ಹೊಸ ಹೀರೋಗಳಿಗೆ ಬೆಂಬಲ ನೀಡಿದ ಧ್ರುವ ಸರ್ಜಾ: ‘ದಿ ಟಾಸ್ಕ್’ ಹಾಡು ಬಿಡುಗಡೆ
‘ಸಾಗುವ ದಾರಿಯ ತುಂಬಾ’ ಹಾಡು ಸೇಮಿ ರ‍್ಯಾಪ್ ಶೈಲಿಯಲ್ಲಿ ಮೂಡಿಬಂದಿದೆ. ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ. ಈ ಹಾಡಿಗೆ ರಾಘು ಶಿವಮೊಗ್ಗ ಮತ್ತು ಚೇತನ್ ನಾಯ್ಕ್ ಅವರು ಧ್ವನಿಯಾಗಿದ್ದಾರೆ. ಜೂಡಾ ಸ್ಯಾಂಡಿ ಅವರು ಸಂಗೀತ ನೀಡಿದ್ದಾರೆ. ಜಯಸೂರ್ಯ ಆರ್. ಅಜಾದ್ ಮತ್ತು ಸಾಗರ್ ರಾಮ್ ಅವರು ಮುಖ್ಯ ಭೂಮಿಕೆಯಲ್ಲಿ ನಟಿಸಿದ ಈ ಸಿನಿಮಾ ಶೀಘ್ರ ತೆರೆಕಾಣಲಿದೆ.

ಹೊಸ ನಟರು ಮುಖ್ಯ ಪಾತ್ರದಲ್ಲಿ ಅಭಿನಯಿಸಿರುವ ‘ದಿ ಟಾಸ್ಕ್’ ಸಿನಿಮಾ (The Task Movie) ಟೈಟಲ್ ಮತ್ತು ಟೀಸರ್ ಮೂಲಕ ಈಗಾಗಲೇ ಸಿನಿಪ್ರಿಯರಲ್ಲಿ ಕುತೂಹಲ ಹೆಚ್ಚಿಸಿದೆ. ನವೆಂಬರ್ 21ರಂದು ಈ ಸಿನಿಮಾ ತೆರೆಗೆ ಬರಲಿದೆ. ಈಗ ‘ದಿ ಟಾಸ್ಕ್’ ಸಿನಿಮಾದ ಹಾಡು ಬಿಡುಗಡೆ ಮಾಡಲಾಗಿದೆ. ಸಾಂಗ್ ರಿಲೀಸ್ ಕಾರ್ಯಕ್ರಮ ಬೆಂಗಳೂರಿನ ಕಲಾವಿದರ ಸಂಘದಲ್ಲಿ ನಡೆಯಿತು. ‘ಆ್ಯಕ್ಷನ್ ಪ್ರಿನ್ಸ್’ ಧ್ರುವ ಸರ್ಜಾ (Dhruva Sarja) ಅವರು ಮುಖ್ಯ ಅತಿಥಿಯಾಗಿ ಬಂದು ‘ಸಾಗುವ ದಾರಿಯ ತುಂಬಾ’ ಎಂಬ ಸೇಮಿ ರ‍್ಯಾಪ್ ಹಾಡನ್ನು ರಿಲೀಸ್ ಮಾಡಿ ಶುಭ ಕೋರಿದರು.
ಧ್ರುವ ಸರ್ಜಾ ಅವರು ಹಾಡಿನ ಬಗ್ಗೆ ಮಾತನಾಡಿದರು. ‘ಸಾಂಗ್ ಬಹಳ ಪ್ರಾಮಿಸಿಂಗ್ ಆಗಿದೆ. ಸ್ಯಾಂಡಿ ಸರ್ ಯೂನಿಕ್ ಆಗಿ ಮ್ಯೂಸಿಕ್ ಕೊಟ್ಟಿದ್ದಾರೆ. ಎಲ್ಲರಿಗೂ ಈ ಸಾಂಗ್ ಇಷ್ಟ ಆಗುತ್ತದೆ. ಟಾಸ್ಕ್ ಟೀಸರ್ ನೋಡಿದರೆ ಆ್ಯಕ್ಷನ್ ಥ್ರಿಲ್ಲರ್ ಎನಿಸುತ್ತದೆ. ಸಿನಿಮಾ ನೋಡಬೇಕು ಎಂಬ ನಿರೀಕ್ಷೆ ಹುಟ್ಟುಹಾಕುತ್ತದೆ. ನಾವು ನಮ್ಮ ಸ್ನೇಹಿತರ ಜೊತೆ ಫಸ್ಟ್ ಡೇ ಫಸ್ಟ್ ಶೋ ಹೋಗಿ ನಿಮಗೆ ಕರೆ ಮಾಡುತ್ತೇನೆ. ಈ ಸಿನಿಮಾದಿಂದ ಇಬ್ಬರು ಹೊಸ ಹೀರೋಗಳು ಲಾಂಚ್ ಆಗುತ್ತಿದ್ದಾರೆ. ನವೆಂಬರ್ 21ಕ್ಕೆ ಎಲ್ಲ ಕನ್ನಡ ಕಲಾಭಿಮಾನಿಗಳು ಈ ಸಿನಿಮಾ ನೋಡಿ ಆಶೀರ್ವಾದ ಮಾಡಿ’ ಎಂದು ಅವರು ಹೇಳಿದರು.
ಈ ಸಿನಿಮಾಗೆ ರಾಘು ಶಿವಮೊಗ್ಗ ಅವರು ನಿರ್ದೇಶನ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ‘ದಿ ಟಾಸ್ಕ್ ಟೀಸರ್ ಮತ್ತು ಹಾಡು ನೀವೆಲ್ಲ ನೋಡಿದ್ದೀರಿ. ನಾನು ಏನು ಮಾತನಾಡಬೇಕು ಎಂಬುದನ್ನು ಸಿನಿಮಾ ಮುಖಾಂತರ ಹೇಳುತ್ತೇನೆ. ಈ ಸಿನಿಮಾ ನಿರ್ಮಾಣ ಆಗಲು ಮುಖ್ಯ ಕಾರಣ ವಿಜಯ್ ಕುಮಾರ್, ರಾಮಣ್ಣ, ರಾಜೇಶ್ ಹಾಗೂ ನರೇಂದ್ರ ಬಾಬು ಅವರಿಗೆ ಧನ್ಯವಾದಗಳು’ ಎಂದರು.
‘ಸಾಗುವ ದಾರಿಯ ತುಂಬಾ’ ಹಾಡು:
‘ಚೂರಿಕಟ್ಟೆ’ ಮೂಲಕ ಭರವಸೆ ಮೂಡಿಸಿದ ರಾಘು ಶಿವಮೊಗ್ಗ ಅವರು ಈಗ ‘ದಿ ಟಾಸ್ಕ್’ ಸಿನಿಮಾಗೆ ನಿರ್ದೇಶನ ಮಾಡಿರುವುದರಿಂದ ನಿರೀಕ್ಷೆ ಇದೆ. ಈ ಚಿತ್ರದಲ್ಲಿ ‘ಭೀಮ’ ಸಿನಿಮಾ ಖ್ಯಾತಿಯ ಜಯಸೂರ್ಯ ಆರ್. ಅಜಾದ್ ಹಾಗೂ ‘ಪೆಂಟಗನ್’ ಖ್ಯಾತಿಯ ಸಾಗರ್ ರಾಮ್ ಅವರು ನಟಿಸಿದ್ದಾರೆ. ಬಾಲ ನಟಿ ಬೇಬಿ ಶ್ರೀಲಕ್ಷ್ಮಿ ಕೂಡ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಇದನ್ನೂ ಓದಿ: ನವೆಂಬರ್ 21ಕ್ಕೆ ರಿಲೀಸ್ ಆಗಲಿದೆ ‘ದಿ ಟಾಸ್ಕ್’ ಸಿನಿಮಾ: ಟೀಸರ್ ಹೇಗಿದೆ ನೋಡಿ
‘ಲೋಕಪೂಜ್ಯ ಪಿಕ್ಚರ್ ಹೌಸ್’ ಮೂಲಕ ನಿರ್ಮಾಪಕ ವಿಜಯ್ ಕುಮಾರ್ ಮತ್ತು ರಾಮಣ್ಣ ಅವರು ‘ದಿ ಟಾಸ್ಕ್’ ಸಿನಿಮಾ ನಿರ್ಮಾಣ ಮಾಡಿದ್ದಾರೆ. ರಾಘು ಶಿವಮೊಗ್ಗ ಅವರು ನಿರ್ದೇಶನದ ಜವಾಬ್ದಾರಿಯ ಜೊತೆಗೆ ಒಂದು ಮುಖ್ಯ ಪಾತ್ರವನ್ನು ಕೂಡ ನಿರ್ವಹಿಸಿದ್ದಾರೆ. ಅಚ್ಯುತ್ ಕುಮಾರ್, ಶ್ರೀಲಕ್ಷ್ಮೀ, ಗೋಪಾಲಕೃಷ್ಣ ದೇಶಪಾಂಡೆ, ಹರಿಣಿ ಶ್ರೀಕಾಂತ್, ಅರವಿಂದ್ ಕುಪ್ಳಿಕರ್, ಸಂಪತ್ ಮೈತ್ರಿಯಾ, ಬಿ.ಎಂ. ಗಿರಿರಾಜ್, ಬಾಲಾಜಿ ಮನೋಹರ್ ಮುಂತಾದವರು ಪಾತ್ರವರ್ಗದಲ್ಲಿ ಇದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




