‘ಕಥೆಯ ಬಗ್ಗೆ ಏನೂ ಹೇಳಲ್ಲ, ಸಿನಿಮಾನೇ ಮಾತನಾಡುತ್ತದೆ’; ‘ಕಾಂತಾರ ಚಾಪ್ಟರ್ 1’ ಬಗ್ಗೆ ರಿಷಬ್ ಶೆಟ್ಟಿ ಮಾತು

| Updated By: ರಾಜೇಶ್ ದುಗ್ಗುಮನೆ

Updated on: Nov 27, 2023 | 2:26 PM

’ಹಿಂದೆ ಏನು ನಡೆಯಿತು ಎಂದು ಹೇಳಲು ಹೊರಟಿದ್ದೇವೆ. ದೊಡ್ಡ ಯಶಸ್ಸು ಸಿಕ್ಕಿರುವುದರಿಂದ ನಮ್ಮ ಜವಾಬ್ದಾರಿ ಹೆಚ್ಚಿದೆ. ಇನ್ನೂ ಒಳ್ಳೆಯ ಕೆಲಸ ಮಾಡುವ ಪ್ರಯತ್ನದಲ್ಲಿ ನಾವಿದ್ದೇವೆ’ ಎಂದಿದ್ದಾರೆ ರಿಷಬ್ ಶೆಟ್ಟಿ.

‘ಕಥೆಯ ಬಗ್ಗೆ ಏನೂ ಹೇಳಲ್ಲ, ಸಿನಿಮಾನೇ ಮಾತನಾಡುತ್ತದೆ’; ‘ಕಾಂತಾರ ಚಾಪ್ಟರ್ 1’ ಬಗ್ಗೆ ರಿಷಬ್ ಶೆಟ್ಟಿ ಮಾತು
ರಿಷಬ್ ಶೆಟ್ಟಿ
Follow us on

ರಿಷಬ್ ಶೆಟ್ಟಿ (Rishab Shetty) ಅವರು ‘ಕಾಂತಾರ’ ಚಿತ್ರದಿಂದ ದೊಡ್ಡ ಗೆಲುವು ಕಂಡಿದ್ದಾರೆ. ಈ ಸಿನಿಮಾ ಸೂಪರ್ ಸಕ್ಸಸ್ ಕಂಡಿದೆ. ಈಗ ಚಿತ್ರದ ಪ್ರಿಕ್ವೆಲ್ ಬಗ್ಗೆ ಚರ್ಚೆ ಶುರುವಾಗಿದೆ. ‘ಕಾಂತಾರ ಚಾಪ್ಟರ್ 1’ ಚಿತ್ರದ ಪೋಸ್ಟರ್ ರಿಲೀಸ್ ಆಗಿದೆ. ಕುಂದಾಪುರದ ಆನೆಗುಡ್ಡೆ ದೇವಸ್ಥಾನದಲ್ಲಿ ಸಿನಿಮಾಗೆ ಪೂಜೆ ಕೂಡ ನಡೆದಿದೆ. ಈ ಚಿತ್ರದ ಬಗ್ಗೆ ರಿಷಬ್ ಶೆಟ್ಟಿ ಅವರು ಮಾತನಾಡಿದ್ದಾರೆ. ಸಿನಿಮಾದ ಕಥೆಯ ಬಗ್ಗೆ ಮಾತನಾಡಲು ಅವರು ನಿರಾಕರಿಸಿದ್ದಾರೆ.

‘ಕಾಂತಾರದ ಮೊದಲ ಅಧ್ಯಾಯದ ಶೂಟಿಂಗ್ ಪ್ರಾರಂಭಿಸಲಿದ್ದೇವೆ. ಕಾಂತಾರ ಚಿತ್ರವನ್ನು ಎಲ್ಲರೂ ಸಕ್ಸಸ್ ಮಾಡಿದ್ದೀರಿ. ಕಾಂತಾರ ಪಯಣ ಈ ಮೂಲಕ ಮುಂದುವರಿಯಲಿದೆ. ಹಿಂದೆ ಏನು ನಡೆಯಿತು ಎಂದು ಹೇಳಲು ಹೊರಟಿದ್ದೇವೆ. ದೊಡ್ಡ ಯಶಸ್ಸು ಸಿಕ್ಕಿರುವುದರಿಂದ ನಮ್ಮ ಜವಾಬ್ದಾರಿ ಹೆಚ್ಚಿದೆ. ಇನ್ನೂ ಒಳ್ಳೆಯ ಕೆಲಸ ಮಾಡುವ ಪ್ರಯತ್ನದಲ್ಲಿ ನಾವಿದ್ದೇವೆ’ ಎಂದಿದ್ದಾರೆ ರಿಷಬ್ ಶೆಟ್ಟಿ.

‘ನನಗೆ ಆನೆಗುಡ್ಡೆ ಎಂದರೆ ತುಂಬಾ ಭಕ್ತಿ. ವಿಜಯ್ ಕಿರಗಂದೂರು ಅವರು ಕೂಡ ಇಲ್ಲಿಗೆ ನಿರಂತರವಾಗಿ ಬರುತ್ತಾರೆ. ಬೆಂಗಳೂರಿನಿಂದ ಅವರು ಇಲ್ಲಿಗೆ ಬಂದು ನಮಸ್ಕರಿಸಿ ಹೋಗುತ್ತಾರೆ. ಹಾಗಾಗಿ ಕಳೆದ ಬಾರಿಯೂ ಇಲ್ಲೇ ಮುಹೂರ್ತ ಮಾಡಿದ್ದೆವು. ಆನೆಗುಡ್ಡೆ ಗಣಪತಿ ದೇವರ ಆಶೀರ್ವಾದ ತೆಗೆದುಕೊಂಡು ಕೆಲಸ ಶುರು ಮಾಡುತ್ತಿದ್ದೇವೆ. ಮುಂದಿನ ತಿಂಗಳು ಶೂಟಿಂಗ್ ಆರಂಭ ಆಗಲಿದೆ. ಸಿಂಪಲ್ ಆಗಿ ಪೂಜೆ ಮಾಡಿ ಹೋಗೋಣ ಎಂದು ಬಂದಿದ್ದೇವೆ’ ಎಂದಿದ್ದಾರೆ ರಿಷಬ್ ಶೆಟ್ಟಿ.

ಇದನ್ನೂ ಓದಿ:Kantara Chapter 1: ಉಗ್ರ ರೂಪದಲ್ಲಿ ದರ್ಶನ ನೀಡಿದ ರಿಷಬ್ ಶೆಟ್ಟಿ; ಇದು ಬೇರೆಯದೇ ಕಥೆ..

‘ಈ ಚಿತ್ರದ ಬಗ್ಗೆ ಏನೂ ಹೇಳಲ್ಲ. ಮಾತಿಗಿಂತ ಕೆಲಸ ಮುಖ್ಯ. ಮುಂದಿನ ದಿನಗಳಲ್ಲಿ ಸಿನಿಮಾನೇ ಮಾತಾಡುತ್ತದೆ. ಕರಾವಳಿ ಭಾಗಕ್ಕೆ ಸಂಬಂಧಪಟ್ಟ ಕಥೆಯನ್ನು ಇದು ಹೊಂದಿದೆ. ಈ ಭಾಗದ ಲೊಕೇಶನ್​ಗಳಲ್ಲೇ ಶೂಟ್ ಮಾಡುತ್ತೇವೆ. ಸದ್ಯಕ್ಕೆ ನಾನು ಮಾತ್ರ ಸಿನಿಮಾದಲ್ಲಿದ್ದೇನೆ. ಉಳಿದ ಪಾತ್ರಗಳ ಆಯ್ಕೆ ನಡೆಯಬೇಕು. ಕನ್ನಡದವರಿಗೆ ಹೆಚ್ಚಿನ ಆದ್ಯತೆ ಕೊಡುತ್ತೇವೆ. ಇದರ ಜೊತೆಗೆ ಸ್ಥಳೀಯ ಹೊಸ ಮುಖಗಳಿಗೆ ಅವಕಾಶ ನೀಡುತ್ತೇವೆ. ಕರಾವಳಿ ಸೇರಿದಂತೆ ಕರ್ನಾಟಕದ ಬೇರೆ ಬೇರೆ ಭಾಗಗಳಿಂದ ಕಲಾವಿದರನ್ನು ಬಳಸಿಕೊಳ್ಳುತ್ತೇವೆ’ ಎಂದಿದ್ದಾರೆ ಅವರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 2:08 pm, Mon, 27 November 23