ದರ್ಶನ್ ಪತ್ನಿ, ಮಗನ ಬಗ್ಗೆ ಅಶ್ಲೀಲ ಪೋಸ್ಟ್: ಪೊಲೀಸರಿಗೆ ಮಹಿಳಾ ಆಯೋಗ ಪತ್ರ

ಸೋಶಿಯಲ್ ಮೀಡಿಯಾದಲ್ಲಿ ಕೆಲವು ಕಿಡಿಗೇಡಿಗಳು ಅಸಭ್ಯವಾಗಿ ಕಮೆಂಟ್ ಮಾಡುತ್ತಿದ್ದಾರೆ. ದರ್ಶನ್ ಪತ್ನಿ ಹಾಗೂ ಪುತ್ರನ ಬಗ್ಗೆ ಅಶ್ಲೀಲ ಪೋಸ್ಟ್ ಮಾಡಿದವರ ವಿರುದ್ಧ ದೂರು ನೀಡಲಾಗಿದೆ. ಅಂಥವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಪೊಲೀಸ್ ಆಯುಕ್ತರಿಗೆ ಮಹಿಳಾ ಆಯೋಗ ಪತ್ರ ಬರೆದಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

ದರ್ಶನ್ ಪತ್ನಿ, ಮಗನ ಬಗ್ಗೆ ಅಶ್ಲೀಲ ಪೋಸ್ಟ್: ಪೊಲೀಸರಿಗೆ ಮಹಿಳಾ ಆಯೋಗ ಪತ್ರ
Darshan Family

Updated on: Aug 28, 2025 | 8:41 PM

ಸಾಮಾಜಿಕ ಜಾಲತಾಣದಲ್ಲಿ ಸೆಲೆಬ್ರಿಟಿಗಳನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಸ್ಟಾರ್ ನಟರನ್ನು ಮಾತ್ರವಲ್ಲದೇ ಅವರ ಕುಟುಂಬದವರ ಬಗ್ಗೆಯೂ ಅಸಭ್ಯವಾಗಿ ಪೋಸ್ಟ್ ಮಾಡಲಾಗುತ್ತಿದೆ. ಇಂಥ ಕಿಡಿಗೇಡಿಗಳ ವಿರುದ್ಧ ಈಗಾಗಲೇ ರಮ್ಯಾ ಮುಂತಾದವರು ಕಾನೂನಿನ ಕ್ರಮ ಕೈಗೊಂಡಿದ್ದಾರೆ. ಈಗ ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ (Vijayalakshmi Darshan) ಹಾಗೂ ಮಗ ವಿನೀಶ್ ಬಗ್ಗೆ ಅಸಭ್ಯ, ಅಶ್ಲೀಲ ಪೋಸ್ಟ್ ಹಾಕಿದವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಪೊಲೀಸರಿಗೆ ಮಹಿಳಾ ಆಯೋಗ (Women Commission) ಪತ್ರ ಬರೆದಿದೆ. ಆಯೋಗಕ್ಕೆ ಬಂದ ದೂರಿನ ಆಧಾರದ ಮೇಲೆ ಕ್ರಮ ತೆಗೆದುಕೊಂಡು ವರದಿ ಸಲ್ಲಿಸುವಂತೆ ಪೊಲೀಸ್ ಆಯುಕ್ತರಿಗೆ ಮಹಿಳಾ ಆಯೋಗ ಸೂಚಿಸಿದೆ.

ನೆಲಮಂಗಲದ ಭಾಸ್ಕರ್ ಪ್ರಸಾದ್ ಅವರು ಮಹಿಳಾ ಆಯೋಗಕ್ಕೆ ದೂರು ನೀಡಿದ್​ದಾರೆ. ‘ವಿಜಯಲಕ್ಷ್ಮೀ ದರ್ಶನ್ ಹಾಗೂ ಇವರ ಮಗನ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸಿ ಮಾನಸಿಕ ಕಿರುಕುಳ ನೀಡುತ್ತಿರುವುದಲ್ಲದೇ, ಸಾಮಾಜಿಕ ಜಾಲತಾಣಗಳಲ್ಲಿ ಹೆಣ್ಣಿನ ಸ್ವಾಭಿಮಾನ ಹಾಗೂ ಗೌರವಕ್ಕೆ ಧಕ್ಕೆ ತರುವಂತಹ ಪೋಸ್ಟ್ ಮಾಡುವವರ ವಿರುದ್ದ ಕಾನೂನು ಕ್ರಮ ಜರುಗಿಸಿ ನ್ಯಾಯ ಹಾಗೂ ರಕ್ಷಣೆ ಒದಗಿಸಿ’ ಎಂದು ಮಹಿಳಾ ಆಯೋಗಕ್ಕೆ ಅವರು ಮನವಿ ಮಾಡಿದ್ದಾರೆ.

‘ಅರ್ಜಿದಾರರ ಅರ್ಜಿಯನ್ನು ನಿಯಮಾನುಸಾರ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಂಡು, ಕೈಗೊಂಡ ಕ್ರಮದ ವರದಿಯನ್ನು ಆಯೋಗಕ್ಕೆ 15 ದಿನಗಳ ಓಳಗಾಗಿ ಸಲ್ಲಿಸುವಂತೆ ಕೋರಿದೆ’ ಎಂದು ಮಹಿಳಾ ಆಯೋಗದ ಅಧ್ಯಕ್ಷರಾದ ನಾಗಲಕ್ಷ್ಮಿ ಅವರು ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ರಮ್ಯಾಗೆ ಅಶ್ಲೀಲವಾಗಿ ಕಮೆಂಟ್ ಮಾಡಿದವರ ವಿರುದ್ಧವೂ ಕ್ರಮ ಕೈಕೊಳ್ಳುವಂತೆ ಈ ಮೊದಲು ಮಹಿಳಾ ಆಯೋಗ ಪತ್ರ ಬರೆದಿತ್ತು.

ಎಲ್ಲರ ಕೈಯಲ್ಲೂ ಸೋಶಿಯಲ್ ಮೀಡಿಯಾ ಇದೆ. ನಕಲಿ ಅಕೌಂಟ್​​​ಗಳ ಮೂಲಕ ಕಮೆಂಟ್ ಮಾಡುವ ಲಕ್ಷಾಂತರ ಮಂದಿ ಇದ್ದಾರೆ. ಅಂಥವರಿಂದ ಅಸಭ್ಯವಾದ ಮತ್ತು ಅಶ್ಲೀಲವಾದ ಕಮೆಂಟ್​​ಗಳು ಬರುತ್ತಿವೆ. ಕಿಡಿಗೇಡಿಗಳಿಗೆ ಬುದ್ಧಿ ಕಲಿಸಲು ಮಹಿಳೆಯರು ಮುಂದಾಗಿದ್ದಾರೆ. ರಮ್ಯಾ ಅವರು ದೂರು ನೀಡಿದ ಬಳಿಕ ಕೆಲವರನ್ನು ಅರೆಸ್ಟ್ ಮಾಡಲಾಯಿತು.

ಇದನ್ನೂ ಓದಿ: ‘ಖಂಡಿತವಾಗಿಯೂ ನ್ಯಾಯ ಗೆಲ್ಲುತ್ತದೆ’: ದರ್ಶನ್ ಕೇಸ್ ಬಗ್ಗೆ ರಾಗಿಣಿ ಪ್ರತಿಕ್ರಿಯೆ

ಪವಿತ್ರಾ ಗೌಡಗೆ ರೇಣುಕಾಸ್ವಾಮಿ ಅಶ್ಲೀಲವಾಗಿ ಮೆಸೇಜ್ ಮಾಡಿದ್ದರಿಂದಲೇ ದೊಡ್ಡ ದುರಂತ ನಡೆದುಹೋಯಿತು. ಆ ಪ್ರಕರಣದಿಂದ ಜನರು ಪಾಠ ಕಲಿಯಬೇಕಿತ್ತು. ಆದರೆ ರೇಣುಕಾಸ್ವಾಮಿಯ ಕೃತ್ಯವನ್ನು ಖಂಡಿಸುವವರು ಕೂಡ ಅಶ್ಲೀಲವಾಗಿ ಬೇರೆಯವರಿಗೆ ಕಮೆಂಟ್ ಮಾಡಿದ್ದು ವಿಪರ್ಯಾಸ. ಸ್ಟಾರ್ ನಟರ ಕೆಲವು ಅಭಿಮಾನಿಗಳು ಇಂಥ ಕೃತ್ಯ ಎಸಗುತ್ತಿದ್ದಾರೆ. ಅಂಥವರಿಗೆ ಪೊಲೀಸರು ಪಾಠ ಕಲಿಸಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.