‘ಪರಮೇಶ ಪಾನ್​ವಾಲ’ ನಟಿ ಸುರ್ವೀನ್​ ಚಾವ್ಲಾಗೆ ಹಲವು ಬಾರಿ ಕಾಸ್ಟಿಂಗ್​ ಕೌಚ್​ ಕಾಟ; ಕೆಟ್ಟ ಅನುಭವ ತೆರೆದಿಟ್ಟಿದ್ದ ನಟಿ

| Updated By: ಮದನ್​ ಕುಮಾರ್​

Updated on: Jun 25, 2021 | 12:21 PM

ಸಿನಿಮಾ ಕೆಲಸ ಮುಗಿಯುವವರೆಗೆ ನೀವು ಸಹಕರಿಸಿದರೆ ಸಾಕು. ಆಮೇಲೆ ಬೇಡವಾದರೆ ನಿಲ್ಲಿಸಬಹುದು ಎಂದು ಸುರ್ವೀನ್​ ಚಾವ್ಲಾಗೆ ಆಫರ್​ ನೀಡಲಾಗಿತ್ತು. ಹಿಂದಿ ಚಿತ್ರರಂಗದಲ್ಲೂ ಅವರಿಗೆ ಇಂಥ ಅನುಭವ ಆಗಿವೆ.

‘ಪರಮೇಶ ಪಾನ್​ವಾಲ’ ನಟಿ ಸುರ್ವೀನ್​ ಚಾವ್ಲಾಗೆ ಹಲವು ಬಾರಿ ಕಾಸ್ಟಿಂಗ್​ ಕೌಚ್​ ಕಾಟ; ಕೆಟ್ಟ ಅನುಭವ ತೆರೆದಿಟ್ಟಿದ್ದ ನಟಿ
ಸುರ್ವೀನ್​ ಚಾವ್ಲಾ
Follow us on

ಎಲ್ಲ ಭಾಷೆಯ ಚಿತ್ರರಂಗದಲ್ಲಿ ನಟಿಯರಿಗೆ ಕಾಸ್ಟಿಂಗ್​ ಕೌಚ್​ ಎಂಬುದು ದೊಡ್ಡ ಪಿಡುಗಿನಂತೆ ಕಾಡುತ್ತದೆ. ಅವಕಾಶ ಸಿಗಬೇಕು ಎಂದರೆ ತಮ್ಮ ಜೊತೆ ‘ಕಾಂಪ್ರಮೈಸ್’​ ಆಗಬೇಕು ಎಂಬ ಅಲಿಖಿತ ನಿಯಮವನ್ನು ಕೆಲವು ನಿರ್ದೇಶಕ/ನಿರ್ಮಾಪಕರು ಜಾರಿ ಮಾಡಿರುತ್ತಾರೆ. ಅದಕ್ಕೆ ಒಪ್ಪಿಕೊಳ್ಳುವ ನಟಿಯರಿಗೆ ಒಳ್ಳೆಯ ಅವಕಾಶ ಸಿಗುತ್ತದೆ. ಅಂಥ ಆಮಿಷವನ್ನು ತಿರಸ್ಕರಿಸಿ ಬಂದ ನಟಿಯರು ಹಲವರಿದ್ದಾರೆ. ಕನ್ನಡದಲ್ಲಿ ಶಿವರಾಜ್​ಕುಮಾರ್​ ಜೊತೆ ‘ಪರಮೇಶ ಪಾನ್​ವಾಲಾ’ ಸಿನಿಮಾದಲ್ಲಿ ನಟಿಸಿದ್ದ ಸುರ್ವೀನ್ ಚಾವ್ಲಾ ಅವರು ದಕ್ಷಿಣ ಭಾರತದಲ್ಲಿ ತಮಗಾದ ಕೆಟ್ಟ ಅನುಭವದ ಬಗ್ಗೆ ಈ ಹಿಂದೆ ಹೇಳಿಕೊಂಡಿದ್ದರು.

‘ಪರಮೇಶ ಪಾನ್​ವಾಲಾ’ ಸಿನಿಮಾ ಮೂಲಕವೇ ಸುರ್ವೀನ್ ಚಾವ್ಲಾ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದು. ನಂತರ ಅವರಿಗೆ ತಮಿಳು, ತೆಲುಗು, ಹಿಂದಿ ಮತ್ತು ಪಂಜಾಬಿ ಸಿನಿಮಾಗಳಲ್ಲೂ ಅವಕಾಶ ಸಿಕ್ಕಿತು. ತಮಿಳು ಸಿನಿಮಾವೊಂದರ ನಿರ್ದೇಶಕನಿಂದ ತಮಗಾದ ಕಾಸ್ಟಿಂಗ್​ ಕೌಚ್​ ಅನುಭವದ ಬಗ್ಗೆ ಸುರ್ವೀನ್​ ಚಾವ್ಲಾ ಅವರು ಒಂದು ಸಂದರ್ಶನದಲ್ಲಿ ಬಾಯಿ ಬಿಟ್ಟಿದ್ದರು.

‘ಆ ನಿರ್ಮಾಪಕನಿಗೆ ತಮಿಳು ಬಿಟ್ಟರೆ ಬೇರೆ ಯಾವುದೇ ಭಾಷೆ ಬರುತ್ತಿರಲಿಲ್ಲ. ಹಾಗಾಗಿ ಒಬ್ಬ ಫ್ರೆಂಡ್​ ಮೂಲಕ ನನಗೆ ವಿಷಯ ಮುಟ್ಟಿಸಿದ. ಈ ಸಿನಿಮಾ ಮುಗಿಯುವವರೆಗೆ ಮಾತ್ರ ನೀವು ಅವರ ಜೊತೆ ಸಹಕರಿಸಿದರೆ ಸಾಕು. ಆಮೇಲೆ ಬೇಡದಿದ್ದರೆ ನಿಲ್ಲಿಸಬಹುದು ಎಂದು ಹೇಳಿದ. ಆದರೆ ಆತ ಯಾವುದರ ಬಗ್ಗೆ ಹೇಳುತ್ತಿದ್ದಾನೆ ಎಂಬುದೇ ನನಗೆ ತಿಳಿಯಲಿಲ್ಲ. ಮತ್ತೆ ಮತ್ತೆ ಪ್ರಶ್ನಿಸಿದಾಗ ಅವನ ಉದ್ದೇಶ ಏನು ಎಂಬುದು ಗೊತ್ತಾಯಿತು’ ಎಂದು ಸುರ್ವೀನ್​ ಚಾವ್ಲಾ ಹೇಳಿದ್ದರು.

ವೃತ್ತಿಜೀವದನಲ್ಲಿ ಅವರಿಗೆ ಮೂರು ಭಾರಿ ಇಂಥ ಕೆಟ್ಟ ಅನುಭವ ಆಗಿತ್ತು. ಬರೀ ದಕ್ಷಿಣ ಭಾರತದಲ್ಲಿ ಮಾತ್ರವಲ್ಲದೆ, ಹಿಂದಿ ಚಿತ್ರರಂಗದಲ್ಲೂ ಅವರು ಕಾಸ್ಟಿಂಗ್​ ಕೌಚ್​ ಸಮಸ್ಯೆ ಎದುರಿಸಿದ್ದಾರೆ. ‘ತೀರಾ ಇತ್ತೀಚೆಗೆ ಹೀಗೆ ಆಯಿತು. ಒಬ್ಬ ನಿರ್ದೇಶಕ ನನ್ನ ಎದೆಸೀಳು ಮತ್ತು ತೊಡೆಗಳು ಹೇಗೆ ಕಾಣಿಸುತ್ತವೆ ಅಂತ ನೋಡಲು ಬಯಸಿದ್ದ. ನಾನು ಕೋಪಗೊಂಡು ಅವನ ಆಫೀಸ್​ನಿಂದ ಕಾಲು ಕೀಳಬೇಕಾಯಿತು’ ಎಂದು ಸುರ್ವೀನ್​ ಚಾವ್ಲಾ ಹೇಳಿಕೊಂಡಿದ್ದರು.

2015ರ ವೇಳೆಗೆ ಹಲವು ಸಿನಿಮೋತ್ಸವಗಳಲ್ಲಿ ಪ್ರದರ್ಶನ ಕಂಡು ವಿಮರ್ಶಕರ ಮೆಚ್ಚುಗೆ ಗಳಿಸಿದ ‘ಪಾರ್ಚ್ಡ್​’ ಸಿನಿಮಾದಲ್ಲಿ ಸುರ್ವೀನ್​ ಚಾವ್ಲಾ ಅವರು ವೇಶ್ಯೆ ಪಾತ್ರ ಮಾಡಿದ್ದರು. ತುಂಬ ಬೋಲ್ಡ್​ ಆಗಿ ಕಾಣಿಸಿಕೊಂಡಿದ್ದರು. ಆ ಬಳಿಕ ಅವರು ಹೆಚ್ಚು ಚಿತ್ರಗಳಲ್ಲಿ ನಟಿಸಿಲ್ಲ.

ಇದನ್ನೂ ಓದಿ:

‘ನೀನು ನನ್ನೊಂದಿಗೆ ರಾತ್ರಿ ಕಳೆಯುವುದಿಲ್ಲವೇ?’ ದಕ್ಷಿಣ ಭಾರತದ ನಿರ್ಮಾಪಕನ ನಿಜಮುಖ ಬಯಲು ಮಾಡಿದ ಬಾಲಿವುಡ್​ ನಟಿ

Revathy Sampath: ಲೈಂಗಿಕ ಕಿರುಕುಳ ನೀಡಿದ 14 ಜನರ ಹೆಸರು ಬಹಿರಂಗ ಮಾಡಿ ಸಂಚಲನ ಸೃಷ್ಟಿಸಿದ ನಟಿ ರೇವತಿ