್ಯಾಕ್ ನಲ್ಲಿದ್ದ ಈ ಚಿತ್ರದ ಕಲಾವಿದರ ಧ್ವನಿಗಳನ್ನು ಸಹ 5.1 ಹಾಗೂ 7.1 ಡಿಜಿಟಲ್ ಸೌಂಡ್ ಗೆ ಬಹಳ ವರ್ಗಾಯಿಸಲಾಗಿದೆ. ಹಾಡುಗಳಿಗೂ ಸಹ ಇದೇ ರೀತಿ ನೂತನ ತಂತ್ರಜ್ಞಾನ ಅಳವಡಿಸಲಾಗಿದೆ. ನುರಿತ ತಂತ್ರಜ್ಞರನ್ನು ಕರೆಸಿ ಅವರಿಂದ ಈಗಿನ ಆಧುನಿಕ ರೀತಿಯಲ್ಲಿ ಸೌಂಡ್ ಎಫೆಕ್ಟ್ ಅಳವಡಿಸಲಾಗಿದೆ. ಇದಕ್ಕೆಲ್ಲಾ ಬಹಳ ಸಮಯ ಹಾಗೂ ಹಣ ಹಿಡಿದಿದೆ. ಮುನಿಸ್ವಾಮಿ ಅವರು ಯಾವುದೇ ಕೊರತೆ ಬಾರದ ಹಾಗೆ ಎಲ್ಲಾ ಕೆಲಸಗಳನ್ನು ಮಾಡಿದ್ದಾರೆ ಎಂದು ಸಂಗೀತ ನಿರ್ದೇಶಕ ರಾಜೇಶ್ ರಾಮನಾಥ್ ತಿಳಿಸಿದರು.
ನಾನು ಡಾ ವಿಷ್ಣುವರ್ಧನ್ ಅವರ ದೊಡ್ಡ ಅಭಿಮಾನಿ. ಅವರ ಮೇಲಿನ ಪ್ರೀತಿಯಿಂದ “ಯಜಮಾನ” ಚಿತ್ರವನ್ನು ಈಗಿನ ತಂತ್ರಜ್ಞಾನವನ್ನು ಅಳವಡಿಸಿ ಮರು ಬಿಡುಗಡೆ ಮಾಡುತ್ತಿದ್ದೇನೆ. ನವೆಂಬರ್ 7 ರಂದು 150 ಕ್ಕೂ ಹೆಚ್ಚು ಕಡೆ ಬಿಡುಗಡೆಯಾಗಲಿದೆ. ದಯವಿಟ್ಟು ಎಲ್ಲರೂ ಚಿತ್ರಮಂದಿರಗಳಲ್ಲೇ ಈ ಚಿತ್ರವನ್ನು ವೀಕ್ಷಿಸಿ ಎಂದರು ಮರು ಬಿಡುಗಡೆ ಮಾಡುತ್ತಿರುವ ಮುನಿಸ್ವಾಮಿ.
25 ವರ್ಷಗಳ ಹಿಂದೆ ‘ಯಜಮಾನ’ ಸಿನಿಮಾ ಬಿಡುಗಡೆ ಆದಾಗ ಹಳ್ಳಿಗಳಿಂದ ಟ್ರ್ಯಾಕ್ಟರ್ಗಳಲ್ಲಿ ಜನರು ನಗರ, ಪಟ್ಟಣಗಳಿಗೆ ಬಂದು ಸಿನಿಮಾ ನೋಡಿಕೊಂಡು ಹೋಗಿದ್ದರು. ಇಡೀ ರಾಜ್ಯದಾದ್ಯಂತ ಬಲು ಅದ್ಧೂರಿ ಪ್ರದರ್ಶನವನ್ನು ‘ಯಜಮಾನ’ ಸಿನಿಮಾ ಕಂಡಿತ್ತು. ಮತ್ತೆ ಅದೇ ಮ್ಯಾಜಿಕ್ ಅನ್ನು ಪುನರಾವರ್ತನೆ ಮಾಡಬಹುದೇ ಸಿನಿಮಾ?
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:53 pm, Tue, 4 November 25




